ಶನಿವಾರ, ಜೂನ್ 6, 2020
27 °C

ಮಮತಾ ಬ್ಯಾನರ್ಜಿ ಆಪ್ತ, ಯಾರು ಈ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೋಲ್ಕತ್ತ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಲು ಬಂದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಭಾನುವಾರ ಪಶ್ಚಿಮ ಬಂಗಾಳದಲ್ಲಿ ನಡೆದಿತ್ತು.

ಸಿಬಿಐ ಅಧಿಕಾರಿಗಳನ್ನು ಪೊಲೀಸರು ಆನಂತರ ಬಿಡುಗಡೆ ಮಾಡಿದ್ದರೂ, ಸಿಬಿಐ ಮತ್ತು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಭಾನುವಾರ ತಡರಾತ್ರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಏನಿದು ಪ್ರಕರಣ?
ರೋಸ್‌ ವ್ಯಾಲಿ, ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದ ಕಡತ ಮತ್ತು ದಾಖಲೆ ಕಣ್ಮರೆಯಾದ ಬಗ್ಗೆ ಪ್ರಶ್ನಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್‌ ಸ್ಟ್ರೀಟ್‌ನಲ್ಲಿರುವ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ನಿವಾಸಕ್ಕೆ ತೆರಳಿತ್ತು. 

ಯಾರು ಈ ರಾಜೀವ್  ಕುಮಾರ್?
ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಐಐಟಿ ರೂರ್ಕಿಯಲ್ಲಿ ಕಂಪ್ಯೂಟರ್ ಸಯನ್ಸ್ ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ. ಟ್ರೈನಿಯಾಗಿದ್ದಾಗ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 11 ಕಿಮೀ ಓಟದಲ್ಲಿ ಅತಿ ವೇಗದ ಓಟಗಾರನಾಗಿ ಪ್ರಥಮ ಸ್ಥಾನ ಗಿಟ್ಟಿಸಿದ ಟ್ರೈನಿ. ಕೋಲ್ಕತ್ತದಲ್ಲಿರುವ ಸಚಿವಾಲಯದಲ್ಲಿ ಸ್ವಂತ ಕಚೇರಿ ಹೊಂದಿರುವ ಮೊದಲ ಪೊಲೀಸ್ ಅಧಿಕಾರಿ! 

ಶಾರದಾ- ರೋಸ್ ವ್ಯಾಲಿ ಚಿಟ್‍ಫಂಡ್ ಪ್ರಕರಣದ ವಿಚಾರಣೆಗ ಬಂದ ಸಿಬಿಐ ಅಧಿಕಾರಿಗಳನ್ನು ಕೋಲ್ಕತ್ತ ಪೊಲೀಸರು ವಶ ಪಡಿಸಿದ ಘಟನೆಯೊಂದಿಗೆ ರಾಜೀವ್ ಕುಮಾರ್ ಅವರ ಹೆಸರು ಹೆಚ್ಚು ಗಮನ ಸೆಳೆಯಿತು.

ಉತ್ತರ ಪ್ರದೇಶ ಮೂಲದ ರಾಜೀವ್ ಕುಮಾರ್ 1989 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಪತ್ನಿ ಇಂಡಿಯನ್ ರೆವೆನ್ಯೂ ಸರ್ವೀಸ್ ಅಧಿಕಾರಿ.

ಈ ಹಿಂದೆಯೂ ಸುದ್ದಿಯಾಗಿದ್ದರು ರಾಜೀವ್ ಕುಮಾರ್
2016  ವಿಧಾನಸಭಾ ಚುನಾವಣೆಯ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜೀವ್ ಕುಮಾರ್  ವಿರುದ್ಧ ಆರೋಪ ಮಾಡಿದ್ದರು. ರಾಜೀವ್ ಕುಮಾರ್ ವಿಪಕ್ಷ  ನೇತಾರರ ಮೇಲೆ ನಿಗಾ ಇರಿಸಿ, ಅವರ ಕೆಲಸಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಅಮಿತ್  ಶಾ ದೂರಿದ್ದರು. ಹಾಗಾಗಿ ರಾಜೀವ್  ಕುಮಾರ್ ಅವರನ್ನು ದೂರವಿರಿಸಬೇಕೆಂದು ಅಮಿತ್ ಶಾ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. 

ಇಲೆಕ್ಟ್ರಾನಿಕ್ ಉಪಕರಣಗಳ ಮೂಲಕ ನಿಗಾ ಇರಿಸುವ ಚತುರತೆ ರಾಜೀವ್ ಕುಮಾರ್‌ಗೆ ಕೋಲ್ಕತ್ತ ಪೊಲೀಸ್ ಪಡೆಯಲ್ಲಿ ಪ್ಲಸ್ ಪಾಯಿಂಟ್ ಆಗಿತ್ತು. ಈ ಹಿಂದೆ ಸಿಐಡಿ ಸ್ಪೆಷಲ್ ಎಸ್‍ಪಿ ಆಗಿದ್ದಾಗ ರಾಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ಮಾವೋವಾದಿಗಳ ವಿರುದ್ಧದ ದಾಳಿ ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತ್ತು.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷದ ಆಡಳಿತವಿದ್ದಾಗ ಎಡಪಕ್ಷ ಸರ್ಕಾರಕ್ಕೆ ಸಹಾಯ ಮಾಡಲು ವಿಪಕ್ಷಗಳ ಕೆಲಸದಲ್ಲಿ ಮಧ್ಯ ಪ್ರವೇಶಿಸಿ, ಅಲ್ಲಿಂದ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಇದೇ ರಾಜೀವ್  ಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಆದರೆ ಮಮತಾ ಸರ್ಕಾರ ಅಧಿಕಾರಕ್ಕೇರಿದಾಗ ರಾಜೀವ್ ಕುಮಾರ್, ಮಮತಾ ಅವರ ಆಪ್ತರಾಗಿ ಬಿಟ್ಟರು.

ಇದನ್ನೂ ಓದಿ

ಮೋದಿ ವಿರುದ್ಧ ದೀದಿ ಸಡ್ಡು; ಧರಣಿ ಸ್ಥಳದಲ್ಲೇ ಸಂಪುಟ ಸಭೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು