ಶುಕ್ರವಾರ, ಮಾರ್ಚ್ 5, 2021
29 °C

ವಿದೇಶಗಳಿಂದ ಭಾರತೀಯರನ್ನು ಕರೆತರುವ ಪ್ರಯತ್ನ ಆರಂಭ : ವಿಶ್ವದ ದೊಡ್ಡ ಕಾರ್ಯಾಚರಣೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಿದೇಶಗಳಲ್ಲಿ ಸಿಲುಕಿರುವ ಲಕ್ಷಾಂತರ ಭಾರತೀಯರನ್ನು ಮಾತೃಭೂಮಿಗೆ ಮರಳಿ ಕರೆತರಲು ಭಾರತ ಸರ್ಕಾರವು ವಾಣಿಜ್ಯ ವಿಮಾನಗಳು, ಮಿಲಿಟರಿ ಸರಕು ಸಾಗಣೆ ವಿಮಾನಗಳು ಮತ್ತು ನೌಕಾಪಡೆಯ ಯುದ್ಧಹಡಗುಗಳನ್ನು ನಿಯೋಜಿಸಿದೆ. ಶಾಂತಿ ಕಾಲದ ಅತಿದೊಡ್ಡ ಮಾನವ ಸ್ಥಳಾಂತರ ಪ್ರಕ್ರಿಯೆಯಾಗಿ ಈ ಸಾಹಸ ಇತಿಹಾಸದಲ್ಲಿ ದಾಖಲಾಗಲಿದೆ.

ಮೊದಲ ಹಂತದ ಕಾರ್ಯಾಚರಣೆಯಲ್ಲಿ 18 ಲಕ್ಷ ಭಾರತೀಯರು ಸ್ವದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ನೌಕಾಪಡೆಯು ಅಂದಾಜಿಸಿದೆ. 1990ರಲ್ಲಿ ಕುವೈತ್ ಬಿಕ್ಕಟ್ಟಿನ ವೇಳೆ ಅಲ್ಲಿದ್ದ 1.70 ಲಕ್ಷ ಭಾರತೀಯರನ್ನು ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಪ್ರವಾಸೋದ್ಯಮ ಸಂಸ್ಥೆ ಥಾಮಸ್ ಕುಕ್ ದಿವಾಳಿಯಾದ ನಂತರ ಬ್ರಿಟನ್ ವಿವಿಧ ದೇಶಗಳಲ್ಲಿ ಸಿಲುಕಿದ್ದ ತನ್ನ 1.50 ಲಕ್ಷ ನಾಗರಿಕರನ್ನು ಸ್ವದೇಶಕ್ಕೆ ಕರೆ ತಂದಿತ್ತು. ಇವು ಈವರೆಗಿನ ದೊಡ್ಡಮಟ್ಟದ ನಾಗರಿಕ ಸ್ಥಳಾಂತರ ಉದಾಹರಣೆಗಳಾಗಿವೆ.

ವಿಶ್ವದ ವಿವಿಧ ರಾಷ್ಟ್ರಗಳು ಲಾಕ್‌ಡೌನ್ ನಿರ್ಬಂಧ ಸಡಿಲಿಸಿದ ನಂತರ ಭಾರತವು ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಮುಂದಾಗಿದೆ. ಭಾರತದಲ್ಲಿಯೂ ಕೊರೊನಾ ಸೋಂಕು ಪ್ರದೇಶಗಳನ್ನು ವಲಯವಾರು ವಿಂಗಡಿಸಿ ಲಾಕ್‌ಡೌನ್ ಸಡಿಲಿಸಲಾಗಿದೆ. ಗಲ್ಫ್‌, ಯುರೋಪ್ ಮತ್ತು ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ಸಿಲುಕಿದ್ದಾರೆ. ಮಾರ್ಚ್‌ 25ರಂದು ಭಾರತದಲ್ಲಿ ಲಾಕ್‌ಡೌನ್ ವಿಧಿಸಿದ ನಂತರ ಇವರೆಲ್ಲರೂ ಸ್ವದೇಶಕ್ಕೆ ಬರಲಾಗದೆ ಪರಿತಪಿಸುತ್ತಿದ್ದರು.

ನೌಕಾಪಡೆಯ ಎರಡು ದೊಡ್ಡ ಹಡಗುಗಳು ಮಂಗಳವಾರ ಗಲ್ಫ್‌ನತ್ತ ಹೊರಟವು. ಮತ್ತೊಂದು ಮಾಲ್ಡೀವ್ಸ್‌ಗೆ ತೆರಳಿತು.

ಭಾರತೀಯ ವಾಯುಪಡೆಯು 30 ಏರ್‌ಲಿಫ್ಟ್‌ ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಬೋಯಿಂಗ್‌ ಸಿ–17, ಗ್ಲೋಬ್‌ಮಾಸ್ಟರ್ ಸಿ.–130ಜೆ ಸೂಪರ್ ಹರ್ಕ್ಯುಲಸ್ ಸೇರಿದಂತೆ ದೊಡ್ಡ ವಿಮಾನಗಳು ಸಜ್ಜಾಗಿವೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಭಾರತಕ್ಕೆ ಏರ್‌ ಇಂಡಿಯಾ ಸಂಸ್ಥೆಯು ಮೇ 7ರ ನಂತರ ವಿಶೇಷ ಸಂಚಾರ ಆರಂಭಿಸಲಿದೆ. ದೈತ್ಯ ಗಾತ್ರದ ಬೋಯಿಂಗ್ 777 ಮತ್ತು 787 ಡ್ರೀಮ್‌ಲೈನರ್ ವಿಮಾನಗಳು ಈ ಕಾರ್ಯಾಚರಣೆಯ ಭಾಗವಾಗಲಿವೆ.

ಸ್ವದೇಶಕ್ಕೆ ಹಿಂದಿರುಗಲು ಇಚ್ಛಿಸುವವರು ತಮ್ಮ ಪ್ರಯಾಣದ ವೆಚ್ಚ ಭರಿಸಬೇಕು ಎಂದು ಸರ್ಕಾರವು ಸೋಮವಾರ ಸ್ಪಷ್ಟಪಡಿಸಿತ್ತು. ಎಲ್ಲ ಪ್ರಯಾಣಿಕರ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಸೋಂಕಿನ ಲಕ್ಷಣ ಇಲ್ಲದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ಸ್ವದೇಶಕ್ಕೆ ಬಂದ ನಂತರ ಇವರೆಲ್ಲರೂ 14 ದಿನಗಳು ಕ್ವಾರಂಟೈನ್‌ನಲ್ಲಿರಬೇಕು. ವೈರಸ್‌ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.

ಅರಬ್ ಸಂಯುಕ್ತ ಸಂಸ್ಥಾನದಿಂದಲೇ ಸುಮಾರು 2 ಲಕ್ಷ ಭಾರತೀಯರು ದೇಶಕ್ಕೆ ಹಿಂದಿರುಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ದುಬೈನಲ್ಲಿರುವ ಭಾರತೀಯ ದೂತಾವಾಸ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದರು.

ಗರ್ಭಿಣಿಯರು, ವೃದ್ಧರು ಮತ್ತು ತಮ್ಮ ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು. ಪ್ರವಾಸಿರಿಗೆ ನಂತರದ ಅವಕಾಶ ಎಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಹೇಳಿದೆ.

ಮೇ 4ರಿಂದ ಈಚೆಗೆ ಅಮೆರಿಕ 78,000 ಮಂದಿಯನ್ನು ಮತ್ತು ಐರೋಪ್ಯ ದೇಶಗಳು 65,000 ಮಂದಿಯನ್ನು ಸ್ವದೇಶಕ್ಕೆ ಕರೆತಂದಿವೆ.

ಸ್ಥಳಾಂತರ ಕಾರ್ಯಾಚರಣೆಯ ಮುಖ್ಯಾಂಶಗಳು

* ಮೊದಲ ವಾರದಲ್ಲಿ 13 ದೇಶಗಳಿಂದ 14,800 ಮಂದಿಯನ್ನು 64 ಬಾರಿ ಹಾರಾಡುವ ವಿಮಾನಗಳು ಸ್ವದೇಶಕ್ಕೆ ಕರೆತರಲಿವೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.

* ಸ್ಥಳಾಂತರ ಕಾರ್ಯಾಚರಣೆಯ ಮೊದಲ ದಿನವಾದ ಮೇ 7ರಂದು 10 ಬಾರಿ ಹಾರಾಡುವ ವಿಮಾನಗಳು 2,300 ಭಾರತೀಯರನ್ನು ಸ್ವದೇಶಕ್ಕೆ ತಲುಪಿಸಲಿವೆ.

* ಭಾರತದಿಂದ ಹೊರಡುವ ವಿಮಾನಗಳು ಮೊದಲಿಗೆ ಅಮೆರಿಕ, ಫಿಲಿಪೈನ್ಸ್, ಸಿಂಗಪುರ, ಬಾಂಗ್ಲಾದೇಶ, ಅರಬ್ ಸಂಯುಕ್ತ ಸಂಸ್ಥಾನ, ಬ್ರಿಟನ್, ಸೌದಿ ಅರೇಬಿಯಾ, ಕತಾರ್, ಸಿಂಗಪುರ, ಒಮನ್, ಬಹರೈನ್ ಮತ್ತು ಕುವೈತ್‌ಗಳಿಗೆ ತೆರಳಲಿವೆ. ನಂತರದ ದಿನದಲ್ಲಿ ಮಧ್ಯಪ್ರಾಚ್ಯ, ಯೂರೋಪ್, ದಕ್ಷಿಣ ಏಷ್ಯಾ ಮತ್ತು ಅಮೆರಿಕಕ್ಕೆ ತೆರಳಲಿವೆ.

* ವಿಶೇಷ ವಿಮಾನಗಳಿಗೆ ಯೂರೋಪ್‌ನಿಂದ ₹ 50 ಸಾವಿರ ಮತ್ತು ಅಮೆರಿಕದಿಂದ ₹ 1 ಲಕ್ಷ ಪ್ರಯಾಣ ದರವಿದೆ ನಿಗದಿಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು