ಮಂಗಳವಾರ, ಆಗಸ್ಟ್ 4, 2020
26 °C
ಕೋವಿಡ್‌ ಸೋಂಕು ಸಮುದಾಯಕ್ಕೆ ವ್ಯಾಪಿಸಿರುವ ಶಂಕೆ

ರ‍್ಯಾಂಡಮ್‌ ಪರೀಕ್ಷೆಯಲ್ಲಿ ಶೇ 24.21 ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿನ ಮೂರು ಪ್ರದೇಶಗಳಲ್ಲಿ ನಡೆಸಿರುವ ರ‍್ಯಾಂಡಮ್‌ ಕೋವಿಡ್‌ ಪತ್ತೆ ಪರೀಕ್ಷೆಯಲ್ಲಿ ಸಂಗ್ರಹಿಸಿದ್ದ ಗಂಟಲ ದ್ರವದ ಮಾದರಿಗಳಲ್ಲಿ ಶೇಕಡ 24ಕ್ಕಿಂತಲೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಷಮ ಶೀತ ಜ್ವರ, ಉಸಿರಾಟದ ತೀವ್ರ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಹೆಚ್ಚಿನವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿದೆ. ಸಂಪರ್ಕ ಪತ್ತೆಯಾಗದ ಪ್ರಕರಣಗಳ ಸಂಖ್ಯೆಯೂ ತೀವ್ರ ಏರುಗತಿಯಲ್ಲಿದೆ. ಈ ನಡುವೆಯೇ ಬಂದಿರುವ ರ‍್ಯಾಂಡಮ್‌ ಪರೀಕ್ಷೆಯ ಫಲಿತಾಂಶ, ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿರಬಹುದೇ ಎಂಬ ಆತಂಕವನ್ನು ಸೃಷ್ಟಿಸಿದೆ.

ಕೆಲವು ದಿನಗಳಿಂದ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದವು. ಈ ಕಾರಣದಿಂದ ಸೋಂಕಿತರು ಇರುವ ಪ್ರದೇಶಗಳಲ್ಲಿ ರ‍್ಯಾಂಡಮ್‌ ಪರೀಕ್ಷೆ ನಡೆಸುವಂತೆ ಸ್ಥಳೀಯ ಶಾಸಕ ಯು.ಟಿ. ಖಾದರ್‌ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು. ಆ ಬಳಿಕ, ಉಳ್ಳಾಲ ನಗರಸಭೆ ಕಚೇರಿ ಬಳಿ, ಕೋಡಿ ಮತ್ತು ಮಾಸ್ತಿಕಟ್ಟೆ ಆಝಾದ್‌ನಗರ ಎಂಬಲ್ಲಿ ಶಿಬಿರ ಆಯೋಜಿಸಿ ಸ್ಥಳೀಯರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಲಾಗಿತ್ತು.

77 ಮಂದಿಯಲ್ಲಿ ಸೋಂಕು: ನಗರಸಭೆ ಬಳಿ ನಡೆದ ಶಿಬಿರದಲ್ಲಿ 170, ಕೋಡಿಯಲ್ಲಿ 83 ಹಾಗೂ ಮಾಸ್ತಿಕಟ್ಟೆ ಆಝಾದ್‌ ನಗರದಲ್ಲಿ 65 ಜನರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಭಾನುವಾರ ಸಂಜೆಯ ವೇಳೆಗೆ ಎಲ್ಲ 318 ಜನರ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿಗಳು ಲಭಿಸಿವೆ. 77 ಜನರಲ್ಲಿ (ವರದಿ ಶೇ 24.21) ಕೋವಿಡ್‌ ಸೋಂಕು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಂಕು ಪತ್ತೆಯಾದವರಲ್ಲಿ ಹೆಚ್ಚಿನವರು ಮನೆಯಲ್ಲೇ ಇರುತ್ತಿದ್ದ ಮಹಿಳೆಯರು. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಉಳ್ಳಾಲ ನಗರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸೇರಿದಂತೆ ಕೆಲವು ರಾಜಕೀಯ ಮುಖಂಡರಿಗೂ ಸೋಂಕು ತಗುಲಿರುವುದು ರ‍್ಯಾಂಡಮ್ ಪರೀಕ್ಷೆ ವೇಳೆ ದೃಢಪಟ್ಟಿದೆ.

ಸಾವಿನ ಸಂಖ್ಯೆ ದಿಢೀರ್‌ ಹೆಚ್ಚಳ

ಕೋವಿಡ್‌–19 ಸೋಂಕಿನಿಂದ ಏಪ್ರಿಲ್‌ 19ರಂದು ಬಂಟ್ವಾಳದ ಮಹಿಳೆ ಮೃತಪಟ್ಟಿದ್ದರು. ಇದು ಸೋಂಕಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾದ ಮೊದಲ ಸಾವು. ಜೂನ್‌ 23ರವರೆಗೆ ಒಟ್ಟು ಎಂಟು ಮಂದಿ ಸಾವಿಗೀಡಾಗಿದ್ದರು. ಆ ನಂತರ ಸಾವಿನ ಸಂಖ್ಯೆಯಲ್ಲಿ ದಿಢೀರ್‌ ಏರಿಕೆಯಾಗುತ್ತಿದೆ.

ಕಳೆದ 13 ದಿನಗಳ ಅವಧಿಯಲ್ಲಿ 16 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಜುಲೈ ತಿಂಗಳ ಆರು ದಿನಗಳಲ್ಲೇ ಹತ್ತು ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಮೃತಪಟ್ಟ ಬಹುತೇಕರು ಮಧುಮೇಹ, ಹೃದ್ರೋಗ, ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಸೇರಿದಂತೆ ಗಂಭೀರ ಕಾಯಿಲೆಗಳುಳ್ಳವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು