ಶನಿವಾರ, ಏಪ್ರಿಲ್ 4, 2020
19 °C
ಕೊರೊನಾ ತಡೆ ಹೋರಾಟ ತೀವ್ರ l ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ l ಜನರು ಮನೆಯಿಂದ ಹೊರಬಾರದಂತೆ ಕರ್ಫ್ಯೂ ಮಾದರಿ ತಡೆ

ಇಂದಿನಿಂದ 21 ದಿನ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಕೊರೊನಾ ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ದೇಶದ ಪ್ರತಿಯೊಬ್ಬರು ಮಂಗಳವಾರ ಮಧ್ಯರಾತ್ರಿಯಿಂದ 21 ದಿನ ಮನೆಯಿಂದ ಹೊರಗೆ ಬರಲೇಬಾರದು. ಇದು ಸಂಪೂರ್ಣ ಲಾಕ್‌ಡೌನ್‌ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ. ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಪ್ರಧಾನಿಯವರು ಒಂದು ವಾರದಲ್ಲಿ ದೇಶವನ್ನು ಉದ್ದೇಶಿಸಿ ಎರಡನೇ ಬಾರಿ ಮಾತನಾಡಿದ್ದಾರೆ. 

‘ಈಗಿನ ಲಾಕ್‌ಡೌನ್‌ ಕರ್ಪ್ಯೂ ರೀತಿಯಲ್ಲಿಯೇ ಇರುತ್ತದೆ. ಜನತಾ ಕರ್ಫ್ಯೂಗಿಂತ ಕಠಿಣವಾಗಿರುತ್ತದೆ. 21 ದಿನಗಳ ದಿಗ್ಬಂಧನ ಎಂಬುದು ಕಷ್ಟವಾಗಿ ಕಾಣಿಸಬಹುದು. ಆದರೆ, ಪ್ರತಿಯೊಬ್ಬರ ಸುರಕ್ಷತೆಗಾಗಿ ಇರುವ ದಾರಿ ಇದೊಂದೇ. ಈ 21 ದಿನಗಳನ್ನು ನಾವು ಸರಿಯಾಗಿ ನಿಭಾಯಿಸದಿದ್ದರೆ ನಮ್ಮ ದೇಶ, ನಿಮ್ಮ ಕುಟುಂಬ ಎಲ್ಲವೂ 21 ವರ್ಷಗಳಷ್ಟು ಹಿಂದಕ್ಕೆ ಹೋಗಬಹುದು’ ಎಂದು ಪ್ರಧಾನಿ 
ಎಚ್ಚರಿಸಿದ್ದಾರೆ. 

ಜನರಿಗೆ ಅಗತ್ಯ ವಸ್ತುಗಳು ದೊರೆಯುವಂತೆ ಮಾಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ  ಸರ್ಕಾರಗಳು ಕೆಲಸ ಮಾಡುತ್ತಿವೆ. ಕೊರೊನಾ ವೈರಸ್‌ಗೆ ಸಂಬಂಧಿಸಿ ಆರೋಗ್ಯ ಮೂಲಸೌಕರ್ಯ ಬಲಪಡಿಸುವುದಕ್ಕಾಗಿ ₹15 ಸಾವಿರ ಕೋಟಿ ಮೀಸಲು ಇಟ್ಟಿರುವುದಾಗಿಯೂ ಪ್ರಧಾನಿ ತಿಳಿಸಿದ್ದಾರೆ. 

ಭಾರತವು ಈಗ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದೆ. ಒಂದೇ ಒಂದು ತಪ್ಪು ಹೆಜ್ಜೆಯಿಂದ ವೈರಸ್‌ ಕಾಳ್ಗಿಚ್ಚಿನಂತೆ ಇಡೀ ದೇಶವನ್ನು ವ್ಯಾಪಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯು ರೋಗಿಗಳಿಗೆ ಮಾತ್ರ ಎಂದು ಕೆಲವರು ಭಾವಿಸಿದ್ದಾರೆ. ಅದು ಸರಿಯಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ವೈರಸ್‌ ವಿರುದ್ಧ ಹೋರಾಟಕ್ಕೆ ಇರುವ ಏಕೈಕ ದಾರಿ’ ಎಂದು ಅವರು ಹೇಳಿದರು. 

ಕೊರೊನಾ ಎಂದರೆ ಕೋಯಿ ರೋಡ್‌ ಪರ್‌ ನಾ ನಿಕಲೆ (ಯಾರೊಬ್ಬರೂ ರಸ್ತೆಗೆ ಬರಬಾರದು) ಎಂದು ಅರ್ಥ ಎಂದು ಮೋದಿ ಅವರು ಹೇಳುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಮಹತ್ವವನ್ನು ಮನದಟ್ಟು ಮಾಡಲು ಯತ್ನಿಸಿದರು.

ಸೋಂಕಿತ ವ್ಯಕ್ತಿಗಳು ಆರಂಭದಲ್ಲಿ ಆರೋಗ್ಯವಂತರಾಗಿಯೇ ಇರುತ್ತಾರೆ. ಹಾಗಾಗಿ, ಹೆಚ್ಚಿನ ಎಚ್ಚರಿಕೆ ವಹಿಸ
ಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ‘ಒಬ್ಬ ವ್ಯಕ್ತಿಗೆ ಇಂದು ಸೋಂಕು ತಗುಲಿದರೆ ಅವರಲ್ಲಿ ಲಕ್ಷಣಗಳು ಕಾಣಿಸಿ
ಕೊಳ್ಳಲು ಹಲವು ದಿನಗಳು ಬೇಕು. ಅವರು, ತಮಗೆ ಗೊತ್ತಿಲ್ಲದೆಯೇ ತಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಸೋಂಕು ಹರಡುತ್ತಾರೆ. ಸೋಂಕಿತನಾದ ಒಬ್ಬ ವ್ಯಕ್ತಿ ಕೆಲವೇ ವಾರಗಳಲ್ಲಿ ನೂರಾರು ಮಂದಿಗೆ ಸೋಂಕು ಹರಡಬಹುದು. ಇದು ಬೆಂಕಿಯಂತೆ ಪಸರಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ. 

ಈಗಿನ ಲಾಕ್‌ಡೌನ್‌ ಪ್ರಜೆಯಿಂದ ಹಿಡಿದು ಪ್ರಧಾನಿಯವರೆಗೆ ಅನ್ವಯ ಎಂದು ಮೋದಿ ಹೇಳಿದರು. ಪರಿಸ್ಥಿತಿಯ ಗಾಂಭೀರ್ಯವನ್ನು ಜನರಿಗೆ ಅರ್ಥ ಮಾಡಿಸುವುದಕ್ಕಾಗಿ ಅವರು ಮಾತಿನ ಮಧ್ಯ ಹಲವು ಬಾರಿ ಕೈಮುಗಿದರು. 

ಲಕ್ಷ ಮಂದಿಗೆ ಸೋಂಕು ಆತಂಕ

‘ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಕೊರೊನಾ ಕುರಿತು ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘20 ಸಾವಿರ ಮಂದಿ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು, 2 ಸಾವಿರ ಮಂದಿಗೆ ವೆಂಟಿಲೇಟರ್ ಬೇಕಾಗಬಹುದು.ರಾಜ್ಯ ಸರ್ಕಾರ 1 ಸಾವಿರ ವೆಂಟಿಲೇಟರ್ ಖರೀದಿಗೆ ಆದೇಶ ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 300 ವೆಂಟಿಲೇಟರ್‌ಗಳಿವೆ. ಬೆಂಗಳೂರಿನಲ್ಲಿಯೇ 100 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳು ಒದಗಿಸಲಿವೆ, ಇತರ ಜಿಲ್ಲೆಗಳಲ್ಲೂ ಖಾಸಗಿ ಆಸ್ಪತ್ರೆಗಳು ವೆಂಟಿಲೇಟರ್‌ಗಳನ್ನು ನೀಡಲಿವೆ. ಪರಿಸ್ಥಿತಿ ಎದುರಿಸಲು ಬೇಕಾದ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ’ ಎಂದು ಅವರು ಹೇಳಿದರು.

ಬಿಎಸ್‌ವೈ ಘೋಷಿಸಿದ ಪರಿಹಾರ

* ಸಾಮಾಜಿಕ ಭದ್ರತಾ ಪಿಂಚಣಿಗಳ ಎರಡು ತಿಂಗಳ ಮೊತ್ತ ಮುಂಚಿತವಾಗಿ ಬಿಡುಗಡೆ

* ರಾಜ್ಯದಲ್ಲಿ 62 ಲಕ್ಷ ಫಲಾನುಭವಿಗಳಿದ್ದು, ಎರಡು ತಿಂಗಳ ಮೊತ್ತ ₹1102 ಕೋಟಿ

* 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ₹1 ಸಾವಿರ ಬಿಡುಗಡೆ ‌

* ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬಡವರ ಬಂಧು ಯೋಜನೆಯಡಿ 2018‌ರಿಂದ 21,620 ಮಂದಿ ಸಾಲ ಪಡೆದಿದ್ದು, ಒಟ್ಟು ₹13.31 ಕೋಟಿ ಸಾಲ ಮನ್ನಾ

* ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚುವರಿ ಮಾನವ ದಿನದ ಮೊತ್ತವನ್ನು ಮುಂಗಡವಾಗಿ ಪಾವ‌ತಿ

* ಬಿಪಿಎಲ್‌ ಕುಟುಂಬಗಳಿಗೆ ಎರಡು ತಿಂಗಳ ಪಡಿತರ ಒಟ್ಟಿಗೆ ವಿತರಣೆ

ಜೂನ್‌ 30ರವರೆಗೆ ಗಡುವು ವಿಸ್ತರಣೆ

* 2018–19ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ

* ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ

*  ಆಧಾರ್‌ ಜತೆ ಪ್ಯಾನ್‌ ಜೋಡಣೆ

* ತೆರಿಗೆ ವಿವಾದ ಇತ್ಯರ್ಥದ ’ವಿವಾದ್ ಸೆ ವಿಶ್ವಾಸ್‌

* ಕಂಪನಿ ಕಾಯ್ದೆಯ ನಿಯಮಗಳಲ್ಲಿ ಸಡಿಲಿಕೆ

* ವಿಳಂಬ ತೆರಿಗೆ ಪಾವತಿಯ ಬಡ್ಡಿ ದರ ಕಡಿತ

* ಜಿಎಸ್‌ಟಿ ರಿಟರ್ನ್‌ ವಿಳಂಬ ಶುಲ್ಕ, ದಂಡ ಅಥವಾ ಬಡ್ಡಿ ಮನ್ನಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು