ಮಂಗಳವಾರ, ಆಗಸ್ಟ್ 3, 2021
26 °C

ಮಧ್ಯಪ್ರದೇಶ | ಮರಳಿ ಕಾಂಗ್ರೆಸ್‌ನತ್ತ ಸಿಂಧಿಯಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ಮೂರು ತಿಂಗಳ ಹಿಂದೆಯಷ್ಟೇ ಬೆಂಬಲಿಗರ ಜತೆಗೆ ಬಿಜೆಪಿಗೆ ಸೇರುವ ಮೂಲಕ ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರವನ್ನು ಉರುಳಿಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮರಳಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

‘ಸಿಂಧಿಯಾ ಅವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿದಂತಾಗಿದೆ. ಅವರು ಶೀಘ್ರ ದಲ್ಲೇ ಕಾಂಗ್ರೆಸ್‌ಗೆ ಮರಳಲಿದ್ದಾರೆ’ ಎಂದು ಸಿಂಧಿಯಾ ಅವರ ಆಪ್ತರಲ್ಲಿ ಒಬ್ಬ ರಾದ ಸತ್ಯೇಂದ್ರ ಯಾದವ್‌ ಹೇಳಿದ್ದಾರೆ. ಕಾಂಗ್ರೆಸ್‌ ಅನ್ನು ತ್ಯಜಿಸಿ ಸಿಂಧಿಯಾ ಅವರ ಜತೆಯಲ್ಲೇ ಬಿಜೆಪಿ ಸೇರ್ಪಡೆಯಾಗಿದ್ದ ಯಾದವ್‌ ಅವರು ಈಗಾಗಲೇ ಕಾಂಗ್ರೆಸ್‌ಗೆ ಮರಳಿದ್ದಾರೆ.

2009ರಲ್ಲಿ ಬಿಜೆಪಿ ಸೇರಿದ್ದ ಮಾಜಿ ಸಚಿವ ಬಾಲೇಂದು ಶುಕ್ಲಾ ಅವರು ಇತ್ತೀಚೆಗೆ ಕಾಂಗ್ರೆಸ್‌ಗೆ ಮರಳಿದ್ದರು. ‘ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ’ ಎಂದು ಅವರೂ ಆರೋಪಿಸಿದ್ದರು. ಬಾಲೇಂದು ಅವರು ಸಿಂಧಿಯಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಮಾಧವರಾವ್‌ ಸಿಂಧಿಯಾ ಅವರ ಸ್ನೇಹಿತರಾಗಿದ್ದವರು. ಆದರೆ, ಜ್ಯೋತಿರಾದಿತ್ಯ ಅವರ ಜತೆಗೆ ಅಷ್ಟೊಂದು ಸ್ನೇಹ ಇರಲಿಲ್ಲ.

‘ಗ್ವಾಲಿಯರ್‌–ಚಂಬಲ್‌ ಪ್ರದೇಶದಲ್ಲಿ ಜ್ಯೋತಿರಾದಿತ್ಯ ಅವರು ಅತ್ಯಂತ ಪ್ರಭಾವಿ ನಾಯಕ ಎಂಬುದು ಕಟ್ಟುಕತೆ. ಈಗ ಪರಿಸ್ಥಿತಿ ಬದಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತಿರುವುದೇ ಇದಕ್ಕೆ ಸಾಕ್ಷಿ’ ಎಂದು ಬಾಲೇಂದು ಹೇಳಿದ್ದಾರೆ.

ಬ್ರಾಹ್ಮಣ ಸಮುದಾಯದ, ಗ್ವಾಲಿ ಯರ್‌ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಎನಿಸಿರುವ ಬಾಲೇಂದು ಅವರು ಕಾಂಗ್ರೆಸ್‌ಗೆ ಮರಳಿರುವುದರಿಂದ ಪಕ್ಷದ ಬಲ ವೃದ್ಧಿಸಿದೆ ಎಂದು ಬಣ್ಣಿಸಲಾಗುತ್ತಿದೆ. ಜ್ಯೋತಿರಾದಿತ್ಯ ಅವರ ಪ‍ಕ್ಷಾಂತರದಿಂದ ತೆರವಾಗಿದ್ದ 24 ವಿಧಾನಸಭಾ ಕ್ಷೇತ್ರಗಳಲ್ಲಿ 16 ಕ್ಷೇತ್ರಗಳು ಗ್ವಾಲಿಯರ್‌–ಚಂಬಲ್‌ ಪ್ರದೇಶದಲ್ಲಿ ಬರುತ್ತವೆ.

‘ಕಾಂಗ್ರೆಸ್‌ ತ್ಯಜಿಸಿ, ಸಿಂಧಿಯಾ ಜತೆಗೆ ಬಿಜೆಪಿ ಸೇರಿರುವ ನಾಯಕರಿಗೆ ಬಿಜೆಪಿ ಸಂಸ್ಕೃತಿಗೆ ಒಗ್ಗಿಕೊಳ್ಳಲು ಕಷ್ಟವಾಗುತ್ತಿದೆ. ಅವರು ಕಾಂಗ್ರೆಸ್‌ಗೆ ಮರಳುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.

ಒಂದೆಡೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಂಪುಟ ವಿಸ್ತರಣೆಗೆ ಮೀನಮೇಷ ಎಣಿಸುತ್ತಿದ್ದರೆ,
ಇನ್ನೊಂದೆಡೆ ಸಿಂಧಿಯಾ ಅವರೂ ಮೌನವಾಗಿ ಕುಳಿತಿದ್ದಾರೆ. ಪಕ್ಷಾಂತರಿ ನಾಯಕರ ಎಲ್ಲಾ ಬೇಡಿಕೆಗಳನ್ನು ಈಡೇರಿ ಸಲು ಬಿಜೆಪಿ ನಾಯಕರು ಒಪ್ಪುತ್ತಿಲ್ಲ ಎನ್ನಲಾಗಿದೆ. ತನಗೆ ನಿಷ್ಠರಾಗಿರುವ 10 ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಂಧಿಯಾ ಒತ್ತಾಯಿಸುತ್ತಿದ್ದಾರೆ.ಆದರೆ, ಕಮಲ್‌ನಾಥ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಆರು ಮಂದಿಗೆ ಮಾತ್ರ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು