ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಗೆ ₹ 4 ಸಾವಿರ ಕೋಟಿ: ಸಚಿವ ವಿ.ಸೋಮಣ್ಣ

ಪರಿಶಿಷ್ಟರು ಇಲ್ಲದಿದ್ದೆಡೆ ಇತರೆ ಜಾತಿಯವರಿಗೆ ಸೌಲಭ್ಯ ಕಾಯ್ದೆ ಶೀಘ್ರ: ಸಚಿವ ಸೋಮಣ್ಣ
Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬಳ್ಳಾರಿ: ‘ರಾಜ್ಯದಲ್ಲಿ 2011ರಿಂದ 2018ರವರೆಗೆ ನನೆಗುದಿಗೆ ಬಿದ್ದಿರುವ 2.63 ಲಕ್ಷ ಆಶ್ರಯ ಮನೆಗಳ ನಿರ್ಮಾಣಕ್ಕೆ ₹ 4 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದು. ಒಂದು ತಿಂಗಳೊಳಗೆ ಮನೆಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಮನೆ ಕಟ್ಟಿರುವವರು ಕೂಡಲೇ ಜಿಪಿಎಸ್‌ ಮಾಡಿಸಿ ಮಾಹಿತಿ ನೀಡಿದರೆ ಕೂಡಲೇ ಆರ್‌ಟಿಜಿಎಸ್‌ ಮೂಲಕ ಹಣ ಪಾವತಿಸಲಾಗುವುದು. ಈ ಪ್ರಕ್ರಿಯೆ ಸರಾಗವಾಗಿ ನಡೆಯುವ ರೀತಿಯಲ್ಲಿ ಎಲ್ಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ರಾಜ್ಯದಲ್ಲಿ ಮಾರ್ಚ್ 21ರೊಳಗೆ 1.20 ಲಕ್ಷ ಮನೆ ನಿರ್ಮಾಣಕ್ಕೆ ಚಾಲನೆ ನೀಡಿ, ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಬೆಂಗಳೂರು ನಗರದಲ್ಲಿ 1 ಲಕ್ಷ ಮನೆ ಕಟ್ಟಲು 2015–16ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರೂಪಿಸಿದ್ದ ₹ 6 ಸಾವಿರ ಕೋಟಿಯ ಯೋಜನೆಗೆ ಪ್ರಧಾನಿ ₹ 600 ಕೋಟಿ ಬಿಡುಗಡೆ ಮಾಡಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ 1,110 ಎಕರೆ ಜಮೀನನ್ನು ಹಸ್ತಾಂತರಿಸಲಾಗಿದೆ. ಪ್ರಾಯೋಗಿಕವಾಗಿ 843 ಮನೆಗಳ ನಿರ್ಮಾಣ ಕಾರ್ಯವನ್ನು ಯಲಹಂಕ ವಿಧಾನಸಭಾ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿದೆ. ಅದನ್ನು ಹೊರತುಪಡಿಸಿ 2021ರ ಮಾರ್ಚ್ ಒಳಗೆ ಬೆಂಗಳೂರಿನಲ್ಲಿಯೇ 50 ಸಾವಿರ ಮನೆ ನಿರ್ಮಿಸಲಾಗುವುದು’ ಎಂದರು. ‘ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಾದ ಬಳಿಕ ವಸತಿ ವಿಜಿಲ್‌ ರೂಪಿಸಲಾಗಿದ್ದು, ಅಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಹಣ ಬಿಡುಗಡೆ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅನುದಾನ ಬಿಡುಗಡೆ ವಿಳಂಬವಾಗುವುದನ್ನು ತಪ್ಪಿಸಲು ಇನ್ನು ಮುಂದೆ ಹಣ ಬಿಡುಗಡೆ ಮಾಡುವಅಧಿಕಾರವನ್ನು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ನೀಡಲಾಗುವುದು. ಜಿಲ್ಲಾಧಿಕಾರಿ ಇದಕ್ಕೆ ಸಹಯೋಗ ನೀಡುತ್ತಾರೆ’ ಎಂದು ಹೇಳಿದರು.

‘ಯಡಿಯೂರಪ್ಪ ಮಗ ಸೂಪರ್‌ ಸಿ.ಎಂ ಅಲ್ಲ’

ಬಳ್ಳಾರಿ: ‘ಬಿ.ಎಸ್.ಯಡಿಯೂರಪ್ಪ ನಮ್ಮ ಪ್ರಶ್ನಾತಿತ ನಾಯಕ. ಅವರ ಮಗ ವಿಜಯೇಂದ್ರ ಸೂಪರ್ ಸಿ.ಎಂ ಅಲ್ಲ. ಯಡಿಯೂರಪ್ಪನವರಿಗೆ 78 ವರ್ಷ ವಯಸ್ಸಾಗಿರಬಹುದು. ಹಾಗೆಂದು ವಿಜಯೇಂದ್ರ ಅವರ ಉತ್ತರಾಧಿಕಾರಿ ಅಲ್ಲ’ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರತಿಪಾದಿಸಿದರು.

‘ಯಡಿಯೂರಪ್ಪ ಹೋರಾಟಗಾರರು. ಅವರ ಅಂತ್ಯವೂ ಹೋರಾಟದಲ್ಲೇ. ಅವರ ಉತ್ತರಾಧಿಕಾರಿ ಕುರಿತು ಊಹಾಪೋಹವಿಲ್ಲ. ಪೂರ್ಣಾವಧಿಗೆ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT