ಅಭಿವೃದ್ಧಿ ಯೋಜನೆಗಳಿಗೆ 15 ಲಕ್ಷ ಮರ ಬಲಿ: ಆತಂಕ

7
ರಾಜ್ಯದ ವಿವಿಧೆಡೆ 35 ಯೋಜನೆಗಳಿಗೆ ಅರಣ್ಯ ನಾಶ

ಅಭಿವೃದ್ಧಿ ಯೋಜನೆಗಳಿಗೆ 15 ಲಕ್ಷ ಮರ ಬಲಿ: ಆತಂಕ

Published:
Updated:
Prajavani

ಬೆಂಗಳೂರು: ‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿ 15 ಲಕ್ಷಕ್ಕೂ ಹೆಚ್ಚು ಮರಗಳು ಬಲಿಯಾಗಲಿವೆ’ ಎಂದು ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ನ ಪ್ರಮುಖ ಪರಿಸರವಾದಿ ಸುರೇಶ್‌ ಹೆಬ್ಳೀಕರ್ ಕಳವಳ ವ್ಯಕ್ತಪಡಿಸಿದರು.  

‘ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಟ್ಟು 35 ಬೃಹತ್‌ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ. ಹೀಗಾದರೆ ವ್ಯಾಪಕವಾಗಿ ಅರಣ್ಯ ನಾಶವಾಗಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

‘ಯೋಜನೆಯ ಪ್ರಸ್ತಾವ ಆದಾಗಲೇ ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಮುಂದೆ ಅನುಷ್ಠಾನಕ್ಕೆ ಬಂದಾಗ ಇನ್ನಷ್ಟು ಮರಗಳು ಬಲಿಯಾಗಲಿವೆ. ಹೀಗಾದರೆ ಪಶ್ಚಿಮಘಟ್ಟದ ಪರಿಸ್ಥಿತಿ ಊಹಿಸಲೂ ಅಸಾಧ್ಯ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಕಾಡಿನೊಂದಿಗೆ ಜನಸಂಸ್ಕೃತಿ ಬೆರೆತಿದೆ. ಆದರೆ, ಈ ಅಭಿವೃದ್ಧಿ ಯೋಜನೆಗಳು ಬರುತ್ತಿರುವ ವೇಗ ಹೇಗಿದೆಯೆಂದರೆ, ಎಲ್ಲ ಕಡೆ ಗುತ್ತಿಗೆದಾರರೇ ಕಾಣಿಸುತ್ತಿದ್ದಾರೆ.ಹೀಗೇ ಮುಂದುವರಿದರೆ ದೇಶದಲ್ಲಿರುವ ಶೇ 3ರಷ್ಟು ಅರಣ್ಯವೂ ಇಲ್ಲವಾಗಲಿದೆ’ ಎಂದು ಬೇಸರಿಸಿದರು.  

‘ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಕಷ್ಟು ಯೋಜನೆಗಳು ಬಂದಿವೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ನಾಲ್ಕು ಅಣೆಕಟ್ಟೆಗಳು ಬಂದಿವೆ. ಇವೆಲ್ಲಾ ಅಲ್ಲಿನ ಧಾರಣಾ ಶಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ’ ಎಂದು ಸಂಘಟನೆಯ ಪ್ರಮುಖರಾದ ಸಹದೇವ್‌ ಹೇಳಿದರು.

‘ಬೆಂಗಳೂರು– ಮಂಗಳೂರು ಕೈಗಾರಿಕಾ ಕಾರಿಡಾರ್‌ಗಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗಾಗಿ ಸುಮಾರು 50 ಸಾವಿರ ಮರಗಳು ಬಲಿಯಾಗಲಿವೆ. ನೇತ್ರಾವತಿ ನದಿ ತಿರುವು ಯೋಜನೆಗಾಗಿ ಸುಮಾರು 1 ಲಕ್ಷ ಮರಗಳು, ತುಂಗಾ ಏತ ನೀರಾವರಿ ಯೋಜನೆಗಾಗಿ ಸುಮಾರು 50 ಸಾವಿರ ಮರಗಳು ಬಲಿಯಾಗಲಿವೆ.

ಆಗುಂಬೆ ತೀರ್ಥಹಳ್ಳಿ ಮಾರ್ಗವನ್ನು ಚತುಷ್ಪಥವಾಗಿಸುವ ಕಾಮಗಾರಿ ಸಾಗಿದೆ. ಸೋಮೇಶ್ವರ ಅಭಯಾರಣ್ಯ ಪ್ರದೇಶಕ್ಕೆ ಧಕ್ಕೆಯಾಗಲಿದೆ. ಮಡಿಕೇರಿಯಲ್ಲಿಯೂ ಬೇಕಾಬಿಟ್ಟಿ ಗುಡ್ಡ ಅಗೆದ ಕಾರಣ ಭಾರೀ ಪ್ರಮಾಣದ ಭೂಕುಸಿತ ನೋಡಬೇಕಾಯಿತು’ ಎಂದರು.

ಜಾಗೃತಿ ರ‍್ಯಾಲಿ 16ಕ್ಕೆ

ರಾಜ್ಯದಲ್ಲಿ ಮರ ಮತ್ತು ಜಲ ರಕ್ಷಣೆಯ ಉದ್ದೇಶದಿಂದ 25 ವಿವಿಧ ಸಂಘಟನೆಗಳ ಆಶ್ರಯದಲ್ಲಿ ಫೆ. 16ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರ‍್ಯಾಲಿ ನಡೆಯಲಿದೆ ಎಂದು ಸುರೇಶ್ ಹೆಬ್ಳೀಕರ್ ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !