ಶಿಮ್ಲಾ: ದಲಿತ ವೃದ್ಧೆಯೊಬ್ಬರ ಅಂತ್ಯಸಂಸ್ಕಾರಕ್ಕೆ ಚಿತಾಗಾರದಲ್ಲಿ ಕೈಗೊಳ್ಳಲು ಮೇಲ್ಜಾತಿಯವರು ಅವಕಾಶ ನೀಡದ ಕಾರಣ ಅರಣ್ಯದಲ್ಲಿ ನಡೆಸಿದ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದಿದೆ.
ಧಾರಾ ಗ್ರಾಮದ ಶತಾಯುಷಿ ವೃದ್ಧೆ ಅನಾರೋಗ್ಯದಿಂದ ಗುರುವಾರ ಸಾವಿಗೀಡಾಗಿದ್ದರು. ಅಂತ್ಯಕ್ರಿಯೆ ಮೆರವಣಿಗೆ ಮುಗಿಸಿ ಗ್ರಾಮದ ಸಾರ್ವಜನಿಕ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ಒಯ್ದಾಗ ಮೇಲ್ಜಾತಿಯ ಕೆಲವರು ಅಡ್ಡಿಪಡಿಸಿದರು ಎಂದು ವೃದ್ಧೆಯ ಮೊಮ್ಮಗ ತಾಪೆ ರಾಮ ದೂರಿದ್ದಾರೆ.
‘ದೇವತೆಯ ಶಾಪದಿಂದ ಏನಾದರೂ ಕೆಟ್ಟ ಘಟನೆಗಳು ನಡೆದರೆ ನಾವೇ ಜವಾಬ್ದಾರರು ಎಂದು ಬೆದರಿಕೆ ಹಾಕಿದರು. ಹೀಗಾಗಿ, ಸಮೀಪದ ಅರಣ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.
‘ಘಟನೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಯಾರೂ ದೂರು ನೀಡಿಲ್ಲ. ಸತ್ಯಾಸತ್ಯತೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಯುನೂಸ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.