ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌: ನಟನಷ್ಟೇ ಅಲ್ಲ

Last Updated 24 ನವೆಂಬರ್ 2018, 21:13 IST
ಅಕ್ಷರ ಗಾತ್ರ

ಬೆಂಗಳೂರು: ಅವರ ಬಳಿ ಇರುವ ಬೌನ್ಸಾದ ಚೆಕ್ಕುಗಳನ್ನು ಲೆಕ್ಕ ಹಾಕಿದರೆ ಏಳು ಕೋಟಿ ರೂಪಾಯಿ ಮೀರೀತು. ಅವರದ್ದು ಒರಟು ಮಾತು, ಹೃದಯ ಮೃದು. ಅಷ್ಟೊಂದು ಅಸ್ತವ್ಯಸ್ತವಾಗಿ ಬದುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ.

ಇಂಥ ಒರಟೊರಟಾದ ಒಬ್ಬ ನಟನಿಗೆ ಇಷ್ಟೊಂದು ಅಭಿಮಾನಿಗಳು ಸಿಕ್ಕಿದ್ದಾದರೂ ಹೇಗೆ?- ಹೀಗೆ ಹಲವು ಸಿಕ್ಕುಗಳ ಸಮೇತ ಗುರುತು ಮೂಡಿಸಿದ ವ್ಯಕ್ತಿತ್ವ ಅಂಬರೀಷ್‌ ಅವರದು. ಮದ್ದೂರು ಬಳಿಯ ದೊಡ್ಡರಸಿನಕೆರೆಯಲ್ಲಿ 1952 ಮೇ 29ರಂದು ಹುಟ್ಟಿದ್ದು ಮಳವಳ್ಳಿ ಹುಚ್ಚೇಗೌಡ ಅಮರ್‍ನಾಥ್; ಪಿಟೀಲು ಚೌಡಯ್ಯ ಎಂದೇ ಖ್ಯಾತರಾದ ತಿರುಮಕೂಡಲು ಚೌಡಯ್ಯನವರ ಮೊಮ್ಮಗ. ಮೈಸೂರು ಹುಚ್ಚೇಗೌಡರ ಏಳು ಮಕ್ಕಳಲ್ಲಿ ಆರನೆಯವ, ಗಂಡು ಮಕ್ಕಳಲ್ಲಿ ಕೊನೆಯವ.

ಬುಲ್‍ಬುಲ್ ಎಂಬ ಈಡಿಯಂ ಕೂಡು ಕುಟುಂಬದಲ್ಲಿ, ಅಜ್ಜನ ಸಂಗೀತದಲೆಗಳನ್ನು ಕಿವಿಮೇಲೆ ಹಾಕಿಕೊಂಡು, ತುಸು ಶಿಸ್ತೇ ಎನ್ನಬಹುದಾದ ವಾತಾವರಣದಲ್ಲಿ ಬೆಳೆದ ಅಮರನಾಥ್‍ಗೆ ಸಿನಿಮಾ ಹುಚ್ಚು ಹತ್ತಿಸಿದ್ದು ಆತನ ಗೆಳೆಯ ಸಂಗ್ರಾಮ್. ಅದಾಗಲೇ ನಿರ್ದೇಶಕರಾಗಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಚಿತ್ರಕ್ಕೆ ಹೊಸಮುಖಗಳ ಹುಡುಕಾಟದಲ್ಲಿದ್ದರು.

1971. ಸಂಗ್ರಾಮ್‍ಗೆ ಗೆಳೆಯ ನಟನಾಗಲಿ ಎಂಬ ಆಸೆ. ಆದರೆ ಅಮರನಾಥ ಮೇಕಪ್ ಟೆಸ್ಟ್‍ಗೆ ಹೆದರಿ ದೂರದೂರಿನಲ್ಲಿ ತಲೆಮರೆಸಿಕೊಂಡ. ಸಂಗ್ರಾಮ್ ಕೊನೆಗೂ ಹುಡುಕಿ, ಬಲವಂತ ಮಾಡಿ, ಕರೆತಂದು ಪುಟ್ಟಣ್ಣನವರ ಮುಂದೆ ನಿಲ್ಲಿಸಿದರು. ಒಲ್ಲದ ಮನಸ್ಸಿನಿಂದಲೇ ಮೇಕಪ್ ಟೆಸ್ಟ್‍ಗೆ ಒಡ್ಡಿಕೊಂಡ ಅಂಬರೀಶ್ ಚಹರೆಯಲ್ಲಿ ಪುಟ್ಟಣ್ಣನವರು ತಾವು ಹುಡುಕುತ್ತಿದ್ದ ಖಳನಟನನ್ನು ಕಂಡರು. ‘ನಾಗರಹಾವು’ ಚಿತ್ರದಲ್ಲಿ ಸಣ್ಣ ಪಾತ್ರ ಸಿಗಲು ಅಷ್ಟು ಸಾಕಾಯಿತು. ಆದರೆ ಆ ಪಾತ್ರ ಮೂಡಿಸಿದ ಪರಿಣಾಮ ದೊಡ್ಡದಾಯಿತು. ‘ಬುಲ್‍ಬುಲ್ ಮಾತಾಡಕಿಲ್ವಾ’ ಎಂಬ ಆ ಚಿತ್ರದ ಸಂಭಾಷಣೆ ಈ ಕಾಲದ ಚಿತ್ರವೊಂದರ ಹಾಡಿನ ಸಾಲಾಗುತ್ತದೆ ಎಂದರೆ ಅದರ ಜನಪ್ರಿಯತೆಯನ್ನು ಊಹಿಸಬಹುದು.

‘ನಾಗರಹಾವು’ ಚಿತ್ರದ ನಾಯಕನಾಗಿ ಚಂದನವನಕ್ಕೆ ಕಾಲಿಟ್ಟದ್ದು ವಿಷ್ಣುವರ್ಧನ್. ಅದೇ ಚಿತ್ರದ ಖಳನಾಯಕ ಅಂಬರೀಶ್. ಇಬ್ಬರೂ ಆಮೇಲೆ ಜೀವದ ಗೆಳೆಯರಾದದ್ದು ನಮ್ಮ ಜನಪದದಷ್ಟೇ ಜನಪ್ರಿಯ. ಇಬ್ಬರ ಅಭಿರುಚಿ, ಸಿನಿಮಾ ಆಯ್ಕೆ, ಭಾವಲಹರಿ ಬೇರೆಬೇರೆಯೇ ಆದರೂ ಅದು ಹೇಗೆ ಅಂಥ ಗಳಸ್ಯ ಕಂಠಸ್ಯ ಸ್ನೇಹಿತರಾಗಿದ್ದರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ‘ಅದರ ಗುಟ್ಟು ಯಾರಿಗೂ ಗೊತ್ತಿಲ್ಲ, ಗೊತ್ತಾಗುವುದೂ ಇಲ್ಲ’ ಎಂದು ವಿಷ್ಣು ಅಗಲಿದ ಮರುದಿನ ಅಂಬರೀಶ್ ಹೇಳಿಕೊಂಡಿದ್ದರು.

ಪಾತ್ರ ವೈವಿಧ್ಯ ವಿಷ್ಣು ರೊಮ್ಯಾಂಟಿಕ್ ಹೀರೊ ಆದಾಗ ಅಂಬರೀಶ್ ರೆಬೆಲ್ ಸ್ಟಾರ್ ಆಗಿದ್ದರು. 1980ರಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ, ಎಚ್.ಕೆ.ಅನಂತರಾವ್ ಅವರ ‘ಅಂತ’ ಕಾದಂಬರಿ ಆಧರಿತ ಅದೇ ಹೆಸರಿನ ಸಿನಿಮಾ ಬಂದಮೇಲೆ ಭಾರತ ಚಿತ್ರರಂಗವೇ ಅದರ ರಾಜಕೀಯ ವಿಡಂಬನೆಯ ಧಾಟಿಯತ್ತ ಬೆರಗುಗಣ್ಣು ಬೀರಿತು. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳುವ ವಿಡಂಬನಾತ್ಮಕವಾದ ಈ ಚಿತ್ರ ಹಿಂದಿ, ತಮಿಳಿಗೂ ರೀಮೇಕ್ ಆಯಿತು. ಆ ಚಿತ್ರದ ಎಳೆಯ ಪ್ರೇರಣೆಯಿಂದ ಬಂದ ‘ಚಕ್ರವ್ಯೂಹ’, ‘ನ್ಯೂಡೆಲ್ಲಿ’ ಕೂಡ ಅಂಬರೀಶ್ ಇಮೇಜನ್ನು ಬಲಪಡಿಸಿದವು. ಅದೇ ಚಕ್ರವ್ಯೂಹ ಹಿಂದಿಯಲ್ಲಿ ರೀಮೇಕ್ ಆದದ್ದು. ‘ಇಂಕಿಲಾಬ್’ ಹೆಸರಿನ ಆ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದು ಇನ್ನೊಂದು ವಿಶೇಷ. ‘ನ್ಯೂಡೆಲ್ಲಿ’ ಸಿನಿಮಾ ಅದೇ ಹೆಸರಿನಲ್ಲಿ ಮಲಯಾಳಿ ಭಾಷೆಗೆ ರೀಮೇಕ್ ಆಯಿತು.

ಕೋಪದ ನಾಯಕನ ಇಮೇಜಿನಲ್ಲಿ ಅಷ್ಟೇ ಅಲ್ಲದೆ ಆಗೀಗ ರೊಮ್ಯಾಂಟಿಕ್ ನಾಯಕನಾಗಿಯೂ ಅಂಬರೀಶ್ ನಟಿಸಿದರು. ‘ರಂಗನಾಯಕಿ’, ‘ಒಲವಿನ ಉಡುಗೊರೆ’, ‘ಟೋನಿ’, ‘ರಾಣಿ ಮಹಾರಾಣಿ’, ‘ಹೃದಯ ಹಾಡಿತು’, ‘ಮಣ್ಣಿನ ದೋಣಿ’, ‘ಒಡ ಹುಟ್ಟಿದವರು’, ‘ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್’, ‘ಏಳು ಸುತ್ತಿನ ಕೋಟೆ’, ‘ಮಸಣದ ಹೂವು’, ‘ಗಜೇಂದ್ರ’, ‘ಮೃಗಾಲಯ’, ‘ಮಮತೆಯ ಮಡಿಲು’, ‘ಮೌನರಾಗ’ ಈ ಚಿತ್ರಗಳು ಅವರ ಪಾತ್ರ ವೈವಿಧ್ಯಕ್ಕೆ ಕನ್ನಡಿ ಹಿಡಿಯುತ್ತವೆ. ಮಲಯಾಳಿ ಭಾಷೆಯ ‘ಗಾನಂ’ ಸಿನಿಮಾ ಅಭಿನಯಕ್ಕೂ ಅಂಬರೀಶ್‍ಗೆ ಉತ್ತಮ ವಿಮರ್ಶೆ ಸಿಕ್ಕಿತ್ತು.

1980ರ ದಶಕದಲ್ಲಿ ವಿಷ್ಣುವರ್ಧನ್ ಜೊತೆಗೆ ‘ಸ್ನೇಹಿತರ ಸವಾಲ್’, ‘ಮಹಾ ಪ್ರಚಂಡರು’, ‘ಅವಳ ಹೆಜ್ಜೆ’ ಚಿತ್ರಗಳಲ್ಲಿ ಅಭಿನಯಿಸಿದ ಅಂಬರೀಶ್ ದೀರ್ಘ ಕಾಲದ ನಂತರ 2000ದಲ್ಲಿ ‘ದಿಗ್ಗಜರು’ ಚಿತ್ರದಲ್ಲಿ ಮತ್ತೆ ನಟಿಸಿದಾಗ ಅಭಿಮಾನಿಗಳಿಂದ ಗಮನಾರ್ಹ ಪ್ರತಿಕ್ರಿಯೆ ಸಿಕ್ಕಿತ್ತು. ಆ ಚಿತ್ರದ ‘ಕುಚ್ಚಿಕು ಕುಚ್ಚಿಕು’ ಹಾಡು ಇಂದಿಗೂ ಜನಪ್ರಿಯ.

ರಾಜಕೀಯದಲ್ಲೂ ಕಾಲು
‘ಕಲಿಯುಗ ಕರ್ಣ’, ‘ಮಂಡ್ಯದ ಗಂಡು’ ಎಂಬ ಬಿರುದುಗಳಿಗೆ ಅದಾಗಲೇ ಪಾತ್ರರಾಗಿದ್ದ ನಟ ಅಂಬರೀಶ್ 1994ರಲ್ಲಿ ನಡೆದ ಒಕ್ಕಲಿಗರ ಸಮಾವೇಶದ ನೇತೃತ್ವ ವಹಿಸಿದ್ದರು. ಅದರ ಅಭೂತಪೂರ್ವ ಯಶಸ್ಸೇ ಅವರು ರಾಜಕೀಯಕ್ಕೆ ಕಾಲಿಡಲು ಕಾರಣವಾದದ್ದು. ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದ ಕೂಡ ಅವರ ಮೇಲಿತ್ತು. ಅವರ ಸಲಹೆಯಂತೆ ಕಾಂಗ್ರೆಸ್‍ಗೆ ಸೇರಿದರು. ಆಮೇಲೆ ಜಿಗಿದದ್ದು ಜನತಾದಳಕ್ಕೆ.

ಮಂಡ್ಯ ಕ್ಷೇತ್ರದಿಂದ 12ನೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಸಂಸತ್ ಸದಸ್ಯರಾದರು. ಆಮೇಲೆ ಅವರು ಮತ್ತೆ ಕಾಂಗ್ರೆಸ್‍ನತ್ತ ಹಾರಿದರು. ಮುಂದಿನ ಎರಡು ಚುನಾವಣೆಗಳಲ್ಲಿ ಅವರು ಆ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದು ಮಂಡ್ಯ ಕ್ಷೇತ್ರದಿಂದಲೇ. 14ನೇ ಲೋಕಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದ ಅವರು ಕಾವೇರಿ ವಿವಾದದ ಕಾರಣದಿಂದ 2008ರಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ವಿಶೇಷ. ಆ ರಾಜೀನಾಮೆ ಅಂಗೀಕಾರವಾಗಲಿಲ್ಲ ಎಂಬುದು ಬೇರೆ ಮಾತು. 2009ರ ಸಾಮಾನ್ಯ ಚುನಾವಣೆಯಲ್ಲಿ ಸೋಲನುಭವಿಸಿದ ಅವರು ಕೊನೆಯುಸಿರು ಎಳೆಯುವ ಕಾಲಕ್ಕೆ ಮಂಡ್ಯ ಕ್ಷೇತ್ರದಿಂದಲೇ ಆಯ್ಕೆಯಾದ ಶಾಸಕರಾಗಿದ್ದರು. ವಸತಿ ಖಾತೆಯ ಜವಾಬ್ದಾರಿ ಅವರ ಮೇಲಿತ್ತು.

ಪ್ರಶಸ್ತಿಗಳು ಒಂದೆರಡಲ್ಲ
1982ರಲ್ಲಿ ‘ಅಂತ’ ಚಿತ್ರದ ಶ್ರೇಷ್ಠ ಅಭಿನಯಕ್ಕೆ ರಾಜ್ಯ ಪ್ರಶಸ್ತಿ, 1985-86ರಲ್ಲಿ ‘ಮಸಣದ ಹೂವು’ ಚಿತ್ರದ ನಟನೆಗೆ ಶ್ರೇಷ್ಠ ಪೋಷಕ ನಟ ರಾಜ್ಯ ಪ್ರಶಸ್ತಿ ಪಡೆದಿದ್ದ ಅವಚರಿಗೆ ‘ಒಲವಿನ ಒಡುಗೊರೆ’ ಚಿತ್ರದ ಪಾತ್ರ ನಿರ್ವಹಣೆಗೆ ಫಿಲ್ಮ್‍ಫೇರ್ ಪ್ರಶಸ್ತಿಯೂ ಸಂದಿತ್ತು. 2005ರಲ್ಲಿ ಎನ್‍ಟಿಆರ್ ಪ್ರಶಸ್ತಿ, 2010ರಲ್ಲಿ ಫಿಲ್ಮ್‍ಫೇರ್ ಸಾಧಕ ಪ್ರಶಸ್ತಿ, 2009ರಲ್ಲಿ ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿಗಳು ಅವರಿಗೆ ಸಂದವು.

ಇನ್ನಷ್ಟು ಓದು

ವಿಲಾಸಿ ಹವ್ಯಾಸಿ:ತಮ್ಮ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ನಟಿ ಸುಮಲತಾ ಅವರನ್ನು ಮದುವೆಯಾದ ಅವರಿಗೆ ಅಭಿಷೇಕ್ ಗೌಡ ಎಂಬ ಮಗ ಇದ್ದಾರೆ. ವಿದೇಶದಲ್ಲಿ ಕಲಿಯುತ್ತಿರುವ ಮಗನ ಬಗೆಗೆ ಅವರಿಗೆ ತುಂಬುಹೆಮ್ಮೆ. ಪತ್ನಿಯ ತಾಂತ್ರಿಕ ಜ್ಞಾನವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದ ಅವರಿಗೆ ಕುದುರೆ ರೇಸು, ಜೂಜಿನ ಹವ್ಯಾಸವೂ ಇತ್ತು. ತಮ್ಮನ್ನು ತಾವು ಮುಜುಗರವೇ ಇಲ್ಲದೆ ಶೋಕೀಲಾಲ ಎಂದು ಕರೆದುಕೊಳ್ಳುತ್ತಿದ್ದ ಅವರಿಗೆ ಬೆಳಕು ಹರಿಯುತ್ತಿದ್ದದ್ದು ತಡವಾಗಿ. ಅಷ್ಟು ಹೊತ್ತಿಗೆ ಮನೆಯ ಪಡಸಾಲೆಯಲ್ಲಿ ಭೇಟಿಯಾಗಲು ಬಂದವರ ದಂಡೇ ನೆರೆದಿರುತ್ತಿತ್ತು. ಹಾಗೆ ಬರುತ್ತಿದ್ದ ಎಲ್ಲರಿಗೂ ಚಹಾ, ಪಾನಿ ವ್ಯವಸ್ಥೆಯನ್ನು ಮಾಡಿದ್ದ ಅವರ ನಿರ್ದಾಕ್ಷಿಣ್ಯವಾದ, ನಿಷ್ಠೂರವಾದ ಮಾತನ್ನು ಕೇಳಿ, ಚಕಿತರಾಗಿ ಹೋಗುತ್ತಿದ್ದ ಅನೇಕರಿದ್ದರು.

ಹೊಸ ತಲೆಮಾರಿನ ನಿರ್ದೇಶಕರಲ್ಲಿ ಯೋಗರಾಜ ಭಟ್ ಅವರನ್ನು ಮೆಚ್ಚಿಕೊಂಡಿದ್ದ ಅವರು, ಭಟ್ಟರ ನಿರ್ದೇಶನದ ‘ಡ್ರಾಮಾ’ ಚಿತ್ರದಲ್ಲಿ ನಟಿಸಿದ್ದರು. ದರ್ಶನ್ ಬಗೆಗೆ ಮೆಚ್ಚುಗೆಯ ಮಾತನಾಡುತ್ತಿದ್ದ ಅವರು ಅದೇ ನಟನ ಜೊತೆ ಅಭಿನಯಿಸಿದ ಕೊನೆಯ ಚಿತ್ರ ‘ಬುಲ್‍ಬುಲ್’.
ವಿಷ್ಣುವರ್ಧನ್ ನಿಧನರಾದಾಗ ಅಂತಿಮ ಸಂಸ್ಕಾರದ ಉಸಾಬರಿಯನ್ನು ಭುಜದ ಮೇಲೆ ಹೊತ್ತು ನಿಂತಿದ್ದ ಅಂಬರೀಶ್ ಅವರನ್ನು ಚಿತ್ರರಂಗ ಒಂದು ವಿಧದಲ್ಲಿ ಅಘೋಷಿತ ನಾಯಕ ಎಂದೇ ಭಾವಿಸಿತ್ತು. ಅದಕ್ಕೆ ರೂಪಕವೆಂಬಂತೆ ಅವರು ಇತ್ತೀಚೆಗೆ ರಾಜಾಮೀಸೆ ಬಿಟ್ಟಿದ್ದರು. ‘ಅಂಬಿ ನಿಂಗ್ ವಯಸ್ಸಾಯ್ತೋ’ ಅವರ ಕೊನೆಯ ಸಿನಿಮಾ. ಅದೂ ಒಂದು ಮಟ್ಟಕ್ಕೆ ಯಶಸ್ವಿಯಾದದ್ದು ಅವರ ಅಭಿಮಾನಿಗಳ ಪ್ರೀತಿಗೆ ಸಾಕ್ಷಿ. ಈಗ ಅವರು ಬಿಟ್ಟುಹೋದ ಅಘೋಷಿತ ನಾಯಕನ ಸ್ಥಾನ ಖಾಲಿಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT