ಶುಕ್ರವಾರ, ಜೂಲೈ 10, 2020
22 °C

ವಿಶಾಖಪಟ್ಟಣ ಅನಿಲ ಸೋರಿಕೆ ದುರಂತ: ಆರ್.ಆರ್.ವೆಂಕಟಾಪುರಂನಲ್ಲಿ ಸೂತಕದ ಛಾಯೆ

ಪಿಟಿಐ Updated:

ಅಕ್ಷರ ಗಾತ್ರ : | |

vizag

ವಿಶಾಖಪಟ್ಟಣ: ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯಿಂದ ಸ್ಟೈರಿನ್ ಅನಿಲ ಸೋರಿಕೆಯಾಗಿ ಸಂಭವಿಸಿದ ದುರಂತದಲ್ಲಿ  ಆರ್.ಆರ್ ವೆಂಕಟಾಪುರಂ ಗ್ರಾಮದಲ್ಲಿನ  ಕುಟುಂಬವೊಂದರಲ್ಲಿ  5 ವರ್ಷದ ಬಾಲಕ ಮಣಿದೀಪ್ ದೃಷ್ಟಿ ಕಳೆದುಕೊಂಡಿದ್ದಾನೆ. ಆತನ ಅಪ್ಪ ಗೋವಿಂದ ರಾಜು  ಈ ದುರಂತದಲ್ಲಿ ಸಾವಿಗೀಡಾಗಿದ್ದರು. ಅಮ್ಮ ಅಸ್ವಸ್ಥಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋವಿಂದ ರಾಜು ಎಲ್ಜಿ ಘಟಕದಲ್ಲಿ ದಿನಕೂಲಿ ನೌಕರನಾಗಿ ದುಡಿಯುತ್ತಿದ್ದರು. ಮಾಧ್ಯಮಗಳಲ್ಲಿ ಗೋವಿಂದರಾಜು ಅವರ ಫೋಟೊ ನೋಡಿದ ಕುಟುಂಬದವರು ಶುಕ್ರವಾರ ಆಸ್ಪತ್ರೆಗೆ ಬಂದಿದ್ದರು.ಅಪ್ಪ ತೀರಿಹೋದಾಗ ಮಣಿದೀಪ್ ಕಣ್ಣು ತೆರೆಯಲಾರದೆ ಅಸಹಾಯಕನಾಗಿ ಕುಳಿತಿದ್ದ.

ಶನಿವಾರ ಮಣಿದೀಪ್‌ನ್ನು ಎಲ್‌ವಿ ಪ್ರಸಾದ್ ಐ ಇನ್ಸಿಟ್ಯೂಟ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು ಆ ಬಾಲಕ ಕೆಲವು ಹೊತ್ತಿನಲ್ಲಿಯೇ ಕಣ್ಣು ತೆರೆದ. ಆತನ ಕಾಲಿಗೆ ಗಾಯವಾಗಿತ್ತು. ಕಣ್ಣು ತೆರೆದರೂ ಅವನಿಗೆ ನಡೆಯಲು ಸಾಧ್ಯವಾಗಲಿಲ್ಲ. ಅಂತ್ಯ ಸಂಸ್ಕಾರ ನಡೆಸುವ ಮುನ್ನ ಆತನಗೆ ಅಪ್ಪನ ಮೃತದೇಹ ತೋರಿಸಿದ್ದೇವೆ ಎಂದು ಮಣಿದೀಪ್‌ನ ಚಿಕ್ಕಮ್ಮ ಹೇಳಿದ್ದಾರೆ.  

ಗುರುವಾರ ಸಂಭವಿಸಿದ ಅನಿಲ ಸೋರಿಕೆ ದುರಂತದಲ್ಲಿ ಉಸಿರಾಟದ ತೊಂದರೆ ಅನುಭವಿಸಿ ಮಣಿದೀಪ್‌ನ ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತದಲ್ಲಿ 9ರ ಹರೆಯದ ಎನ್‌.ಗ್ರೀಷ್ಮಾ ಎಂಬ ಬಾಲಕಿ ಸಾವಿಗೀಡಾಗಿದ್ದಾಳೆ.ಈಕೆಯ ಹೆತ್ತವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರೀಷ್ಮಾ ಮೃತಪಟ್ಟಿದ್ದಾಳೆ ಆದರೆ  ನಾವು ಈ ಸುದ್ದಿಯನ್ನು ಅಕೆಯ ಅಮ್ಮನಿಗೆ ತಿಳಿಸಿಲ್ಲ.ಮರಣೋತ್ತರ ಪರೀಕ್ಷೆ ನಡೆದು ಶನಿವಾರ ಬೆಳಗ್ಗೆ ಮೃತದೇಹ ನಮಗೆ ಸಿಕ್ಕಿದ ನಂತರವೇ ಆಕೆಗೆ ಮಗಳ ಸಾವಿನ ಸುದ್ದಿ ತಿಳಿಸಿದ್ದು.ಗ್ರೀಷ್ಮಾಳ ಸಹೋದರನೂ ಅಸ್ವಸ್ಥನಾಗಿದ್ದನು. ಆದರೆ ಅವನು ಬೇಗನೆ ಚೇತರಿಸಿಕೊಂಡಿದ್ದು ,ಸಂಬಂಧಿಕರ ಮನೆಗೆ ಆತನನ್ನು ಕಳುಹಿಸಿಕೊಡಲಾಗಿದೆ ಎಂದು ಬಾಲಕಿಯ ಮಾವ ಹೇಳಿದ್ದಾರೆ.

 ಗ್ರೀಷ್ಮಾಳ  ಅಮ್ಮ ಸ್ವಲ್ಪ ಚೇತರಿಸಿಕೊಂಡಿದ್ದು ವೆಂಕಟಾಪುರಂ ಗ್ರಾಮದಲ್ಲಿ ನಡೆದ  ಮಗಳ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಆಕೆ ಎಲ್‌ಜಿ ಘಟಕದ ಗೇಟ್ ಹಾರಿ ಅಲ್ಲಿ ತಪಾಸಣೆ ನಡೆಸುತಿದ್ದ ಪೊಲೀಸ್ ಮಹಾ ನಿರ್ದೇಶಕ ಡಿ.ಜಿ ಸವಾಂಗ್ ಅವರ ಕಾಲಿಗೆ ಬಿದ್ದು ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಈ ಕಾರ್ಖಾನೆ ಮುಚ್ಚಬೇಕು ಎಂದು ಆಕೆ ಕೈಮುಗಿದು ಅತ್ತಿದ್ದಾರೆ.  ಪೊಲೀಸರು ಆಕೆಯನ್ನು  ಸಮಾಧಾನ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ವಿಶಾಖಪಟ್ಟಣದಲ್ಲಿರುವ ದಿ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಹಲವಾರು ಮಂದಿ ಉಸಿರಾಟ ಸಮಸ್ಯೆ, ಕಣ್ಣು ಉರಿ, ಹೊಟ್ಟೆನೋವು ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕೆಜಿಎಚ್ ಆಸ್ಪತ್ರೆಯಲ್ಲಿ 200ಕ್ಕಿಂತಲೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ.

ವಿಶಾಖಪಟ್ಟಣ ಜಿಲ್ಲಾ ಉಸ್ತುವಾರಿ ಸಚಿವ ಕೆ.ಕಣ್ಣ ಬಾಬು ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬದವರಲ್ಲಿ ಮಾತನಾಡಿದ್ದಾರೆ. ಎಲ್ಲ ರೋಗಿಗಳು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಾವು ಯಾರನ್ನೂ ಊರಿಗೆ ಮರಳಲು ಬಿಟ್ಟಿಲ್ಲ, ನಗರದಲ್ಲಿಯೇ ಅವರಿಗೆ ಶಿಬಿರ  ವ್ಯವಸ್ಥೆ ಮಾಡಲಾಗಿದೆ ಎಂದು ಕಣ್ಣ ಬಾಬು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು