ಬುಧವಾರ, ಆಗಸ್ಟ್ 4, 2021
20 °C

ಸಾಮಾಜಿಕ ಜಾಲತಾಣದ ಮೂಲಕ ಯೋಗಾದಿನ ಆಚರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್‌ ಮಹಾಮಾರಿ ಹಿನ್ನೆಲೆಯಲ್ಲಿ ಈ ಬಾರಿಯ ಅಂತರರಾಷ್ಟ್ರೀಯ ಯೋಗಾ ದಿನವನ್ನು ಡಿಜಿಟಲ್‌ ಮಾಧ್ಯಮದ ಮುಖಾಂತರ ಆಚರಿಸಲು ಸರ್ಕಾರ ನಿರ್ಧರಿಸಿದೆ.

‘ಮನೆಯಲ್ಲಿ ಯೋಗ ಮತ್ತು ಮನೆಯವರೊಂದಿಗೆ ಯೋಗ’, ಇದು ಈ ಬಾರಿ ಯೋಗಾ ದಿನಾಚರಣೆಯ ವಿಷಯವಾಗಿರಲಿದೆ. ಜೂನ್‌ 21ರಂದು ಬೆಳಿಗ್ಗೆ 7ಗಂಟೆಯಿಂದ ದಿನಾಚರಣೆ ಪ್ರಾರಂಭಗೊಳ್ಳಲಿದೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಈ ಬಾರಿಯ ಯೋಗಾ ದಿನವು ವಿಶಿಷ್ಠವಾಗಿರಲಿದೆ. ಈಗಾಗಲೇ ಮೇ 31ರಂದು ಪ್ರಧಾನಿ ಮೋದಿ ಹೇಳಿರುವಂತೆ, ವಿಡಿಯೊ ಸ್ಪರ್ಧೆವೊಂದನ್ನು ಸರ್ಕಾರ ನಡೆಸಲಿದೆ. ದೇಶದೊಳಗೆ ವಿಜೇತರನ್ನು ಆಯ್ಕೆ ಮಾಡುವುದಲ್ಲದೇ, ಬೇರೆ ಬೇರೆ ದೇಶಗಳಲ್ಲೂ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಏನು ಮಾಡಬೇಕು: ಯೋಗಾ ಮಾಡುತ್ತಿರುವ ಮೂರು ನಿಮಿಷದ ವಿಡಿಯೊವನ್ನು ಫೇಸ್‌ಬುಕ್‌, ಟ್ವಿಟ್ಟರ್‌ ಅಥವಾ ಇನ್‌ಸ್ಟಾಗ್ರಾಮ್‌ಗಳಲ್ಲಿ ಅಪ್‌ಲೋಡ್‌ ಮಾಡಬೇಕು. ಇದರೊಂದಿಗೆ #ಮೈಲೈಫ್‌ಮೈಯೋಗಾಇಂಡಿಯಾ (#MyLifeMyYogaINDIA) ಬಳಸಬೇಕು.

ವಿಡಿಯೊದಲ್ಲಿ ಮೂರು ಯೋಗಾಭ್ಯಾಸವನ್ನು ಮಾಡಿರಬೇಕು. ಅವುಗಳೆಂದರೆ ಕ್ರಿಯಾ, ಆಸನ, ಪ್ರಣಾಯಾಮ, ಬಂಧಾ ಅಥವಾ ಮುದ್ರಾ. ಜತೆಗೆ, ತಮ್ಮ ಜೀವನವನ್ನು ಯೋಗಾಭ್ಯಾಸವು ಹೇಗೆ ಬದಲಾಯಿಸಿತು ಎಂದೂ ಹೇಳಬೇಕು. ಯಾವ ಭಾಷೆಯಲ್ಲಿ ಬೇಕಾದರೂ ವಿಡಿಯೊ ಅಪ್‌ಲೋಡ್‌ ಮಾಡಬಹುದು’ ಎಂದು ಆಯುಷ್‌ ಕಾರ್ಯದರ್ಶಿ ವೈದ್ಯಾ ರಾಜೇಶ್‌ ಕೊಟೇರಾ ಹೇಳಿದರು.

ಯಾರಿಗೆ ಸ್ಪರ್ಧೆ: ‘ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಕ್ಕಳು (18 ವರ್ಷದೊಳಗಿನ ಗಂಡು ಅಥವಾ ಹೆಣ್ಣು), ದೊಡ್ಡವರಿಗೆ (18 ವರ್ಷ ಮೇಲ್ಪಟ್ಟ ಗಂಡು ಅಥವಾ ಹೆಣ್ಣು) ವೃತ್ತಿಪರ ಯೋಗಾಪಟುಗಳಿಗಾಗಿ (ಗಂಡು ಅಥವಾ ಹೆಣ್ಣು) ಎಂಬ ಮೂರು ವಿಭಾಗ ಇರಲಿದೆ’ ಎಂದು ಕೊಟೇರಾ ವಿವರಿಸಿದರು.

‘ಒಟ್ಟು 6 ವಿಭಾಗಗಳಲ್ಲಿ (ಮೂರು ವಿಭಾಗಗಳಲ್ಲೂ ಗಂಡು, ಹೆಣ್ಣು ಎರಡು ಬೇರೆ ಬೇರೆಯಾಗಿ ಪರಿಗಣಿಸಿ) ಮೊದಲು ಮೂರು ಸ್ಥಾನಗಳನ್ನು ನೀಡಲಾಗುವುದು. ಮೊದಲ ಸ್ಥಾನಕ್ಕೆ ₹1 ಲಕ್ಷ, ಎರಡನೇ ಸ್ಥಾನಕ್ಕೆ ₹50 ಸಾವಿರ ಮತ್ತು ಮೂರನೇ ಸ್ಥಾನಕ್ಕೆ ₹25 ಸಾವಿರ ನೀಡಲಾಗುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ ₹1,90,000, ₹1,13,000, ₹75,000 ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು