ಗುರುವಾರ , ನವೆಂಬರ್ 21, 2019
22 °C
1981ರ ವೇತನ ಕಾಯ್ದೆಯಿಂದಾಗಿ ಬೊಕ್ಕಸಕ್ಕೆ ನಷ್ಟ

ಉತ್ತರ ಪ್ರದೇಶ: ಮುಖ್ಯಮಂತ್ರಿ, ಸಚಿವರ ಆದಾಯ ತೆರಿಗೆ ಪಾವತಿಸುವುದು ಸರ್ಕಾರ!

Published:
Updated:

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಸಂಪುಟದ ಇತರ ಸಚಿವರ ಆದಾಯ ತೆರಿಗೆಯನ್ನು ಸರ್ಕಾರದ ಬೊಕ್ಕಸದಿಂದಲೇ ಪಾವತಿಸಲಾಗುತ್ತಿದೆ ಎಂಬ ವಿಚಾರ ಬಹಿರಂಗವಾಗಿದೆ.

ಈ ಕುರಿತು ಪತ್ರಿಕೆಯೊಂದರಲ್ಲಿ ಶುಕ್ರವಾರ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್  ವರದಿ ಮಾಡಿದೆ.

‘ಮುಖ್ಯಮಂತ್ರಿ ಮತ್ತು ಸಚಿವರನ್ನು ಬಡತನದ ಹಿನ್ನೆಲೆಯಿಂದ ಬಂದವರು ಎಂದು ಹಿಂದೆ ಪರಿಗಣಿಸಲಾಗಿತ್ತು. ಅವರಿಗೆ ಬರುವ ಅಲ್ಪ ಆದಾಯದಿಂದ ತೆರಿಗೆ ಪಾವತಿಸುವುದು ಸಾಧ್ಯವಿಲ್ಲದ್ದರಿಂದ ಸರ್ಕಾರವೇ ತೆರಿಗೆ ಪಾವತಿಸುವ ನಿಯಮವನ್ನು ಜಾರಿಗೆ ತರಲಾಗಿತ್ತು’ ಎಂದು ವರದಿ ಉಲ್ಲೇಖಿಸಿದೆ.

ಉತ್ತರ ಪ್ರದೇಶದ ಸಚಿವರ ವೇತನ, ಭತ್ಯೆಗೆ ಸಂಬಂಧಿಸಿದ ಕಾಯ್ದೆಯನ್ನು ವಿಶ್ವನಾಥ್ ಪ್ರತಾಪ್ ಸಿಂಗ್ (ವಿ.ಪಿ.ಸಿಂಗ್)ಅವರು ಮುಖ್ಯಮಂತ್ರಿಯಾಗಿದ್ದಾಗ 1981ರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಆ ಬಳಿಕ ಈವರೆಗೆ ಯೋಗಿ ಆದಿತ್ಯನಾಥ್, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಾಯಾವತಿ, ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ರಾಜನಾಥ್ ಸಿಂಗ್, ಶ್ರೀಪತಿ ಮಿಶ್ರಾ ಸೇರಿದಂತೆ 19 ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಡಳಿತ ನಡೆಸಿದ್ದು, ಕಾಯ್ದೆಯ ಪ್ರಯೋಜನ ಪಡೆದಿದ್ದಾರೆ. ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ತೆರಿಗೆಯನ್ನೂ ಸರ್ಕಾರವೇ ಪಾವತಿಸುತ್ತಿದೆ.

ಈ ಕುರಿತು ಅಭಿಪ್ರಾಯ ಕೇಳಲು ವಿವಿಧ ರಾಜಕೀಯ ಪಕ್ಷಗಳ ವಕ್ತಾರರನ್ನು ಸಂಪರ್ಕಿಸಿದಾಗ ಯಾರೊಬ್ಬರೂ ಪ್ರತಿಕ್ರಿಯಿಸಲು ಮುಂದಾಗಲಿಲ್ಲ ಎಂದೂ ವರದಿ ಹೇಳಿದೆ.

‘ಚರ್ಚೆ ನಡೆಸಿದ ಬಳಿಕ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ವಿ.ಪಿ.ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಯ್ದೆಯನ್ನು ಅನುಷ್ಠಾನಗೊಳಿಸಿದ್ದರೂ ಅದರ ಲಾಭವನ್ನು ಕಾಂಗ್ರೆಸ್ಸೇತರ ಸರ್ಕಾರಗಳಿದ್ದಾಗಲೇ ಹೆಚ್ಚು ಮಂದಿ ಪಡೆದಿದ್ದಾರೆ. 80ರ ದಶಕದ ಆರಂಭದಲ್ಲಿ ಬಡತನದ ಹಿನ್ನೆಲೆಯವರು ರಾಜಕೀಯ ನಾಯಕರಾಗಿದ್ದರು ಮತ್ತು ಅವರ ವೇತನವೂ ಕಡಿಮೆಯಿತ್ತು. ನಂತರ ಬಂದ ಕಾಂಗ್ರೆಸ್ಸೇತರ ಸರ್ಕಾರಗಳು ಮುಖ್ಯಮಂತ್ರಿಗಳ ಹಾಗೂ ಇತರ ಸಚಿವರ ವೇತನ ಹೆಚ್ಚಿಸಿದವು. ಅವರು ಕಾಯ್ದೆಯನ್ನು ರದ್ದುಗೊಳಿಸಬೇಕಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿರುವುದಾಗಿ ವರದಿ ಹೇಳಿದೆ.

ಹೀಗೊಂದು ಕಾಯ್ದೆ ಇರುವ ಬಗ್ಗೆ ಈವರೆಗೂ ತಮಗೆ ತಿಳಿದಿರಲಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ‘ನನ್ನ ಖಾತೆಗಳನ್ನು ಪರಿಶೀಲಿಸಲೂ ನನಗೆ ಸಮಯವಿಲ್ಲ. ಆದರೆ, ಇನ್ನು ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ತೆರಿಗೆ ವ್ಯಾಪ್ತಿಯಲ್ಲಿ ಬರುವ ವೇತನಕ್ಕೆ ಆದಾಯ ತೆರಿಗೆ ಕಾನೂನಿಗೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಮತ್ತು ಅದನ್ನು ಸರ್ಕಾರವೇ ಭರಿಸಬೇಕು ಎಂದು ವೇತನ ಕಾಯ್ದೆಯ ಸಬ್ ಸೆಕ್ಷನ್ (1) ಹಾಗೂ (2)ರಲ್ಲಿ ಹೇಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

1981ರಿಂದ ಈವರೆಗೆ ಉತ್ತರ ಪ್ರದೇಶ ಸರ್ಕಾರವು ಮುಖ್ಯಮಂತ್ರಿಗಳೂ ಸೇರಿದಂತೆ ಸುಮಾರು 1,000 ಸಚಿವರ ಆದಾಯ ತೆರಿಗೆ ಪಾವತಿಸಿದೆ.

ಕಳೆದೆರಡು ಹಣಕಾಸು ವರ್ಷಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಸಂಪುಟ ಸಚಿವರ ಆದಾಯ ತೆರಿಗೆಯನ್ನೂ ಸರ್ಕಾರದ ಬೊಕ್ಕಸದಿಂದಲೇ ಪಾವತಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಲ ಸಚಿವರ ಆದಾಯ ತೆರಿಗೆ ಮೊತ್ತ ಸುಮಾರು ₹ 86 ಲಕ್ಷವನ್ನು ಸರ್ಕಾರ ಪಾವತಿಸಿದೆ.

ವಿಶೇಷವೆಂದರೆ, ಹೆಚ್ಚಿನ ಸಚಿವರು ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನ ಪ್ರಕಾರ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಸಚಿವರ ಆದಾಯ ತೆರಿಗೆಯನ್ನು ಸರ್ಕಾರದ ಬೊಕ್ಕಸದಿಂದಲೇ ಕಡ್ಡಾಯವಾಗಿ ಪಾವತಿಸಬೇಕು ಎಂದು 1981ರ ವೇತನ ಕಾಯ್ದೆಯಲ್ಲಿ ಉಲ್ಲೇಖವಾಗಿರುವುದನ್ನು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ (ಹಣಕಾಸು) ಸಂಜೀವ್ ಮಿತ್ತಲ್ ದೃಢಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)