ಶನಿವಾರ, ಏಪ್ರಿಲ್ 10, 2021
29 °C

ಕೋರ್ಟ್‌ ವಿಚಾರಣೆ ವಿಳಂಬ ಸಾಧ್ಯತೆ: ಕಾನೂನು ತಜ್ಞರ ಅಂದಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಎರಡು ಆದೇಶಗಳಲ್ಲಿ ವ್ಯತ್ಯಾಸ ಇದೆ. ನೀವು ಹೀಗೆಯೇ ಮಾಡಿ ಎಂದು ಸಭಾಧ್ಯಕ್ಷರಿಗೆ ಕೋರ್ಟ್‌ ತಾಕೀತು ಮಾಡಲು ಆಗುವುದಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಮತ್ತಷ್ಟು ವಿಳಂಬಿಸಬಹುದು’ ಎಂಬುದು ಕಾನೂನು ತಜ್ಞರ ಅಂದಾಜು.

ಈ ಕುರಿತಂತೆ ಪ್ರತಿಕ್ರಿಯಿಸಿದ ಹಿರಿಯ ವಕೀಲರಾದ ಎಸ್.ಎಸ್.ನಾಗಾನಂದ ಅವರು, ‘ಸಂಸದೀಯ ನಡವಳಿಕೆಯಲ್ಲಿ ಕೋರ್ಟ್‌ ಹಸ್ತಕ್ಷೇಪ ಸಾಧ್ಯವಿಲ್ಲ. ಆದ್ದರಿಂದಲೇ ನಾವು ಇದನ್ನು ವಿಸ್ತೃತವಾಗಿ ವಿಚಾರಣೆ ನಡೆಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ’ ಎನ್ನುತ್ತಾರೆ.

‘ಸದ್ಯದ ಬೆಳವಣಿಗೆಗಳು ದೀರ್ಘವಾಗಿಯೇ ವಿಚಾರಣೆಗೆ ಒಳಪಡಬೇಕಾದ ಅಂಶಗಳನ್ನು ಹೊಂದಿವೆ. ಅಷ್ಟಕ್ಕೂ ಸಭಾಧ್ಯಕ್ಷರು ಹೀಗೇ ಮಾಡಬೇಕು ಎಂದು ನಿರ್ದೇಶನ ನೀಡಿ ಎಂದು ಕೋರ್ಟ್‌ ಅನ್ನು ಕೇಳಲು ಬರುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

ಮತ್ತೋರ್ವ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ‘ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಒಂದನ್ನೊಂದು ಮಧ್ಯಪ್ರವೇಶ ಮಾಡುವುದಕ್ಕೆ ಆಗುವುದಿಲ್ಲ’ ಎಂದರು.

‘ಸಭಾಧ್ಯಕ್ಷರು ರಾಜೀನಾಮೆ ಪತ್ರಗಳನ್ನು ಅಂಗೀಕರಿಸುವುದರಲ್ಲಿ ಅಥವಾ ತಿರಸ್ಕರಿಸುವ ಪ್ರಕ್ರಿಯೆಗೆ ಸಂಬಂಧಿಸಿದಲ್ಲಿ ಏನಾದರೂ ದೋಷವಿದ್ದರೆ ಅರ್ಜಿದಾರರು ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಅದು ಬಿಟ್ಟು ಇಂತಿಷ್ಟೇ ಸಮಯದಲ್ಲಿ ರಾಜೀನಾಮೆ ಸ್ವೀಕರಿಸಲು ಅಥವಾ ತಿರಸ್ಕರಿಸಲು ನಿರ್ದೇಶಿಸಿ ಎಂದು ಕೇಳಲು ಆಗುವುದಿಲ್ಲ’ ಎಂದರು.

‘ಒಂದು ವೇಳೆ ಅನರ್ಹಗೊಂಡರೆ ಅಂತಹ ಶಾಸಕರು ಪ್ರಸಕ್ತ ವಿಧಾನಸಭೆ ಅವಧಿ ಪೂರ್ಣಗೊಳ್ಳುವವರಗೆ ಚುನಾವಣೆಗೆ ಸ್ಪರ್ಧಿಸಲು ಆಗುವುದಿಲ್ಲ’ ಎಂದು ಪೊನ್ನಣ್ಣ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು