ಸೋಮವಾರ, ಜನವರಿ 27, 2020
17 °C

ಚುಂಚನಗಿರಿ ಶ್ರೀಗಳಿಗೆ ಗುರುವಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ‘ಮನಸ್ಸನ್ನು ಶುದ್ಧಿಗೊಳಿಸಿಕೊಂಡ ವ್ಯಕ್ತಿಯು ಸರ್ವಕಾಲದಲ್ಲೂ ಆನಂದವನ್ನು ಪಡೆಯುತ್ತಾನೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ತಮ್ಮ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಯಲಹಂಕ ಶಾಖೆಯ ಆಶ್ರಯದಲ್ಲಿ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸತ್ಸಂಗ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಸಹಬಾಳ್ವೆಯಿಂದ ಬದುಕಬೇಕಾದರೆ ಅಂತಃಕರಣ ಶುದ್ಧವಾಗಿರಬೇಕು. ಈ ದಿಸೆಯಲ್ಲಿ ನಮ್ಮ ಮನಸ್ಸಿನಲ್ಲಿರುವ ಅಂಧಕಾರವನ್ನು ನಾವೇ ಹೋಗಲಾಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ಅಂತಃಕರಣದಲ್ಲಿರುವ ಕೊಳೆಯನ್ನು ಮತ್ತು ಅಂಧಕಾರವನ್ನು ಹೋಗಲಾಡಿಸಲು ನಮ್ಮ ಹಿರಿಯರು ಕೊಟ್ಟ ಸಾಧನವೇ ಸತ್ಸಂಗ. ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮೊಳಗಿರುವ ದುಃಖ ಮತ್ತು ಅಶುದ್ಧತೆಗಳನ್ನು ದೂರ ಮಾಡಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಂತೆ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾಲಾರ್ಪಣೆ ಮಾಡಿದರು. ನಂತರ ಅವರನ್ನು ರಥದಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಯವರೆಗೆ ಕರೆತರಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು