ಸೋಮವಾರ, ಸೆಪ್ಟೆಂಬರ್ 16, 2019
27 °C

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣದಲ್ಲಿ ಬಿಜೆಪಿ ಕೈವಾಡ? 

Published:
Updated:

ಲಖನೌ: ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಪೊಲೀಸರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಅಪಘಾತ: ಪರಿಸ್ಥಿತಿ ಗಂಭೀರ

ಭಾನುವಾರ ರಾಯ್‌ಬರೇಲಿಯಲ್ಲಿ ಸಂತ್ರಸ್ತೆಯ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಸಂತ್ರಸ್ತೆ ಗಂಭೀರ ಗಾಯಗೊಂಡಿದ್ದು, ಇಬ್ಬರು ಸಂಬಂಧಿಕರು ಮೃತಪಟ್ಟಿದ್ದರು. ಕಾರಿಗೆ ಟ್ರಕ್‌ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಈ ವೇಳೆ ಟ್ರಕ್‌ನ ನಂಬರ್ ಪ್ಲೇಟ್ ಮರೆ ಮಾಡಲಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ ಅವರ ಆರೋಪದ ಮೇರೆಗೆ ಅತ್ಯಾಚಾರದ ಆರೋಪಿ ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಫ್‌ಐಆರ್‌ನಲ್ಲಿ ಬಿಜೆಪಿಯ ಇನ್ನೊಬ್ಬ ನಾಯಕರ ಹೆಸರೂ ಇದೆ.

ಇದನ್ನೂ ಓದಿ: ಉನ್ನಾವ್ ಅತ್ಯಾಚಾರ: ಆರೋಪ ಹೊರಿಸಿದ್ದಕ್ಕಾಗಿ ಬೆಲೆ ತೆರಬೇಕಾಯಿತೇ ಸಂತ್ರಸ್ತೆ?

ಅಪಘಾತ ಪ್ರಕರಣದ ಎಫ್‌ಐಆರ್‌ನಲ್ಲಿ ಆರೋಪಿ ಸಂಖ್ಯೆ -7, ಅರುಣ್ ಸಿಂಗ್ ಎಂಬವರ ಹೆಸರು ಇದೆ. ಅರುಣ್ ಸಿಂಗ್ ಬಿಜೆಪಿ ಕಾರ್ಯಕರ್ತರಾಗಿದ್ದು ಉನ್ನಾವ್‌ನ ಬ್ಲಾಕ್ ಅಧ್ಯಕ್ಷರಾಗಿದ್ದಾರೆ. ಅಷ್ಟೇ ಅಲ್ಲದೆ ಕುಲ್‌ದೀಪ್ ಸೆಂಗಾರ್ ಅವರ ಆಪ್ತರೂ ಆಗಿದ್ದಾರೆ.

2019ರ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದ ಫೋಟೊ, ವಿಡಿಯೊಗಳನ್ನು ನೋಡಿದರೆ ಅರುಣ್ ಸಿಂಗ್ ಅವರು ಅಮಿತ್ ಶಾ ಮತ್ತು ಉನ್ನಾವ್ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರ ಬಳಿ ನಿಂತಿರುವುದು ಕಾಣಿಸುತ್ತದೆ.

ಇದನ್ನೂ ಓದಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ:ಬಿಜೆಪಿ ಶಾಸಕನ ವಿರುದ್ಧ ಕೇಸು ದಾಖಲು

ಉತ್ತರ ಪ್ರದೇಶದ ಸಚಿವ ರಣ್‌ವೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಧುನ್ನೀ ಭಯ್ಯಾ ಅವರ ಅಳಿಯ ಈ ಅರುಣ್ ಸಿಂಗ್. ರಣ್‌ವೇಂದ್ರ ಅವರು ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದಲ್ಲಿ ಕೃಷಿ, ಕೃಷಿ ಶಿಕ್ಷಣ ಮತ್ತು ಅಧ್ಯಯನ ಇಲಾಖೆಯ ಸಚಿವರಾಗಿದ್ದಾರೆ.

ರಣ್‌ವೇಂದ್ರ ಸಿಂಗ್ ಅವರು ಫತೇಫುರ್ ಜಿಲ್ಲೆಯ ಶಾಸಕರಾಗಿದ್ದು, ಸಂತ್ರಸ್ತೆಯ ಕಾರಿಗೆ ಡಿಕ್ಕಿ ಹೊಡೆದಿರುವ ಟ್ರಕ್‌ನ ಮಾಲೀಕ ಇದೇ ಊರಿನವರಾಗಿದ್ದಾರೆ. ಆದಾಗ್ಯೂ, ಈ ಪ್ರಕರಣದಲ್ಲಿ ಸಿಂಗ್ ಅವರ ಪಾತ್ರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.

ಇದನ್ನೂ ಓದಿ: ನನ್ನ ಮನೆಗೆ ಬಂದು ಬೆದರಿಕೆಯೊಡ್ಡಿದ್ದರು: ಉನ್ನಾವ್ ಸಂತ್ರಸ್ತೆಯಿಂದ ಸಿಜೆಐಗೆ ಪತ್ರ

ಅರುಣ್ ಸಿಂಗ್ ಮತ್ತು ಇತರರು ಸಂತ್ರಸ್ತೆಗೆ ಬೆದರಿಕೆಯೊಡ್ಡಿದ್ದು, ಸೆಂಗಾರ್ ವಿರುದ್ಧದ ಪ್ರಕರಣ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು ಎಂದು ಎಫ್‌ಐಆರ್‌ನಲ್ಲಿದೆ.

2018ರಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ಸೆಂಗಾರ್ ಅವರನ್ನು ಭೇಟಿಯಾಗಿದ್ದು, ಈ ವೇಳೆ ಸೆಂಗಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು.ಈ ಆರೋಪದಡಿಯಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸೆಂಗಾರ್‌ನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಉನ್ನಾವ್‌ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ ನಾಳೆ

Post Comments (+)