ಗುರುವಾರ , ಮಾರ್ಚ್ 4, 2021
25 °C

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧ ಏಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ತಂದ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಹಿಂಸಾಚಾರ ವ್ಯಾಪಕವಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧ ಯಾಕಿಷ್ಟು ಗಟ್ಟಿಯಾಗಿದೆ ಎಂಬುದರ ಹಿಂದಿನ ಕಾರಣಗಳು ಇಲ್ಲಿವೆ.   

ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರವಾಗಿದ್ದು ಏಕೆ?

1951ರಿಂದ 1971ರ ಅವಧಿಯಲ್ಲಿ ಅಸ್ಸಾಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಹಲವರು ಅಸ್ಸಾಂನಲ್ಲಿ ನೆಲೆಸಲು ಆರಂಭಿಸಿದರು. ಇವರ ಸಂಖ್ಯೆ ಹೆಚ್ಚಾದ್ದರಿಂದ ರಾಜ್ಯದ ಪ್ರತಿಭಟನೆಗಳು ಹೆಚ್ಚಾಗುತ್ತಲೇ ಇವೆ. ವಲಸಿಗರು ಮತ್ತು ಮೂಲ ನಿವಾಸಿಗಳನ್ನು ಪತ್ತೆ ಮಾಡಲು ಒತ್ತಾಯಿಸಿ 1980ರಲ್ಲಿ ನಡೆದ ಅಸ್ಸಾಂ ಚಳವಳಿಯಲ್ಲಿ ಸುಮಾರು 800 ಮಂದಿ ಜೀವ ಕಳೆದುಕೊಂಡರು. ಕೇಂದ್ರ ಸರ್ಕಾರ ಮತ್ತು ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ, ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್‌ ನಡುವೆ 1985ರಲ್ಲಿ ನಡೆದ ಒಪ್ಪಂದಿಂದಾಗಿ ಪರಿಸ್ಥಿತಿ ತಿಳಿಯಾಗಿತ್ತು. ಈ ಒಪ್ಪಂದದ ಪ್ರಕಾರ 1971ರ ಮಾರ್ಚ್‌ 24ರ ನಂತರ ಅಸ್ಸಾಂನಲ್ಲಿ ನೆಲೆಸಿದ ವಲಸಿಗರನ್ನು ಗಡಿಪಾರು ಮಾಡಬೇಕೆಂದು ನಿರ್ಧರಿಸಲಾಗಿತ್ತು. ಈಗ ಈ ಪೌರತ್ವ (ತಿದ್ದುಪಡಿ) ಕಾಯಿದೆ ಜಾರಿಗೆ ತಂದಿರುವುದರಿಂದ ಒಪ್ಪಂದವನ್ನು ಮುರಿಯಲಾಗಿದೆ ಎಂದು ಹಲವು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎನ್‌ಆರ್‌ಸಿ–ಸಿಎಎ ಹೇಗೆ ಭಿನ್ನ?

ಎನ್‌ಆರ್‌ಸಿ

ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಮೊದಲಿಗೆ ಅಸ್ಸಾಂನಲ್ಲಿ ಜಾರಿಗೆ ತರಲಾಯಿತು. ಭಾರತದ ಎಲ್ಲ ನಾಗರಿಕರ ಹೆಸರುಗಳನ್ನು ಇದರಲ್ಲಿ ಸೇರ್ಪಡೆ ಮಾಡುವುದು ಉದ್ದೇಶವಾಗಿತ್ತು. ಬಾಂಗ್ಲಾದೇಶದ ಅಕ್ರಮ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ಅಸ್ಸಾಂನಲ್ಲಿ ನೆಲೆಸುತ್ತಿದ್ದುದರಿಂದ ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದರಿಂದ ಅಸ್ಸಾಂನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ 3.29 ಕೋಟಿ ಜನರ ಪೈಕಿ ಸುಮಾರು 19 ಲಕ್ಷ ಅರ್ಜಿಗಳು ನಕಲಿಯಾಗಿದ್ದವು. ಸೂಕ್ತ ದಾಖಲೆಗಳಿಲ್ಲದೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಸೂಕ್ತ ದಾಖಲೆಗಳಿಲ್ಲದವರನ್ನು ಬಂಧನ ಕೇಂದ್ರಗಳಿಗೆ (ಡಿಟೆನ್ಷನ್ ಸೆಂಟರ್ಸ್‌) ದೂಡಲಾಗುತ್ತಿದೆ. ಎನ್‌ಆರ್‌ಸಿಯನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಸಿಎಎ

ಪೌರತ್ವ (ನೋಂದಣಿ) ಕಾಯಿದೆ ಮೂಲಕ ಬಾಂಗ್ಲಾದೇಶ, ಆಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿನ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಇದರಿಂದ ಅಕ್ರಮವಾಗಿ ನೆಲೆಸಿರುವವರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ದೊರೆಯುತ್ತದೆ. ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಛತ್ತೀಸಗಡದ ಮುಖ್ಯಮಂತ್ರಿಗಳು ಈ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲೂ ಅಸ್ಸಾಮಿಗರ ಪ್ರತಿಭಟನೆ

ಪೌರತ್ವ (ತಿದ್ದುಪಡಿ) ಕಾಯಿದೆ ವಿರೋಧಿಸಿ ಪುರಭವನದ ಮುಂದೆ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಸ್ಸಾಂ ಭಾಷಿಕರು ಭಾಗವಹಿಸಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದರು. ‘ಜೈ ಹೋ ಅಸ್ಸಾಂ’, ‘ಕಾಯ್ದೆಯನ್ನು ನಾವು ಒಪ್ಪುವುದಿಲ್ಲ’ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅಸ್ಸಾಮಿಗರ ಸಂಖ್ಯೆ

ಸುಮಾರು 2 ಲಕ್ಷ ಅಸ್ಸಾಮಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಾಗಿದ್ದಾರೆ.

ಸಂಪರ್ಕಕ್ಕೆ

l ಅಸ್ಸಾಂ ಅಸೋಷಿಯೇಷನ್, ಬೆಂಗಳೂರು, ಕೇಂಬ್ರಿಜ್ ಲೇಔಟ್‌. ಮೊ–9880016282.
ಇ ಮೇಲ್– assamassociationblr@gmail.com.

l ಅಸ್ಸಾಂ ಸೊಸೈಟಿ, ಬೆಂಗಳೂರು: ಕೋರಮಂಗಲ. ಮೊ–8892942382.
ಇ ಮೇಲ್– info@assamsocietybangalore.com.

ಬೆಂಗಳೂರಿನಲ್ಲಿ ನೆಲಸಿರುವ ಕೆಲವು ಪ್ರಮುಖರು

ಜಾಹ್ನವಿ ಬರೂರ (ಸಾಹಿತಿ), ಜೊನಾಲಿ ಸೈಕಿಯಾ ಮತ್ತು ಜಿನ್ನಿಯಾ ಪುಖಾನ್ (ಫ್ಯಾಶನ್ ಡಿಸೈನರ್ಸ್‌), ಖಣೀಂದ್ರ ಬರ್ಮನ್‌ (ವರ್ಫೆಲ್ ಕುಚೆ ಸಂಸ್ಥಾಪಕ), ಮೃಗಾಂಕ ದೇಕ (ಪಾರ್ಕಿಂಗ್‌ರೈನೊ ಸಂಸ್ಥಾಪಕ).

ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಟ್ವೀಟ್‌

‘ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ಭಾರತ ಮುಸಲ್ಮಾನರು ಆತಂಕ ಪಡುವ ಅಗತ್ಯವಿಲ್ಲ. ಭಯದ ವಾತಾವರಣ ಸೃಷ್ಟಿಸುವ ಮಾತುಗಳಿಗೆ, ವದಂತಿಗೆ ಕಿವಿಗೊಡಬೇಡಿ. ಭಾರತದ ಎಲ್ಲ ಪ್ರಜೆಗಳು ಸಮಾನರು’ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. 

*ವಿಷಯ ಸಂಗ್ರಹ: ಸುರುಪಶ್ರೀ ಸರಮಾ, ರಜಿತಾ ಮೆನನ್, ತಮನ್ನಾ ಯಾಸ್ಮಿನ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು