ಭಾನುವಾರ, ಮಾರ್ಚ್ 7, 2021
30 °C
ಅರಮನೆ ಮೈದಾನದ ವೈಟ್ ಪೆಟಲ್‌ನಲ್ಲಿ ಕಾರ್ಯಕ್ರಮ

ಅಂಬರೀಷ್‌ ವೈಕುಂಠ ಸಮಾರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಅಂಬರೀಷ್‌ ವೈಕುಂಠ ಸಮಾರಾಧನೆ ಕಾರ್ಯಕ್ರಮ ಬುಧವಾರ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್‌ನಲ್ಲಿ ನಡೆಯಿತು.

ಹಿರಿಯ ಕ್ರಿಕೆಟ್‌ ಆಟಗಾರ ಅನಿಲ್ ಕುಂಬ್ಳೆ ಬೆಳಿಗ್ಗೆಯೇ ಕುಟುಂಬ ಸಮೇತರಾಗಿ ಬಂದು ಅಂಬಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ದಿನವಿಡೀ ಇದ್ದು ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ನಾಗೇಶ್‌ ದೀಕ್ಷಿತ್‌ ನೇತೃತ್ವದಲ್ಲಿ ಮಂಗಳವಾರವೇ ಅಂಬರೀಷ್ ಕುಟುಂಬದವರು ವೈಕುಂಠ ಕ್ರಿಯಾಕರ್ಮಗಳನ್ನು ಮಾಡಿದ್ದರು. ಬುಧವಾರ ಅನ್ನದಾನ ಮತ್ತು ದಾನ ಕೊಡುವ ಕಾರ್ಯ ಮಾಡಲಾಯಿತು.

ಅಂಬರೀಷ್‌ ಕುಟುಂಬದವರು, ಚಿತ್ರರಂಗ ಮತ್ತು ರಾಜಕೀಯ ಗಣ್ಯರು, ಸ್ನೇಹಿತರು, ರಾಜ್ಯದ ವಿವಿಧೆಡೆಗಳಿಂದ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಬಂದು ಅಂಬರೀಷ್‌ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಸುಮನ್‌, ಉಪೇಂದ್ರ, ತಮಿಳು ನಟ ಕಾರ್ತಿ, ಜಯಸುಧಾ, ಸಂಗೀತಾ ಸೇರಿದಂತೆ ಚಿತ್ರರಂಗದ ಗಣ್ಯರು ಪಾಲ್ಗೊಂಡರು. ಜೆಡಿಎಸ್‌ ಮುಖಂಡ ಎಚ್‌.ಡಿ. ದೇವೇಗೌಡ ಅವರೂ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡಿದ್ದರು.

ಅಂಬಿ ಇಷ್ಟದ ಕಬ್ಬು, ಭತ್ತ, ರಾಗಿ: ನಿರ್ಮಾಪಕ ಸಂದೇಶ್‌ ನಾಗರಾಜ್‌, ಅಂಬರೀಷ್‌ಗೆ ಇಷ್ಟವಾದ ಕಬ್ಬು, ಭತ್ತ, ರಾಗಿ ತೆನೆಯನ್ನು ಹೊತ್ತು ತಂದಿದ್ದರು. ಹಲವು ಅಭಿಮಾನಿಗಳೂ ಕಬ್ಬು, ರಾಗಿ ತೆನೆಯನ್ನು ಹೊತ್ತು ತಂದಿದ್ದರು. ಪುತ್ರ ಅಭಿಷೇಕ್‌ ಅವುಗಳನ್ನು ಅಂಬರೀಷ್ ಭಾವಚಿತ್ರದ ಎದುರು ಇರಿಸಿ ಪೂಜೆ ಸಲ್ಲಿಸಿದರು. 

ಊಟದ ಮೆನು ಹೀಗಿತ್ತು: ಸುಮಾರು ಎಂಟು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸತೀಶ್‌ ನೇತೃತ್ವದಲ್ಲಿ ಸುಮಾರು ಮುನ್ನೂರು ಜನರ ತಂಡ ಅಡುಗೆ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಸಮಾರಾಧನೆಯಲ್ಲಿ ಸಸ್ಯಾಹಾರಿ ಅಡುಗೆಯನ್ನು ಮಾತ್ರ ಮಾಡಲಾಗಿತ್ತು. ರಾಗಿ ಮುದ್ದೆ, ವಡೆ, ಹಪ್ಪಳ, ಪೂರಿ ಸಾಗು, ವೆಜ್‌ ಧಮ್‌ ಬಿರಿಯಾನಿ ಮತ್ತು ರಾಯಿತ, ಮಸಾಲೆ ವಡಾ, ಸಿಹಿ ಕಡುಬು, ಬೆಂಡೆ ಫ್ರೈ, ಆಲೂ ಧಮ್ ಪಲ್ಯ, ಸುವರ್ಣ ಗಡ್ಡೆ ಪಲ್ಯ, ಕಾಳಿನ ಹುಳಿ, ಗೋಧಿಕಡಿ ಪಾಯಸ, ಕೋಸಂಬರಿ, ಅನ್ನ, ಸಾಂಬಾರ್‌, ರಸಂ, ಮೊಸರು, ಮಿಲ್ಕ್‌ ಮೈಸೂರು ಪಾಕ್‌ ಸೇರಿದಂತೆ 28 ಬಗೆಯ ತಿನಿಸುಗಳನ್ನು ಮಾಡಲಾಗಿತ್ತು.

ಗಣ್ಯರು ಹಾಗೂ ಸಾಮಾನ್ಯ ಜನರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಭಿಷೇಕ್‌ ಅವರೂ ಊಟ ಬಡಿಸಿದರು. ಒಂದು ಸಲಕ್ಕೆ ಸಾವಿರ ಜನ ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಮಂಗಳವಾರ ಸುಮಲತಾ, ಅಭಿಷೇಕ್‌ ಮತ್ತು ಕುಟುಂಬದವರು ಕಂಠೀರವ ಸ್ಟುಡಿಯೊದಲ್ಲಿ ಹನ್ನೊಂದನೇ ದಿನದ ಕ್ರಿಯಾಕರ್ಮವನ್ನು ಪೂರೈಸಿದ್ದರು. ಹಲವು ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು