ಬುಧವಾರ, ಜನವರಿ 22, 2020
18 °C

‘ರೇಪ್‌ ಇನ್ ಇಂಡಿಯಾ’ ಹೇಳಿಕೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Rahul Gandhi

ನವದೆಹಲಿ: ಜಾರ್ಖಂಡ್ ಚುನಾವಣಾ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ನೀಡಿದ್ದ ‘ರೇಪ್ ಇನ್ ಇಂಡಿಯಾ’ ಹೇಳಿಕೆಯು ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಬಿಜೆಪಿ ಸಂಸದರು ರಾಹುಲ್ ವಿರುದ್ಧ ಹರಿಹಾಯ್ದರು. ಗೊಂದಲದ ಗೂಡಾದ ಸದನವನ್ನು ಹಲವು ಬಾರಿ ಮುಂದೂಡಬೇಕಾಯಿತು.

‘ಭಾರತೀಯ ಮಹಿಳೆ ಮೇಲೆ ಅತ್ಯಾಚಾರವಾಗಬೇಕು ಎಂದು ನಾಯಕರೊಬ್ಬರು ಇದೇ ಮೊದಲ ಬಾರಿಗೆ ಹೇಳುತ್ತಿದ್ದಾರೆ. ಇದು ಭಾರತದ ಜನರಿಗೆ ರಾಹುಲ್ ಗಾಂಧಿ ಅವರ ಸಂದೇಶವೇ? ಅವರಿಗೆ ಶಿಕ್ಷೆಯಾಗಲೇಬೇಕು’  ಎಂದು ಎಂದು ಸ್ಮೃತಿ ಇರಾನಿ ಲೋಕಸಭೆಯಲ್ಲಿ ಆಗ್ರಹಿಸಿದರು.

ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

ರಾಹುಲ್ ಗಾಂಧಿ ಅವರಿಗೆ ಪ್ರತಿಕ್ರಿಯೆ ನೀಡಲು ಸ್ಪೀಕರ್ ಅವಕಾಶ ಕೊಡಲಿಲ್ಲ. ಸದನದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಕ್ಷಮೆ ಕೇಳುವುದಿಲ್ಲ. ನಾನು ಏನು ಹೇಳಿದೆ ಎನ್ನುವುದನ್ನು ವಿವರಿಸಲು ಅವಕಾಶ ಕೊಡಿ. ನರೇಂದ್ರ ಮೋದಿ ಅವರು ಮೇಕ್‌ ಇನ್ ಇಂಡಿಯಾ ಬಗ್ಗೆ ಮತನಾಡುತ್ತಲೇ ಇರುತ್ತಾರೆ. ಆದರೆ ದಿನಪತ್ರಿಕೆಗಳ ಪುಟ ಬಿಡಿಸಿದಾಗ ನಮಗೆ ಕೇವಲ ಅತ್ಯಾಚಾರದ ಸುದ್ದಿಯೇ ಕಾಣಿಸುತ್ತದೆ. ನಾನು ಹೇಳಿದ್ದು ಇಷ್ಟೇ’ ಎಂದು ರಾಹುಲ್ ಸ್ಪಷ್ಟಪಡಿಸಿದರು.

ಈಶಾನ್ಯ ಭಾರತದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಳತ್ತ ಜನರ ಲಕ್ಷ್ಯ ಹೋಗದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.

‘ಭಾರತದಲ್ಲಿರುವ ಎಲ್ಲ ಪುರುಷರೂ ಅತ್ಯಾಚಾರಿಗಳಲ್ಲ. ನಿಮ್ಮ ಹೇಳಿಕೆಗೆ ಭಾರತದ ಗೌರವಕ್ಕೆ ಧಕ್ಕೆ ತಂದಿದೆ. ರಾಹುಲ್ ಅವರ ವಯಸ್ಸು 50 ಸಮೀಪಿಸುತ್ತಿದ್ದರೂ ಇಂಥ ಹೇಳಿಕೆಗಳ ಪರಿಣಾಮ ಅವರಿಗೆ ಅರ್ಥವಾಗುತ್ತಿಲ್ಲ. ಇಂಥ ಹೇಳಿಕೆಗಳು ಅತ್ಯಾಚಾರಕ್ಕೆ ಪ್ರೇರಣೆಯಾಗುತ್ತವೆ’ ಎಂದು ಸ್ಮೃತಿ ಇರಾನಿ ಲೋಕಸಭೆಯಲ್ಲಿ ನುಡಿದರು. ಇದಕ್ಕೆ ಬಿಜೆಪಿಯ ಇತರ ಸಂಸದರೂ ದನಿಗೂಡಿಸಿದರು.

ಇದನ್ನೂ ಓದಿ: ರೇಪ್ ಇನ್ ಇಂಡಿಯಾ ಸಾಮಾನ್ಯ ಹೇಳಿಕೆ: ಶಶಿ ತರೂರ್

‘ಇಂಥ ಹೇಳಿಕೆ ನೀಡುವವರಿಗೆ ಲೋಕಸಭೆ ಸದಸ್ಯರಾಗಿ ಉಳಿಯುವ ಅರ್ಹತೆ ಇರುವುದಿಲ್ಲ’ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ರಾಹುಲ್ ಬೆಂಬಲಕ್ಕೆ ಧಾವಿಸಿದ ಡಿಎಂಕೆ ಸದಸ್ಯೆ ಕನಿಮೋಳಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಆಸಕ್ತಿಯಿಂದ ಜಾರಿ ಮಾಡಿದ ಮೇಕ್ ಇನ್ ಇಂಡಿಯಾ ಬಗ್ಗೆ ನಮಗೆ ಗೌರವವಿದೆ.  ದೇಶದ ಆರ್ಥಿಕತೆ ಸುಧಾರಿಸಬೇಕು ಎನ್ನುವ ಆಸೆ ನಮಗೂ ಇದೆ. ಆದರೆ ವಾಸ್ತವವಾಗಿ ಇಲ್ಲಿ ಏನಾಗುತ್ತಿದೆ? ರಾಹುಲ್ ಹೇಳಲು ಹೊರಟಿದ್ದು ಇದನ್ನೇ. ದುರಾದೃಷ್ಟವಶಾತ್ ನಮ್ಮ ದೇಶದಲ್ಲಿ ಮೇಕ್ ಇನ್‌ ಇಂಡಿಯಾ ಆಗುತ್ತಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಈ ಕುರಿತು ನಮಗೆ ಕಾಳಜಿ ಇದೆ’ ಎಂದು ಕನಿಮೋಳಿ ಹೇಳಿದರು.

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾದ ನಂತರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ‘ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಎಂದು ಹೇಳಿದ್ದಾರೆ. ಆದರೆ ಈಚೆಗಂತೂ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಮಾತ್ರ ಕಾಣಿಸುತ್ತೆ. ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಅವರ ಪಕ್ಷದ ಶಾಸಕನೇ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆಕೆ ನಂತರ ಅಪಘಾತಕ್ಕೆ ಸಿಲುಕಿದರು. ಆದರೆ ಮೋದಿ ಅವರು ಮಾತ್ರ ಒಂದೇ ಮಾತು ಉಸುರಲಿಲ್ಲ’ ಎಂದು ಆಕ್ಷೇಪಿಸಿದ್ದರು.

ನರೇಂದ್ರ ಮೋದಿ ಅವರು, ಬೇಟಿ ಬಚಾವೊ, ಬೇಟಿ ಪಡಾವೋ (ಹೆಣ್ಣು ಮಗು ಉಳಿಸಿ, ಹೆಣ್ಣು ಮಗುವನ್ನು ಓದಿಸಿ) ಎಂದು ಹೇಳುತ್ತಾರೆ. ಆದರೆ ಹೆಣ್ಣುಮಕ್ಕಳನ್ನು ಯಾರಿಂದ ಉಳಿಸಿಕೊಳ್ಳಬೇಕು ಎಂದು ಎಂದಿಗೂ ಹೇಳಲಿಲ್ಲ. ಅವರನ್ನು ಬಿಜೆಪಿ ಶಾಸಕರಿಂದ ರಕ್ಷಿಸಿಕೊಳ್ಳಬೇಕಿದೆ ಎಂದು ರಾಹುಲ್ ಕಟು ಟೀಕೆ ಮಾಡಿದ್ದರು.

‘ಮೇಕ್‌ ಇನ್‌ನಿಂದ ರೇಪ್ ಇನ್’

ಲೋಕಸಭೆಯ ಶೂನ್ಯವೇಳೆಯಲ್ಲಿ ಈಚೆಗೆ ಉನ್ನಾವ್ ಅತ್ಯಾಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ‘ಭಾರತವು ನಿಧಾನವಾಗಿ ಮೇಕ್‌ ಇನ್‌ ಇಂಡಿಯಾದಿಂದ ರೇಪ್‌ ಇನ್‌ ಇಂಡಿಯಾ ಕಡೆಗೆ ಸಾಗುತ್ತಿದೆ’ ಎಂದು ಹೇಳಿದ್ದರು.

‘ಕಠುವಾದಿಂದ ಉನ್ನಾವ್‌ವರೆಗೆ, ದೇಶದಲ್ಲಿ ಅನೇಕ ಸಾಮೂಹಿಕ ಅತ್ಯಾಚಾರ ಘಟನೆಗಳು ನಡೆದಿವೆ. ಇಂಥ ಘಟನೆಗಳು ವರದಿಯಾದಾಗ ನಾಚಿಕೆ ಎನಿಸುತ್ತದೆ. ಆದರೆ ಸರ್ಕಾರದ ಯಾವ ಹಿರಿಯ ನಾಯಕರೂ ಈವರೆಗೆ ಈ ವಿಚಾರದಲ್ಲಿ ಹೇಳಿಕೆ ನೀಡಿಲ್ಲ’ ಎಂದು ಆಕ್ಷೇಪಿಸಿದ್ದರು.

ಇದನ್ನೂ ಓದಿ: ರೇಪ್ ಇನ್ ಇಂಡಿಯಾ ಹೇಳಿಕೆ: ರಾಹುಲ್ ಗಾಂಧಿ ಕ್ಷಮೆಗೆ ಬಿಜೆಪಿ ಬಿಗಿ ಪಟ್ಟು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು