ಶನಿವಾರ, ಮೇ 21, 2022
19 °C

ದಲಿತರೆಂದರೆ ಯಾರು, ಮುಸ್ಲಿಮರ ಬಗೆಗಿನ ಕಲ್ಪನೆ ಏನು?: ಪ್ರಶ್ನೆ ಪತ್ರಿಕೆಗೆ ಆಕ್ಷೇಪ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ತಮಿಳುನಾಡಿನಲ್ಲಿ ಕೇಂದ್ರೀಯ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯಲ್ಲಿ ಕೇಳಲಾದ ಜಾತಿ ಮತ್ತು ಧರ್ಮದ ಕುರಿತ ವಿವಾದಾತ್ಮಕ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್‌, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು  ಆಗ್ರಹಿಸಿದ್ದಾರೆ.  

ಪ್ರಶ್ನೆ ಪತ್ರಿಕೆಯಲ್ಲಿ ಎರಡು ವಿವಾದಿತ ಪ್ರಶ್ನೆಗಳನ್ನು ಕೇಳಲಾಗಿದೆ. ‘ದಲಿತರು ಎಂದರೆ ನಿಮ್ಮ ಪ್ರಕಾರ ಯಾರು?‘ ಎಂಬ ಪ್ರಶ್ನೆಗೆ ನಾಲ್ಕು ಉತ್ತರಗಳ ಆಯ್ಕೆ ನೀಡಲಾಗಿದೆ. ಅದರಲ್ಲಿ (ಎ) ವಿದೇಶೀಯರು, (ಬಿ) ಅಸ್ಪೃಶ್ಯರು, (ಸಿ) ಮಧ್ಯಮ ವರ್ಗದವರು, (ಡಿ) ಮೇಲ್ವರ್ಗದವರು ಎಂದು ಉಲ್ಲೇಖಿಸಲಾಗಿದೆ. 

ಇದಿಷ್ಟೇ ಅಲ್ಲದೆ, ಮುಸ್ಲಿಮರ ಬಗೆಗಿನ ಸಾಮಾನ್ಯ ಕಲ್ಪನೆ ಏನು? ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ, ನೀಡಲಾದ ಆಯ್ಕೆಗಳು ಹೀಗಿವೆ... (ಎ) ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದವರು, (ಬಿ) ಶುದ್ಧ ಸಸ್ಯಹಾರಿಗಳು, (ಸಿ) ರೋಜಾ ವೇಳೆ ನಿದ್ದೆಯನ್ನೇ ಮಾಡದವರು, (ಡಿ) ಮೇಲಿನ ಎಲ್ಲವೂ. 

ಈ ಎರಡು ಪ್ರಶ್ನೆಗಳು ಸದ್ಯ ತಮಿಳುನಾಡಿನಲ್ಲಿ ವಿವಾದದ ಕಿಡಿ ಹೊತ್ತಿಸಿವೆ. 

ಈ ಪ್ರಶ್ನೆ ಪತ್ರಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಡಿಎಂಕೆ ನಾಯಕ ಸ್ಟಾಲಿನ್‌, ‘ಕೇಂದ್ರೀಯ ವಿದ್ಯಾಲಯವು ಆರನೇ ತರಗತಿ ವಿದ್ಯಾರ್ಥಿಗಳ ಸಿದ್ಧಪಡಿಸಿರುವ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಜಾತಿ ತಾರತಮ್ಯದ ಮತ್ತು ಧರ್ಮ ವಿಭಜಕದ ಪ್ರಶ್ನೆಗಳು ನನ್ನನ್ನು ಆಘಾತಕ್ಕೀಡು ಮಾಡಿವೆ, ಆತಂಕ ಮಾಡಿಸಿವೆ,’ ಎಂದಿದ್ದಾರೆ. 

‘ಇಂಥ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದವರಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು,’ ಎಂದೂ ಅವರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಟ್ಯಾಗ್‌ ಮಾಡಿದ್ದಾರೆ. 

ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ್ದು ಯಾರು? 

ಈ ಪ್ರಶ್ನೆಗಳು ಕೇಂದ್ರೀಯ ವಿದ್ಯಾಲಯದ ಆರನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾಗಿದೆ. ಕೇಂದ್ರ ಸರ್ಕಾರವೇ ನಡೆಸುವ ಶಾಲೆಯ ಈ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ್ದು ನಿಗಿದಿತ ಶಾಲೆಯೋ ಅಥವಾ ಕೇಂದ್ರ ಸರ್ಕಾರವೋ ಎಂಬುದು ಈ ವರೆಗೆ ಖಚಿತವಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು