ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್‌ ವಿರೋಧಿ ಗಲಭೆಯಲ್ಲಿ ಕಮಲನಾಥ್‌ ಪಾತ್ರವೇನು?

ಮಧ್ಯಪ್ರದೇಶದ ನೂತನ ಸಿಎಂಗೆ ಆರಂಭದಲ್ಲೇ ವಿರೋಧ
Last Updated 14 ಡಿಸೆಂಬರ್ 2018, 7:24 IST
ಅಕ್ಷರ ಗಾತ್ರ

ನವದೆಹಲಿ:ಕಮಲನಾಥ್‌ ಮಧ್ಯಪ್ರದೇಶ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಅಧಿಕೃತ ಘೋಷಣೆ ಮಾಡಿದೆ. ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ ಎಂಬುದು ಖಚಿತವಾಗುತ್ತಿದ್ದಂತೆಯೇ 1984ರ ಸಿಖ್‌ ವಿರೋಧಿ ಗಲಭೆಯಲ್ಲಿ ಕಮಲನಾಥ್ ಪಾತ್ರದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ಕಮಲನಾಥ್‌ ಅವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗುವ ಅವಕಾಶ ನೀಡಬಾರದು ಎಂದು ಆನ್‌ಲೈನ್ ಅಭಿಯಾನ ಒಂದೆಡೆ ಶುರುವಾಗಿದ್ದರೆ ಮತ್ತೊಂದೆಡೆ,ಸಿಖ್‌ ಸಮುದಾಯವೂ ಕಮಲನಾಥ್ ವಿರುದ್ಧ ಧ್ವನಿಯೆತ್ತಿದೆ.ಸಿಖ್‌ ವಿರೋಧಿ ಗಲಭೆಯಸಂಚುಕೋರರನ್ನು ಕಾಂಗ್ರೆಸ್‌ ರಕ್ಷಿಸುತ್ತಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖಂಡ ಮಂಜಿಂದರ್‌ ಸಿಂಗ್‌ ಸಿರ್ಸಾ ಆರೋಪಿಸಿದ್ದಾರೆ.

ಈ ಮಧ್ಯೆ, ಗಲಭೆಕೋರರನ್ನು ತಡೆದದ್ದರಿಂದಲೇಕಮಲನಾಥ್‌ ಅವರನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಪತ್ರಕರ್ತ ಸಂಜಯ್ ಸೂರಿ ಪುಸ್ತಕವೊಂದರಲ್ಲಿ ಬರೆದುಕೊಂಡಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ.ಸಿಖ್‌ ವಿರೋಧಿ ಗಲಭೆಗೆ ಸಂಬಂಧಿಸಿ ಅವರು ಬರೆದಿರುವ ಪುಸ್ತಕದಲ್ಲಿರುವ ಅಂಶಗಳನ್ನು ಸ್ಕ್ರಾಲ್ ಡಾಟ್ ಇನ್ ಸುದ್ದಿತಾಣ ಕೆಲ ವರ್ಷಗಳ ಹಿಂದೆ ಪ್ರಕಟಿಸಿತ್ತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ ದೆಹಲಿಯ ರಕಬ್‌ಗಂಜ್ ಸಾಹೀಬ್ ಗುರುದ್ವಾರದ ಬಳಿ ನಡೆದ ಹಿಂಸಾಚಾರದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂದರ್ಭ ವರದಿಗಾಗಿ ತಾವು ಅಲ್ಲಿಗೆ ತೆರಳಿದ್ದಾಗ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ನವದೆಹಲಿ ರೇಂಜ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ಗೌತಮ್ ಕೌಲ್ಸ್ಥಳದಲ್ಲಿದ್ದರು. ಉದ್ರಿಕ್ತ ಜನ ಗುರುದ್ವಾರದ ಬಳಿ ತೆರಳುತ್ತಿದ್ದಾಗ ಪೊಲೀಸರು ಯಾವುದೇ ಆದೇಶ ಮಾಡಲಿಲ್ಲ. ಆದರೆ, ಆದೇಶ ಮಾಡಿರಲಿಲ್ಲ ಎಂಬುದನ್ನು ಗೌತಮ್ ಕೌಲ್ ನಂತರ ನಿರಾಕರಿಸಿದ್ದರು ಎಂದು ಸೂರಿ ಹೇಳಿಕೊಂಡಿದ್ದಾರೆ.

‘ಕಮಲನಾಥ್ ಅವರು ಗಲಭೆಕೋರರ ನೇತೃತ್ವ ವಹಿಸಿದ್ದನ್ನೂ ನಾನು ನೋಡಿದ್ದೇನೆಯೇ? ಇಲ್ಲ. ಆ ಕುರಿತ ನನ್ನ ಅಫಿಡವಿಟ್ ದುರ್ಬಲ ಎನ್ನುವುದಾದರೆ ಸರಿ. ಆದರೆ, ಕಮಲನಾಥ್ ಅಲ್ಲೇನು ಮಾಡುತ್ತಿದ್ದರು? ಈ ಕುರಿತು ತನಿಖಾ ಆಯೋಗಗಳು ತನಿಖೆ ನಡೆಸಿಲ್ಲ’ ಎಂದು ಸೂರಿ ಬರೆದಿದ್ದಾರೆ.

‘ಒಂದು ಹಂತದಲ್ಲಿ ಗುರುದ್ವಾರದತ್ತ ಮುಂದುವರಿಯುತ್ತಿದ್ದ ಉದ್ರಿಕ್ತರು ಕಮಲನಾಥ್ ಅವರು ಕೈ ಎತ್ತಿ ಸಂಜ್ಞೆ ಮಾಡಿದ್ದರಿಂದ ಹಿಂದೆ ಸರಿದರು. ಆ ಕ್ಷಣದಲ್ಲಿ ಅವರ ಮಧ್ಯಪ್ರವೇಶದಿಂದ ಗುರುದ್ವಾರದತ್ತ ಮುನ್ನಗ್ಗುತ್ತಿದ್ದ ಉದ್ರಿಕ್ತರನ್ನು ತಡೆಯುವುದ ಸಾಧ್ಯವಾಯಿತು.

ಉದ್ರಿಕ್ತರು ಕಮಲನಾಥ್ ಮಾತನ್ನು ಯಾಕೆ ಕೇಳಿದರು? ಪರಿಸ್ಥಿತಿ ಮತ್ತೆ ಹಿಂಸಾರೂಪಕ್ಕೆ ತಿರುಗಿದ್ದು ಯಾಕೆ? ಪೊಲೀಸರು ಒಂದೆಡೆ ಸುಮ್ಮನೆ ನಿಂತಿದ್ದರೆ ಸಂಸದರು ಉದ್ರಿಕ್ತರನ್ನು ನಿಯಂತ್ರಿಸಿದರೇ? ಪೊಲೀಸರ ಯಾವುದೇ ಕ್ರಮಕ್ಕಿಂತಲೂ ಒಬ್ಬ ಕಾಂಗ್ರೆಸ್ ಸಂಸದನ ಮಾತು ಯಾಕೆ ಹೆಚ್ಚು ಪರಿಣಾಮಕಾರಿಯಾಯಿತು? ಗುಂಪುಗೂಡಿದ್ದವರು ಕಮಲನಾಥ್ ಕೈ ಎತ್ತಿ ಸಂಜ್ಞೆ ಮಾಡಿದ್ದರಿಂದಲೇ ಮುಂದುವರಿಯದೆ ಅಲ್ಲೇ ನಿಲ್ಲುವುದಾದರೆ ಕಮಲನಾಥ್ ಮತ್ತು ಗಲಭೆಕೋರರ ನಡುವಣ ಸಂಬಂಧವೇನು?’ ಇತ್ಯಾದಿ ಪ್ರಶ್ನೆಗಳನ್ನೂ ಸೂರಿ ಕೇಳಿದ್ದಾರೆ.

‘ಪಕ್ಷದ ಜತೆ ಸಂಬಂಧವೇ ಇಲ್ಲದ ಜನರು ಸಂಸದರ ಮಾತನ್ನು ಅನುಸರಿಸಿದರು ಅಂದರೆ ಕೇವಲ ಸಂಸದ ಎಂಬ ಕಾರಣಕ್ಕೆ ಗೌರವ ತೋರಿಸಿದರು ಎಂದರ್ಥವೇ? ಅಲ್ಲಿರುವವರು ಅಂತಹ ಗೌರವ ಹೊಂದಿರುವವರು ಎಂದು ಅನ್ನಿಸಲಿಲ್ಲ. ಅಲ್ಲಿ ಅದಾಗಲೇ ಹತ್ಯೆಯಾದವರನ್ನು ಅಥವಾ ಕೊಲೆಯಾದವರನ್ನು ಅವರು ಕೊಲೆ ಮಾಡಿದಂತೆ ಕಾಣಲಿಲ್ಲ. ಆದರೆ ಸಂಸದರು ಸೂಚಿಸಿದ ಮಾತ್ರಕ್ಕೆ ಅವರು ಹಿಂದೆ ಸರಿದರು. ತಮ್ಮ ನಿರ್ದಿಷ್ಟ ನಾಯಕನಲ್ಲದಿದ್ದರೂ ಸಂಸದನು ಒಬ್ಬ ನಾಯಕನಾಗಿರುವುದರಿಂದ ಅವರು ಆತನನ್ನು ಅನುಸರಿಸಿದರೇ? ಕಮಲನಾಥ್ ಅಲ್ಲೇನು ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಅವರು ಅಲ್ಲಿ ಸ್ವಲ್ಪ ಸಮಯ ಇದ್ದರು. ಅವರು ಅಲ್ಲಿದ್ದಷ್ಟೂ ಹೊತ್ತು ಉದ್ರಿಕ್ತರು ಆಕ್ರಮಣಶೀಲರಾಗಿ ಅಲ್ಲಿಯೇ ಇದ್ದರು. ಕಮಲನಾಥ್ ಮತ್ತು ಅಲ್ಲಿದ್ದ ಗುಂಪಿನ ನಡುವೆ ಸಂಬಂಧವಿತ್ತು; ಅವರು ಸೂಚನೆ ನೀಡಿದರು, ಅವರು ಕೇಳಿದರು. ಅವರು ಕಾಂಗ್ರೆಸ್ ಪಕ್ಷದವರಾಗಿದ್ದರಿಂದ ಹಾಗೂ ಕಮಲನಾಥ್ ಅವರನ್ನು ನಾಯಕನೆಂದು ಒಪ್ಪಿದ್ದರಿಂದ ಮಾತ್ರವೇ ಸೂಚನೆಯನ್ನು ಅನುಸರಿಸಿದರೇ ವಿನಹ ಕೇವಲ ಒಬ್ಬ ನಾಯಕ ಎಂಬ ಕಾರಣಕ್ಕಲ್ಲ. ಕೇವಲ ಸಂಸದ ಎಂಬ ಕಾರಣಕ್ಕೆ ಕಮಲನಾಥ್ ಸೂಚನೆ ಅನುಸರಿಸಿದ್ದರು ಎಂಬ ಕಮ್ಯೂನಿಸ್ಟ್ ಪಕ್ಷಗಳ ವಾದವನ್ನು ಒಪ್ಪುವುದಿಲ್ಲ. ಕಮಲನಾಥ್ ಅವರು ತೀನ್ ಮೂರ್ತಿ ಭವನ್ ಬಳಿ ಬಂದಾಗ ಗುಂಪು ಸಹ ಅಲ್ಲಿಗೆ ಬಂದಿತ್ತು. ಕುಸುಮ್ ಲತಾ ಮಿತ್ತಲ್ ವರದಿಯಲ್ಲಿಯೂ ಪೊಲೀಸರ ವೈಫಲ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ ಕಮಲನಾಥ್ ಅವರೇ ಗುರುದ್ವಾರ ದಾಳಿಗೆ ಗುಂಪನ್ನು ಕರೆದುಕೊಂಡು ಹೋದರು ಎಂಬ ತೀರ್ಮಾನಕ್ಕೆ ಬರಲಾಗದು. ಆದರೆ ಅಫಿಡವಿಟ್‌ನಲ್ಲಿ ನಾನು ಹೇಳಿದಂತೆ ಆ ಗುಂಪಿನಲ್ಲಿದ್ದವರು ಕಾಂಗ್ರೆಸ್ ಪಕ್ಷದವರು ಮತ್ತು ಅವರ ಮೇಲೆ ಕಮಲನಾಥ್‌ಗೆ ನಿಯಂತ್ರಣವಿತ್ತು ಎಂಬುದನ್ನು ಸೂಚಿಸುತ್ತದೆ‘ ಎಂದು ಸೂರಿ ಪ್ರತಿಪಾದಿಸಿದ್ದಾರೆ.

ಅಲ್ಲದೆ, ಈ ಕುರಿತು ನಾನಾವತಿ ಆಯೋಗಕ್ಕೆ (ಗಲಭೆಯ ತನಿಖೆಗೆ 2000ನೇ ಇಸವಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ನೇಮಿಸಿದ್ದ ಆಯೋಗ) ತಾವು ಹೇಳಿಕೆ ನೀಡಿದ್ದನ್ನೂ ಕಮಲನಾಥ್ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಆಯೋಗ ಹೇಳಿದ್ದನ್ನೂ ಸೂರಿ ಬರೆದುಕೊಂಡಿದ್ದಾರೆ.

ಬಲವಾದ ಸಾಕ್ಷ್ಯ ಇದೆ ಎಂದ ವಕೀಲ ಫೂಲ್ಕ

ಈ ಮಧ್ಯೆ,ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿ ಕಮಲನಾಥ್‌ ವಿರುದ್ಧ ಬಲವಾದ ಸಾಕ್ಷ್ಯ ಇದೆ ಎಂದು ಎಎಪಿ ಮುಖಂಡ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಎಸ್‌. ಫೂಲ್ಕ ಹೇಳಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿ ನ್ಯಾಯದ ಚಕ್ರ ಇನ್ನಷ್ಟೇ ಅವರ ವಿರುದ್ಧ ತಿರುಗಲಿದೆ ಎಂದು ಅವರು ಹೇಳಿದ್ದಾರೆ.ಫೂಲ್ಕ ಅವರು ಸಿಖ್‌ ವಿರೋಧಿ ಗಲಭೆ ಸಂತ್ರಸ್ತರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ.

ನಾನ್ಯಾಕೆ ಕ್ಷಮೆ ಕೇಳಲಿ: ಕಮಲನಾಥ್

2016ರ ಜೂನ್‌ನಲ್ಲಿಕಮಲನಾಥ್ ಅವರು ಪಂಜಾಬ್‌ನಲ್ಲಿ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮರುದಿನ ಎನ್‌ಡಿಟಿವಿ ಜತೆ ಮಾತನಾಡಿದ್ದ ಅವರು, ಸಿಖ್‌ ವಿರೋಧಿ ಗಲಭೆಗೆ ಸಂಬಂಧಿಸಿ ನಾನ್ಯಾಕೆ ಕ್ಷಮೆ ಕೇಳಬೇಕು? ಗಲಭೆ ತಡೆಯಲು ಸಹಕಾರ ನೀಡಿದ್ದಕ್ಕಾಗಿ ನನ್ನನ್ನು ಶ್ಲಾಘಿಸಬೇಕು ಎಂದು ಹೇಳಿಕೊಂಡಿದ್ದರು. ‘ನಮಗೆ ಇನ್ನಷ್ಟು ಪಡೆಗಳ ಅಗತ್ಯವಿದೆ, ಹೆಚ್ಚಿನ ಪಡೆ ಬರುವವರೆಗೂ ಸ್ವಲ್ಪ ಹೊತ್ತು ಅವರನ್ನು (ಗಲಭೆಕೋರರನ್ನು) ಮಾತನಾಡುತ್ತಾ ನಿಭಾಯಿಸಿ ಎಂದು ಪೊಲೀಸರು ಕೇಳಿಕೊಂಡಿದ್ದರು’ ಎಂದು ಕಮಲನಾಥ್ ಹೇಳಿದ್ದರು. ಅಲ್ಲದೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT