ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗುತ್ತಿದೆಯೇ ಕಮ್ಯುನಿಸ್ಟರ ಶಕ್ತಿ?

Last Updated 9 ಮಾರ್ಚ್ 2019, 17:55 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯಂತ ದೊಡ್ಡ ಎಡಪಕ್ಷವಾದ ಸಿಪಿಎಂ ಗೆಲ್ಲುತ್ತಿರುವ ಸ್ಥಾನಗಳ ಸಂಖ್ಯೆ ಎರಡು ಲೋಕಸಭಾ ಚುನಾವಣೆಗಳಿಂದ ಕುಗ್ಗುತ್ತಲೇ ಇದೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ 19 ರಾಜ್ಯಗಳಿಂದ ಸಿಪಿಎಂ ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಪಕ್ಷ ಇನ್ನಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತದೆಯೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಈ ಬಾರಿ ಚುನಾವಣೆ ಎದುರಿಸಲು ಹಲವು ರಾಜ್ಯಗಳಲ್ಲಿ ಮೈತ್ರಕೂಟದ ಮೊರೆ ಹೋಗಲು ಸಿಪಿಎಂ ಚಿಂತನೆ ನಡೆಸುತ್ತಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಮೈತ್ರಿ ರೂಪುಗೊಂಡಿದೆ. ಹಲವು ರಾಜ್ಯಗಳಲ್ಲಿ ಮಾತುಕತೆ ನಡೆಯುತ್ತಿದೆ. ಕಳೆದುಕೊಳ್ಳುತ್ತಿರುವ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಲು ಮೈತ್ರಿ ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಪಕ್ಷದ ನಾಯಕರು ಬಂದಿದ್ದಾರೆ.

2014ರ ಚುನಾವಣೆಯಲ್ಲಿ ಗೆದ್ದಿರುವ 9 ಸ್ಥಾನಗಳನ್ನು ಉಳಿಸಿಕೊಳ್ಳಲು ಸಿಪಿಎಂ ಗಮನ ಕೇಂದ್ರೀಕರಿಸಿದೆ. ಹೀಗಾಗಿ 9ಕ್ಕಿಂತ ಹೆಚ್ಚು ಸ್ಥಾನಗಳು ಬಂದರೆ ಅದು ಬೋನಸ್ ಎಂದು ಪಕ್ಷದ ಮೂಲಗಳು ಅಭಿಪ್ರಾಯಪಟ್ಟಿವೆ.

‘ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಪ್ರಮಾಣ ಕಡಿಮೆಯಾಗುತ್ತಿರಬಹುದು. ಆದರೆ ದೇಶದಲ್ಲಿ ಬಿಜೆಪಿ ವಿರೋಧಿ ಕಾರ್ಯಸೂಚಿಯನ್ನು ಹುಟ್ಟುಹಾಕಿದ ಶ್ರೇಯ ಸಿಪಿಎಂಗೆ ಸಲ್ಲುತ್ತದೆ’ ಎನ್ನುತ್ತಾರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ.

‘ನಿರುದ್ಯೋಗ ಮತ್ತು ರೈತರ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಚಳವಳಿಯ ರೂಪ ನೀಡಿದ್ದು ಸಿಪಿಎಂ. ಮಹಾರಾಷ್ಟ್ರ ಮತ್ತು ಮದ್ಯಪ್ರದೇಶದಲ್ಲಿ ಕಳೆದ ವರ್ಷ ರೈತರ ಎರಡು ಬೃಹತ್ ರ‍್ಯಾಲಿಗಳನ್ನು ಸಂಘಟಿಸಿದ್ದನ್ನು ಯಾರೂ ಮರೆಯುವುದಿಲ್ಲ’ ಎಂದು ಯೆಚೂರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈತ್ರಿಗೆ ಮುಂದಾದ ಎಡಪಕ್ಷ

*2014ರ ಚುನಾವಣೆಯಲ್ಲಿ ಸಿಪಿಎಂ ಕೇರಳದಲ್ಲಿ 14ರಲ್ಲಿ ಸ್ಪರ್ಧಿಸಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 16ರಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಆದರೆ ಐದು ಸ್ಥಾನಗಳನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಗಮನ
ನೀಡುತ್ತಿದೆ

*ತ್ರಿಪುರಾದಲ್ಲಿ 2 ಸ್ಥಾನಗಳಲ್ಲಿ ಗೆದ್ದಿದೆ. ಆದರೆ ಈ ಚುನಾವಣೆಯಲ್ಲಿ ಆ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಸಿಪಿಎಂ ಬಂದಿದೆ. ಹೀಗಾಗಿ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ

*ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಸಿಪಿಎಂ ಸ್ಥಾನ ಪಡೆದಿದೆ. ಸಿಪಿಎಂಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡಲು ಡಿಎಂಕೆ ಒಪ್ಪಿಕೊಂಡಿದೆ. ಕಾಂಗ್ರೆಸ್ ಸಹ ಈ ಮೈತ್ರಿಕೂಟದಲ್ಲಿದೆ

*ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜತೆ ಸಿಪಿಎಂ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಪಕ್ಷವು ಸ್ಪರ್ಧಿಸಲಿದೆ

*ಬಿಹಾರದಲ್ಲಿ ಆರ್‌ಜೆಡಿ ಜತೆ ಪಕ್ಷವು ಮೈತ್ರಿಗೆ ಮುಂದಾಗಿದ್ದು, ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ

* ಪಶ್ಚಿಮ ಬಂಗಾಳದಲ್ಲಿ ಸಿಪಿಎಂ 1999ರಲ್ಲಿ 21, 2004ರಲ್ಲಿ 26, 2009ರಲ್ಲಿ 9 ಮತ್ತು 2014ರಲ್ಲಿ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈಗ ರಾಜ್ಯದಲ್ಲಿಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿಪಿಎಂ ಸಿದ್ಧವಿದೆ. ಆದರೆ ಕಾಂಗ್ರೆಸ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT