ಸೋಮವಾರ, ಸೆಪ್ಟೆಂಬರ್ 27, 2021
28 °C

‘ಜಲಸ್ಫೋಟ’ದ ಮುನ್ಸೂಚನೆ ಬಂದಿಲ್ಲ, ವಿಕೋಪದ ಭೀತಿ ಹುಟ್ಟಿಸಿದರೆ ಕ್ರಮ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ವರ್ಷವೂ ಭಾರಿ ಮಳೆ ಸುರಿದು ಜಲಸ್ಫೋಟ, ಪ್ರವಾಹ ಹಾಗೂ ಭೂಕುಸಿತ ಸಂಭವಿಸಲಿದೆ ಜನರಲ್ಲಿ ಭೀತಿ ಹುಟ್ಟಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

‘ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೇ ಅಧಿಕೃತ ಸಂಸ್ಥೆ. ವಿಪತ್ತಿನ ಯಾವ ಸೂಚನೆಯನ್ನೂ ಕೇಂದ್ರವು ಇದುವರೆಗೆ‌‌ ನೀಡಿಲ್ಲ. ಜಿಲ್ಲೆಯ ಜನರು ಭೀತಿಗೆ ಒಳಗಾಗುವುದು ಬೇಡ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮನವಿ ಮಾಡಿದ್ದಾರೆ.

‘ಕೊಡಗು ಆಪತ್ತಿನಲ್ಲಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ, ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

‘ಕಳೆದ ವರ್ಷದಂತೆ ಕೇರಳ ಮಾದರಿಯಲ್ಲಿ ಕೊಡಗಿನಲ್ಲೂ ಪ್ರಾಕೃತಿಕ ವಿಕೋಪ ಮರುಕಳಿಸಲಿದೆ ಎಂದು ಭೂವಿಜ್ಞಾನಿಯೊಬ್ಬರು ನೀಡಿರುವ ಹೇಳಿಕೆಯು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ಅವರನ್ನು ಅಧ್ಯಯನಕ್ಕೆ ಸರ್ಕಾರ ನೇಮಿಸಿಲ್ಲ. ಅವರು ಖಾಸಗಿಯಾಗಿ ಅಧ್ಯಯನ ನಡೆಸಿರಲೂಬಹುದು. ಅಧಿಕೃತ ಸಂಸ್ಥೆಯಿಂದ ಮುನ್ಸೂಚನೆ ಲಭಿಸಿದರೆ ಜನರ ಸುರಕ್ಷತೆಗೆ ಜಿಲ್ಲಾಡಳಿತ ಬದ್ಧವಾಗಿದೆ. ನಾವು ಸಿದ್ಧವಾಗಿದ್ದೇವೆ’ ಎಂದೂ ಅವರು‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜ್ವಾಲಾಮುಖಿ ಸ್ಫೋಟದ ಪರಿಣಾಮ ಆಗಿಲ್ಲ’: ‘ಕಳೆದ ವರ್ಷ ಕೊಡಗು ಜಿಲ್ಲೆ ಮತ್ತು ಕೇರಳದಲ್ಲಿ ಅಸಹಜ ರೀತಿಯಲ್ಲಿ ಭಾರಿ ಮಳೆ ಸುರಿದಿತ್ತು. ಮಳೆ ಹಾಗೂ ಬೇರೆ ಭಾಗಗಳಲ್ಲಿ ಉಂಟಾಗುವ ಜ್ವಾಲಾಮುಖಿ ಸ್ಫೋಟಕ್ಕೂ ಸಂಬಂಧವಿರುವ ಬಗ್ಗೆ ವೈಜ್ಞಾನಿಕ ಸಂಶೋಧನೆಗಳಿಂದ ಇನ್ನಷ್ಟೇ ದೃಢಪಡಬೇಕಿದೆ. ಕಳೆದ ವಾರ ಕೊಡಗಿನಲ್ಲಿ ಬಿದ್ದ ಮಳೆಯು ಮುಂಗಾರು ಪೂರ್ವ ಮಳೆ. ಸಾಮಾನ್ಯವಾದ ಗುಡುಗು, ಮಿಂಚಿನಿಂದ ಕೂಡಿದ್ದು ಯಾವುದೇ ರೀತಿಯ ಜ್ವಾಲಾಮುಖಿ ಸ್ಫೋಟದ ಪರಿಣಾಮ ಆಗಿಲ್ಲ’ ಎಂದು ನೈಸರ್ಗಿಕ ವಿಕೋಪದ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸ ರೆಡ್ಡಿ ಸ್ಪಷ್ಟಪಡಿಸಿದರು. 

‘ರಾಜ್ಯದ ಯಾವುದೇ ಭಾಗದಲ್ಲಿ ಈ ವರ್ಷ ಅತಿವೃಷ್ಟಿ, ಪ್ರವಾಹದ ಮುನ್ಸೂಚನೆ ಇಲ್ಲ. ನೈಸರ್ಗಿಕ ವಿಪತ್ತಿನ ಮಾಹಿತಿ ಸಿಕ್ಕರೆ ಮೊದಲೇ ತಿಳಿಸುತ್ತೇವೆ. ಹವಾಮಾನ, ಭೌಗೋಳಿಕ ವೈಪರೀತ್ಯದಿಂದ ಉಂಟಾಗಬಹುದಾದ ಪ್ರಕೃತಿ ವಿಕೋಪದ ಬಗ್ಗೆ ಅಧಿಕೃತವಾಗಿ ತಿಳಿಸುತ್ತೇವೆ' ಎಂದೂ ಶ್ರೀನಿವಾಸ ರೆಡ್ಡಿ ಹೇಳಿದರು.

ಆತಂಕಕ್ಕೆ ಕಾರಣವಾಗಿದ್ದು ಏನು?: ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಈ ವರ್ಷವೂ ಭಾರಿ ಮಳೆ ಸುರಿದು ಮತ್ತೆ ಅನಾಹುತ ಸಂಭವಿಸಲಿದೆ ಎಂದು ಹಿರಿಯ ಭೂಗರ್ಭ ವಿಜ್ಞಾನಿಯೊಬ್ಬರು ಹೇಳಿದ್ದು ಜಿಲ್ಲೆಯಲ್ಲೂ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ಹೆದರಿದ, ಕೆಲವು ಬಡಾವಣೆಗಳ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ.

ತಿಂಗಳಾಂತ್ಯಕ್ಕೆ ವರದಿ
‘2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೂಕುಸಿತಕ್ಕೆ ಕಾರಣ ಕಂಡುಹಿಡಿಯಲು ನೇಮಿಸಿದ್ದ ಭಾರತೀಯ ಭೂಸರ್ವೇಕ್ಷಣಾ ಇಲಾಖೆ ಹಿರಿಯ ವಿಜ್ಞಾನಿಗಳ ತಂಡವು ಈ ತಿಂಗಳಾಂತಕ್ಕೆ ಅಂತಿಮ ವರದಿ ಸಲ್ಲಿಸಲಿದೆ’ ಎಂದೂ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್ ತಿಳಿಸಿದರು.

‘ಎರಡು ದಿನಗಳ ಹಿಂದೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಆರು ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದೆ. ಅಲ್ಲಿ ಮಾತ್ರ ಅನಾಹುತದ ಸಾಧ್ಯತೆಯ ಎಚ್ಚರಿಕೆ ನೀಡಿದ್ದು ಜನರ ಸುರಕ್ಷತೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಭೂಸರ್ವೇಕ್ಷಣಾ ಇಲಾಖೆ ನಿರ್ದೇಶಕರಾಗಿದ್ದ ಕೆ.ವಿ.ಮಾರುತಿ, ಹಿರಿಯ ಭೂವಿಜ್ಞಾನಿ ಅಂಕುರ್‌ ಕುಮಾರ್‌ ಶ್ರೀವಾಸ್ತವ್‌, ಭೂವಿಜ್ಞಾನಿ ಸುನಂದನ್‌ ಬಸು ಅವರನ್ನು ಒಳಗೊಂಡ ತಂಡವು ಅಧ್ಯಯನ ನಡೆಸಿತ್ತು. ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಗ್ರಾಮಗಳು ಪ್ರಕೃತಿ ವಿಕೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವು. 

ಒಂದು ವರ್ಷ ಜೈಲು ಶಿಕ್ಷೆ
ವಿಕೋಪದ ಸುಳ್ಳು ಸುದ್ದಿ ಹಬ್ಬಿಸುವವರಿಗೆ ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ದಂಡ ಸಹಿತ 1 ವರ್ಷದ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು