ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಕಮಲಹಾಸನ್‌

7
‘ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿಗೆ ಮುಕ್ತ’

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಕಮಲಹಾಸನ್‌

Published:
Updated:

ಚೆನ್ನೈ: ‘2019ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಮಕ್ಕಳ್‌ ನೀದಿ ಮೈಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಹಾಗೂ ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇದೇ ಮೊದಲ ಬಾರಿಗೆ ದೃಢಪಡಿಸಿರುವ ಅವರು, ‘ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತವಿದ್ದೇವೆ’ ಎಂದು ಪಕ್ಷದ ಕಾರ್ಯಕಾರಿಣಿ ಮತ್ತು ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಚೆನ್ನೈನಲ್ಲಿ ಶನಿವಾರ ಹೇಳಿದ್ದಾರೆ.

‘ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚಿಸಲಾಗಿದೆ. ನಾನೂ ಸಹ ಸ್ಪರ್ಧಿಸಲಿದ್ದೇನೆ. ನಮ್ಮ ಪಕ್ಷದ ಪ್ರಚಾರವು ರಾಜ್ಯದ ಅಭಿವೃದ್ಧಿಗೆ ಕೇಂದ್ರೀಕೃತವಾಗಿರುತ್ತದೆ’ ಎಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಚುಣಾವಣೆ ಸಂದರ್ಭದಲ್ಲಿ ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ತಮಿಳುನಾಡಿನ ಡಿಎನ್‌ಎ ಬದಲು ಮಾಡಲು ಮುಂದಾಗಿರುವ ಪಕ್ಷದೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿಕೂಟದ ನೇತೃತ್ವ ವಹಿಸುವುದು ಅಥವಾ ಮತ್ತೊಬ್ಬರ ನೇತೃತ್ವದ ಮೈತ್ರಿಕೂಟದಲ್ಲಿ ಸೇರುವುದರ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ನಮ್ಮೊಂದಿಗೆ ಮಾತುಕತೆ ನಡೆಸುವ ಪಕ್ಷಗಳ ಮೇಲೆ ಅದು ಅವಲಂಬಿತವಾಗಿರುತ್ತದೆ’ ಎಂದು ಹೇಳಿದರು.

ಕಮಲ್‌ ಹಾಸನ್‌ ಅವರು ಎಂಎನ್‌ಎಂ ಪಕ್ಷವನ್ನು ಫೆಬ್ರುವರಿಯಲ್ಲಿ ಸ್ಥಾಪಿಸಿದ್ದು, ಜೂನ್‌ ತಿಂಗಳಲ್ಲಿ ಪಕ್ಷದ ನೋಂದಣಿಗೆ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ವಿರುದ್ಧ ಟೀಕೆಗಳನ್ನು ಸಹ ಮಾಡಿದ್ದರು. ಇದರಿಂದ ಅವರು ಕಾಂಗ್ರೆಸ್‌ ಜೊತೆಗೆ ಕೈಜೋಡಿಸಲಿದ್ದಾರೆ ಎಂಬ ಊಹಾಪೋಹ ತಮಿಳುನಾಡಿನಲ್ಲಿ ವ್ಯಾಕವಾಗಿ ಹಬ್ಬಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !