ಶುಕ್ರವಾರ, ಆಗಸ್ಟ್ 6, 2021
21 °C
ಕೃಷಿ ಭೂಮಿ ಖರೀದಿ ನಿಯಮ ಬದಲಾವಣೆಯಿಂದ ಯುವಕರು ಕೃಷಿಯತ್ತ​

ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ಈ  ದೇಶದಲ್ಲಿ ಎಲ್ಲರಿಗೂ ಫಸಲು ಬೆಳೆಯಲು ಹಕ್ಕಿದೆ. ಯುವಕರು, ಪದವೀಧರು, ಕೃಷಿಯತ್ತ ಆಕರ್ಷಿತರಿಗೆ, ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವವರಿಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕೃಷಿ ಭೂಮಿ ಖರೀದಿ ನಿಯಮ ಅನುಕೂಲವಾಗಲಿದೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಇಲ್ಲಿ ಶುಕ್ರವಾರ 'ಮುಂಗಾರು- ಹಿಂಗಾರು' ಕಾರ್ಯಾಗಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, 
'ಕರ್ನಾಟಕದಲ್ಲಿ ಮಾತ್ರ ಕೃಷಿ ಭೂಮಿ ಮಾರಾಟಕ್ಕೆ ನಿಬಂಧನೆ ಇತ್ತು. ಈಗ ಮಾರಾಟಕ್ಕೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೃಷಿ ಭೂಮಿ ಮಾರಾಟದ ಬಗ್ಗೆ ಸರ್ಕಾರ ಕಂದಾಯ ಇಲಾಖೆ ಮಾರ್ಗಸೂಚಿ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಲಿದೆ' ಎಂದರು.

ಕೋವಿಡ್‌ನಿಂದ ಪರಿಸ್ಥಿತಿಯೇ ಬದಲಾಗಿದೆ

ವರ್ಷಕ್ಕೆ ಕೃಷಿ ವಿಶ್ವವಿದ್ಯಾಲಯದಿಂದ ನಾಲ್ಕು ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಕಷ್ಟ. ಇಂತಹ ಪದವೀಧರರು ಈ ಹೊಸ‌ ನಿಯಮದಿಂದ ಕೃಷಿಯತ್ತ ಆಕರ್ಷಕವಾಗುತ್ತಾರೆ. ಕೃಷಿಯಲ್ಲಿ ಆಗ್ರೋ ಇಂಡಸ್ಟ್ರೀಸ್‌ಗೂ ಕೃಷಿ ಭೂಮಿ ಅನುಕೂಲವಾಗಲಿದೆ. ಸಂಸ್ಕರಣಾ ಘಟಕ ಶೀಥಲೀಕರಣ ಆಹಾರ ಉತ್ಪಾದನಾ ಘಟಕಗಳಿಗೂ ಇದು ಬಳಕೆಯಾಗಬಹುದು. ಕೃಷಿ ಭೂಮಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಬೇಕು. ಕೃಷಿಭೂಮಿ ದುರ್ಬಳಕೆಯಾಗಬಾರದು ಎಂದು ಸ್ಪಷ್ಟಪಡಿಸಿದರು.

ಕೊರೊನಾ ಸೇನಾನಿಗಳು

ರೈತರು ಕೋವಿಡ್ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ ಎಂದು ಕೃಷಿ ಸಚಿವರು ಅಭಿಪ್ರಾಯಪಟ್ಟರು.

ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಬಹಳಷ್ಟು ಸವಾಲುಗಳು ಈ ಇಲಾಖೆಯಲ್ಲಿಬರುತ್ತವೆ. ಕೃಷಿ ಮತ್ತು ರೈತರಿಗಾಗಿ ದುಡಿಯುವ ಅವಕಾಶ ತಮಗೆ ಲಭಿಸಿದೆ. ಕೃಷಿ ಇಲಾಖೆಯಲ್ಲಿ ಅಭಿವೃದ್ಧಿಗಳಾದರೆ ಸರ್ಕಾರಕ್ಕೂ ಹೆಸರು ಬರುತ್ತದೆ. ದೇಶದ ಜನರಿಗೆ ಅನ್ನವೂ ಸಿಗುತ್ತದೆ. ಕೋವಿಡ್ ಸಂದಿಗ್ಧತೆ ಎನ್ನುವುದು ಯುದ್ಧದಂತೆ‌ ಎಂದರು.

ಕೊರೊನಾ ಸಂದರ್ಭದಲ್ಲಿಯೂ ತಾವು ಸುಮ್ಮನೆ ಕೂರದೇ ಮೂವತ್ತು ದಿನಗಳಲ್ಲಿ ಮೂವತ್ತು ಜಿಲ್ಲೆಗಳ ಪ್ರವಾಸ ಮಾಡಿ ರೈತ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಮಹತ್ತರ ಕ್ರಮಕೈಗೊಳ್ಳಲಾಯಿತು. ಗ್ರೀನ್ ಪಾಸ್, ಅಗ್ರಿವಾರ್ ರೂಮ್ ಸ್ಥಾಪನೆ ಮಾಡಿರುವುದು ಕೊರೊನಾ ಲಾಕ್ಡೌನ್‌ನಲ್ಲಿ‌ ರೈತರಿಗೆ ಬಹಳಷ್ಟು ಉಪಯುಕ್ತವಾಗಿದೆ. ನಕಲಿ ಗೊಬ್ಬರ ಬಿತ್ತನೆ‌ ಬೀಜದ ವಿರುದ್ಧ ಸಮರ ಸಾರಲಾಯಿತು. ಒತ್ತಡಗಳನ್ನು ಲಕ್ಷಿಸಲಿಲ್ಲ. ಒಬ್ಬ ಕೃಷಿ ಸಚಿವನಾಗಿ ಕಳಪೆ‌ಬಿತ್ತನೆ ಬೀಜ ಮಾರಾಟಗಾರರಿಗೆ ಕ್ಷಮೆನೀಡುವುದು ರೈತರಿಗೆ ಮಾಡಿದ ಅನ್ಯಾಯವೆಂದು ಭಾವಿಸಿ ಮನಸಿಗೆ ತೃಪ್ತಿ ಇಲಾಖೆಗೆ ನ್ಯಾಯ ಒದಗಿಸುವಂತೆ ದುಡಿದೆ.‌ ನಮ್ಮ ಮನಸಿಗೆ ಒಪ್ಪುವಂತೆ‌ ಕೆಲಸ‌ ಮಾಡಿದರೆ ದೇವರು ಸಹ ಮೆಚ್ಚುತ್ತಾನೆ‌ ಎಂದರು.

ಸೋಯಾಬಿನ್ ಮಧ್ಯಪ್ರದೇಶ ಆಂದ್ರದಿಂದ ಪೂರೈಕೆಯಾಗುತ್ತಿತ್ತು.ಸುಗ್ಗಿ ಸಂದರ್ಭದಲ್ಲಿ ಫ್ಲಡ್ ಬಂದಿರುವುದರಿಂದ ಬಹಳ ಕಡೆ ಸೋಯಾಬೀನ್ ಬೆಳೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಾರಿ ರೈತರು ಸೋಯಾ ಬೆಳೆಯುವುದಕ್ಕೂ ಮೊದಲೇ ಭೂಮಿ ಮತ್ತು ವಾತಾವರಣವನ್ನು ನೋಡಿಕೊಂಡು ಮುಂದಾಗಬೇಕು. 1.5 ಲಕ್ಷ ಕ್ವಿಂಟಲ್ ಸೋಯಾಬೀನ್ ಬೀಜಕ್ಕೆ ಬೇಡಿಕೆ ಇತ್ತು. ಈಗಾಗಲೇ 1.04 ಲಕ್ಷ ಕ್ವಿಂಟಲ್ ಪೂರೈಸಿದ್ದೇವೆ. ಕಳೆದ ಬಾರಿಯ ಪ್ರವಾಹದಿಂದಾಗಿ ಸೋಯಾ ಫಸಲು ಈ ಬಾರಿ ಉತ್ತಮವಾಗಿ ಬರುವುದು ಅನುಮಾನ‌. ಮುನ್ನೆಚ್ಚರಿಕೆ ಕ್ರಮವಾಗಿ ರೈತರು ತಮ್ಮ ಭೂಮಿ ಮತ್ತು ಪೂರಕ ವಾತಾವರಣಕ್ಕೆ ಅನುಗುಣವಾದ ಪರ್ಯಾಯ ಬಿತ್ತನೆಗೆ ಮುಂದಾಗಲಿ ಎಂದು ಸಲಹೆ ನೀಡಿದರು.

ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್, ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಸೇರಿದಂತೆ ಮತ್ತಿತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು