ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ: ಕಾಸು ಇದ್ದವರಿಗೆ ಕೃಷಿ ಭೂಮಿ

Last Updated 11 ಜೂನ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಕೃಷಿಕರಲ್ಲದವರೂ ಯಾವುದೇ ಅಡೆತಡೆಗಳಿಲ್ಲದೇ ಜಮೀನು ಖರೀದಿಸಬಹುದು. ಇಂತಹ ಅವಕಾಶ ಕಲ್ಪಿಸಲು ‘ಕರ್ನಾಟಕ ಭೂ ಸುಧಾರಣೆ ಕಾಯ್ದೆ’ಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ಈವರೆಗೆ ಕೃಷಿಕನಲ್ಲದ ಯಾವುದೇ ವ್ಯಕ್ತಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಭೂ ಸುಧಾರಣೆ ಕಾಯ್ದೆಯನ್ನು ಸರಳೀಕರಣಗೊಳಿಸುವಂತೆಯೂ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಎಲ್ಲ ಕಾರಣಗಳಿಗಾಗಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು’ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಮೀನು ಖರೀದಿಯಲ್ಲಿ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಸುಮಾರು 83,171 ಪ್ರಕರಣಗಳನ್ನು ದಾಖಲಿಸಿತ್ತು. ಅದರಲ್ಲಿ ಇತ್ಯರ್ಥ ಆಗಿರುವುದನ್ನು ಬಿಟ್ಟು ಉಳಿದ 12,231 ಪ್ರಕರಣಗಳನ್ನು ವಜಾಗೊಳಿಸಲು ಮತ್ತು ಜಮೀನು ಖರೀದಿಗೆ ಇದ್ದ ಆದಾಯ ಮಿತಿಯನ್ನು ತೆಗೆಯಲು ನಿರ್ಧರಿಸಲಾಯಿತು ಎಂದು ಹೇಳಿದರು.

‘ಕರ್ನಾಟಕ ಭೂ ಸುಧಾರಣೆ ಕಾಯ್ದೆ’ ಜಾರಿ ಬಂದು 45 ವರ್ಷಗಳಾಗಿವೆ. ಭೂಮಿ ಖರೀದಿ ಮಾಡುವವರಿಗೆ ತೊಂದರೆ ಕೊಡುವ ಉದ್ದೇಶದಿಂದಲೇ ಈ ಕಾಯ್ದೆ ಬಳಕೆಯಾಗುತ್ತಿದೆ. ಬೇರೆ ಯಾವುದೇ ರಾಜ್ಯದಲ್ಲೂ ಜಮೀನು ಖರೀದಿಗೆ ಇಂತಹ ಷರತ್ತುಗಳಿಲ್ಲ ಎಂದು ಅಶೋಕ ತಿಳಿಸಿದರು.

ರಾಜ್ಯದಲ್ಲಿ ಇಷ್ಟು ಕಠಿಣ ನಿಯಮಗಳು ಇದ್ದರೂ ಕೃಷಿಕರಲ್ಲದ ಸಾಕಷ್ಟು ಜನ ವಾಮಮಾರ್ಗ ಬಳಸಿ ಜಮೀನು ಖರೀದಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಹೊಸ ಕಾನೂನು ಜಾರಿಯಿಂದ ಕಾನೂನು ಉಲ್ಲಂಘಿಸಿ ಜಮೀನು ಖರೀದಿಸುವುದಕ್ಕೆ ಕಡಿವಾಣ ಬೀಳಲಿದೆ ಎಂದು ಅವರು ವಿವರಿಸಿದರು.1992 ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಈ ಕಾಯ್ದೆಗೆ ಮೊದಲ ಬಾರಿ ತಿದ್ದುಪಡಿ ಮಾಡಲಾಗಿತ್ತು. ನಂತರ ಸಿದ್ದರಾಮಯ್ಯ ಅವಧಿಯಲ್ಲಿ ಜಮೀನು ಖರೀದಿಸುವವರ ಆದಾಯ ಮಿತಿಯನ್ನು ₹ 2 ಲಕ್ಷದಿಂದ ₹25 ಲಕ್ಷಕ್ಕೆ ಏರಿಸುವ ಸಂಬಂಧ ತಿದ್ದುಪಡಿ ಮಾಡಲಾಗಿತ್ತು ಎಂದರು.

ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಜಮೀನಿನ ಗರಿಷ್ಠ ಮಿತಿ ವಿಸ್ತೀರ್ಣ 10ಯುನಿಟ್‌ನಿಂದ 20 ಯುನಿಟ್‌ಗೆ ಹೆಚ್ಚಿಸಲು ಮತ್ತು 5 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಭೂಮಿಯ ಮಿತಿಯನ್ನು 20 ಯುನಿಟ್‌ನಿಂದ 40 ಯುನಿಟ್‌ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ (ಯುನಿಟ್‌ ಎಂದರೆ ಖುಷ್ಕಿಯಾದರೆ 54 ಎಕರೆ, ತರಿಯಾದರೆ 25 ಎಕರೆ, ಬಾಗಾಯ್ತು ಆದರೆ 13 ಎಕರೆ) ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಈ ಸಂಬಂಧ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಮುಂದೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಅವರುಹೇಳಿದರು.

ಇಬ್ಬರು ಸಚಿವರ ಆಕ್ಷೇಪ?
ಈ ಕಾಯ್ದೆಯಿಂದ ರೈತರು ಸಂಕಷ್ಟಕ್ಕೆ ತುತ್ತಾಗಬಹುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ. ಆ ರೀತಿ ಏನೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.

ಸರ್ಕಾರದ ವಾದವೇನು?
* ಕೃಷಿ ಮಾಡಲು ಆಸಕ್ತಿ ಹೊಂದಿರುವವರು ಸುಲಭವಾಗಿ ಜಮೀನು ಖರೀದಿಸಲು ಅವಕಾಶ
* ಆರ್ಥಿಕವಾಗಿ ಬಲಿಷ್ಠವಾಗಿರುವವರು ಕೃಷಿ ಭೂಮಿ ಖರೀದಿಸಿ ಆಧುನಿಕ ಕೃಷಿ ಮಾಡಲು ಮುಂದಾದರೆ ಕೃಷಿ ಅಭಿವೃದ್ಧಿ
* ಭೂ ಸುಧಾರಣೆ ಕಾಯ್ದೆಯ 79ಎ, ಬಿ ರದ್ದು ಮಾಡುವುದರಿಂದ ಜನರಿಗೆ ಆಗುವ ಕಿರುಕುಳ ತಪ್ಪುತ್ತದೆ
* ಕೃಷಿ ಭೂಮಿ ಖರೀದಿಗೆ ಗರಿಷ್ಠ ಮಿತಿ ವಿಧಿಸಿರುವುದರಿಂದ ಒಬ್ಬನೇ ಹೆಚ್ಚು ಭೂಮಿ ಖರೀದಿಸಲು ಸಾಧ್ಯವಿಲ್ಲ

‘ಕೃಷಿ ಕ್ಷೇತ್ರ ಅಭಿವೃದ್ಧಿಗೆ ಪೂರಕ’
ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ಕ್ರಮ ಎಪಿಎಂಸಿ (ತಿದ್ದುಪಡಿ) ಕಾಯ್ದೆಗೆ ಪೂರಕವಾಗಿದೆ. ಇದರಿಂದ ಕೃಷಿ ಕ್ಷೇತ್ರದ ಬೆಳವಣಿಗೆಯಾಗಲಿದೆ. ಈ ವಲಯದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಅವಕಾಶ, ಉತ್ಪಾದನೆ– ಉತ್ಪನ್ನದ ಹೆಚ್ಚಳ, ಸಂಸ್ಕರಣೆ, ಮೌಲ್ಯವರ್ಧನೆಗೆ ಸರ್ಕಾರ ದಾರಿ ಮಾಡಿಕೊಟ್ಟಂತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ.

ಕೃಷಿಯೋಗ್ಯ ಭೂಮಿಯನ್ನು ಕೈಗಾರಿಕೆಗಳಿಗೆ ಬಳಕೆ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಕೃಷಿ ಆಧಾರಿತ ವ್ಯವಸ್ಥೆಗೆ ಈ ನಡೆ ಪೂರಕವಲ್ಲ. ಅಲ್ಲದೆ, ಯಾರೂ ಬಳಕೆ ಮಾಡಬಾರದು. ಆದರೆ, ನೀರಾವರಿ ಸೌಲಭ್ಯಗಳಿಲ್ಲದ ಬಂಜರು ಭೂಮಿ, ಕೃಷಿ ಯೋಗ್ಯವಲ್ಲವೆಂದು ಖಚಿತವಾದರೆ ಕೈಗಾರಿಕೆಗಳಿಗೆ ಬಳಸುವುದರಲ್ಲಿ ತಪ್ಪಿಲ್ಲ.

45 ವರ್ಷಗಳಷ್ಟು ಹಳೆಯದಾದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಐ.ಟಿಯಷ್ಟೆ ಅಲ್ಲ, ಹೋಟೆಲ್‌ ಉದ್ಯಮದಂಥ ಕ್ಷೇತ್ರದಲ್ಲಿರುವವರನ್ನು, ಆದಾಯ ತೆರಿಗೆ ಪಾವತಿಸುವವರನ್ನು ಕೃಷಿಯತ್ತ ಸೆಳೆದು ಬಂಡವಾಳ ಹೂಡುವಂತೆ ಮಾಡಲು ಹೊರಟಿರುವುದು ಸ್ವಾಗತಾರ್ಹ. ಹಿಂದಿನ ಕಾಯ್ದೆ ಆ ಕಾಲಕ್ಕೆ ಸೂಕ್ತವಾಗಿತ್ತು. ಜಮೀನ್ದಾರರ ನಿಯಂತ್ರಣದಲ್ಲಿದ್ದ ಎಕರೆಗಟ್ಟಲೆ ಕೃಷಿ ಭೂಮಿಯ ಮೇಲೆ ನಿಯಂತ್ರಣ ಹೇರಲು ಅಗತ್ಯವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಅದೇ ರೀತಿ, ಮಾತೆತ್ತಿದ್ದರೆ ಕೈಗಾರಿಕೆಗಳ ಕಡೆಗೆ ಬೆರಳು ತೋರಿಸುವ ದಿನಗಳಿದ್ದವು. ಕೃಷಿ ಭೂಮಿಯಲ್ಲ ಕೈಗಾರಿಕೆಗಳ ಪಾಲಾದವು ಎಂಬ ಅಪಸ್ವರವೂ ಇತ್ತು. ಇದೀಗ ಆಸಕ್ತರನ್ನು ಮರಳಿ ಕೃಷಿ ಕಡೆಗೆ ಆಕರ್ಷಿಸಲು ತಿದ್ದುಪಡಿಯಿಂದ ಅವಕಾಶ ಆಗಲಿದೆ.

ಕೃಷಿ ಭೂಮಿ ಇಲ್ಲದವರೂ ಕೃಷಿ ಭೂಮಿ ಖರೀದಿಸಿ ಬಂಡವಾಳ ಹೂಡಿಕೆ ಮಾಡಲು ಜಾರಿಯಲ್ಲಿರುವ ಕಾಯ್ದೆ ಅಡ್ಡಿಯಾಗಿದೆ. ಅದನ್ನು ತಿದ್ದುಪಡಿ ಮೂಲಕ ನಿವಾರಿಸುವ ಕೆಲಸ ಹಿಂದೆಯೇ ಆಗಬೇಕಿತ್ತು. ಈಗಲಾದರೂ ಸರ್ಕಾರ ಗಮನಹರಿಸಿರುವುದು ಮೆಚ್ಚುವ ವಿಷಯ.

ಈಗ ಕಾನೂನು ತೊಡಕು ನಿವಾರಿಸಿ ಕೃಷಿ ಭೂಮಿ ಖರೀದಿಗೆ ಅನುಕೂಲ ಮಾಡಿಕೊಡುವ ಸರ್ಕಾರ, ಕೃಷಿ ಉತ್ಪಾದನೆ, ಉತ್ಪನ್ನಗಳ ಮೌಲ್ಯವರ್ಧನೆಗೆ ಅನುಕೂಲವಾದ ವಾತಾವರಣ ಸೃಷ್ಟಿಸಬೇಕು. ಥೈಲ್ಯಾಂಡ್‌ನಂಥ ಸಣ್ಣ ದೇಶ ಪ್ರವಾಸೋದ್ಯಮ, ಕೃಷಿ ಮತ್ತು ಮೀನುಗಾರಿಕೆಯಿಂದ ಅಭಿವೃದ್ಧಿ ಕಂಡಿದೆ. ಜಪಾನ್‌ ದೇಶಕ್ಕೆ ಅಗತ್ಯವಾದ ಆಹಾರ ಉತ್ಪನ್ನಗಳು ಚೀನಾದಿಂದ ಆಮದಾಗುತ್ತವೆ. ಈಗ ಜಪಾನ್‌ ನಮ್ಮ ಕಡೆ ನೋಡುತ್ತಿದೆ. ಇಂಥ ಪರಿಸ್ಥಿತಿಯನ್ನು ನಮಗೆ ಅನುಕೂಲವಾಗುವಂತೆ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖ ಆಗಬೇಕು.

ಕೃಷಿಪರವಾದ ನಮ್ಮ ಮಾನಸಿಕತೆ ಬದಲಾಯಿಸಿಕೊಳ್ಳಲು ಇದು ಸಕಾಲ. ಇತರ ಕ್ಷೇತ್ರಗಳಲ್ಲಿನ ಪರಿಣತರು, ವಿದ್ಯಾವಂತರು, ಅನುಭವಿಗಳು ಕೃಷಿಯತ್ತ ಬಂದರೆ ಅನುಕೂಲವೇ. ಬರುವ ಆದಾಯಕ್ಕಿಂತ ತಗಲುವ ವೆಚ್ಚವೇ ಹೆಚ್ಚು ಎಂಬ ಸ್ಥಿತಿ ಬದಲಾಗಬೇಕಾದರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕಡೆಗೆ ನಮ್ಮ ಚಿತ್ತ ಹರಿಯಬೇಕಿದೆ. ಉತ್ಪಾದನೆ, ಉತ್ಪನ್ನಗಳಿಗೆ ಪೂರಕವಾದ ವ್ಯವಸ್ಥೆ, ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು.

ಜೊತೆಗೆ ಸಂಸ್ಕರಣೆಯಂಥ ಮೌಲ್ಯವರ್ಧನೆ ವ್ಯವಸ್ಥೆ ಬರಬೇಕು. ಆ ಮೂಲಕ, ಕೃಷಿ ಉತ್ಪನ್ನಕ್ಕೆ ಬೆಲೆ ತಂದುಕೊಡುವ ಅಗತ್ಯವೂ ಇದೆ.

-ಜೆ.ಆರ್‌. ಬಂಗೇರ, ಮಾಜಿ ಅಧ್ಯಕ್ಷರು, ಎಫ್‌ಕೆಸಿಸಿಐ

**

ವೈಫಲ್ಯ ಮುಚ್ಚಿಡಲು ತಿದ್ದುಪಡಿ?

ಭೂ ಸುಧಾರಣಾ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವುದಕ್ಕೆ ನಿಯಮ ರಚಿಸಲು ಮತ್ತು ಈವರೆಗೆ ಮುಟ್ಟುಗೋಲು ಹಾಕಿಕೊಂಡ ಪ್ರಕರಣಗಳಲ್ಲಿ ಎಷ್ಟು ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಹೈಕೋರ್ಟ್ ಕೇಳಿತ್ತು. ಅದಕ್ಕೆ ಸರಿಯಾದ ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಕಾನೂನನ್ನೇ ರದ್ದುಮಾಡಲು ಕಾಯ್ದೆಗೆ ತಿದ್ದುಪಡಿ ತರಲು ಹೊರಟಂತಿದೆ ಸರ್ಕಾರದ ನಡೆ.

ಉಳುಮೆಗಾಗಿ ಗೇಣಿದಾರನಿಗೆ ನೀಡಿರುವ ಜಮೀನಿಗೆ ಅನ್ವಯವಾಗುವ ಹಲವಾರು ಕಾನೂನುಗಳನ್ನು ಏಕೀಕರಿಸಿ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಲಾಗಿತ್ತು. ಇದರಲ್ಲಿ ಸುಧಾರಣೆಯ ಪ್ರಯತ್ನವೆಂದರೆ ಗೇಣಿದಾರನ ರಕ್ಷಣೆ ಮತ್ತು ಜಮೀನು ಮಾಲೀಕ ಎಷ್ಟು ಜಮೀನನ್ನು ವೈಯಕ್ತಿಕವಾಗಿ ಉಳಿಮೆ ಮಾಡದೆ ತನ್ನ ಖಾತೆಯಲ್ಲಿ ಹೊಂದಿದ್ದಾನೋ ಅದನ್ನು ಮುಟ್ಟುಗೋಲು ಹಾಕಿಕೊಂಡು ಗೇಣಿದಾರನಿಗೆ ಹಂಚುವ ನಿಯಮ ಜಾರಿಯಾಗಿತ್ತು. ಮಾರ್ಚ್ 1, 1974ರ ವರೆಗೆ ಯಾರು ಗೇಣಿದಾರರಾಗಿರುತ್ತಾರೋ ಅವರಿಗೆ ‘ಉಳುವವನಿಗೆ ಭೂಮಿ’ ಎಂದು 1974ರಲ್ಲಿ ತಿದ್ದುಪಡಿಯಾಗಿ ಕಾನೂನು ಜಾರಿಗೆ ಬಂತು. ಈಗಲೂ ಭೂ ಸುಧಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಿವೆ. ಇದರಲ್ಲಿ ರಾಜಕೀಯ ಹಿತಾಸಕ್ತಿಗಳ ಆಟವಿದೆ ಎಂದರೆ ತಪ್ಪಾಗಲಾರದು. ಅಂದು ಭೂ ಸುಧಾರಣಾ ನ್ಯಾಯಾಲಯದ ಸದಸ್ಯರಾಗಿದ್ದವರು ಈಗ ಶಾಸಕರು, ಸಂಸದರು ಆಗಿದ್ದಾರೆ. ಅವರ ತೀರ್ಪುಗಳು ಇಂದಿಗೂ ನ್ಯಾಯವಾದ ಅಂತ್ಯ ಕಾಣದೆ ಕೊಳೆಯುತ್ತಿವೆ.

ಭೂ ಸುಧಾರಣೆ ಕಾನೂನಿನಿಂದ ಬಲಿಷ್ಠ ವರ್ಗದ ಜನರ ಬಳಿ ಇದ್ದ ಜಮೀನು ಬಡವರ ಪಾಲಾಯಿತು. ಬಡವ, ತಾನು ಗೇಣಿದಾರನಾಗಿ ಬಾಡಿಗೆ ಕೊಡಬೇಕು ಎಂಬ ಜವಾಬ್ದಾರಿಯಲ್ಲಿ ದುಡಿದಷ್ಟು ಮಾಲೀಕನಾಗಿ ದುಡಿಯಲಿಲ್ಲ. ಸುಧಾರಣೆಯಲ್ಲಿ ಆಗಬಹುದಾದ ತೊಡಕುಗಳ ಬಗ್ಗೆ ಆಡಳಿತಕ್ಕೆ ಮುಂದಾಲೋಚನೆ ಇಲ್ಲದೆ ನಿರಂತರ ವಿಫಲತೆಯಲ್ಲಿ ಬಂದ ಕಾನೂನು ಎಂದರೆ ತಪ್ಪಾಗಲಾರದು.

ಕಡಿಮೆ ಭೂಮಿಯಲ್ಲಿ ಆದಾಯ ತರುವಂತಹ ಬೆಳೆ ತೆಗೆಯುವುದು ಕಷ್ಟವೆಂದು ತಿಳಿದಿದ್ದರೂ ತುಂಡು ಭೂಮಿ ಕಾಯ್ದೆ ರದ್ದುಪಡಿಸಿದರು. ಇಲ್ಲಿಯವರೆಗೆ ರೈತರಿಗೆ ಸಾಲ ಮನ್ನಾ ಎಂಬ ಆಮಿಷ ಬಿಟ್ಟರೆ, ಜಮೀನು ಫಲಪ್ರದವಾಗಲು ರೂಪಿಸಿದ ಯೋಜನೆಗಳು ತಲುಪಿದ್ದು ಕೆಲವರಿಗೆ ಮಾತ್ರ. ವ್ಯವಸಾಯವನ್ನು ಸಹಕಾರಿ ತತ್ವದಲ್ಲಿ ನಡೆಸಲು ಕಾನೂನು ರೂಪಿತವಾಗಿದೆಯಾದರೂ ಅದರ ಬಗ್ಗೆ ಸಾಮೂಹಿಕ ಪ್ರಯತ್ನ ಆಗಲಿಲ್ಲ.

ವ್ಯವಸಾಯದ ಭೂಮಿತಿ ಈವರೆಗೆ ಕುಟುಂಬಕ್ಕೆ ಒಣಭೂಮಿ 54 ಎಕರೆ ಇತ್ತು. ತೋಟವಾದರೆ 13 ಎಕರೆ ಇತ್ತು. ಅದನ್ನು ಲೆಕ್ಕಹಾಕಲು ಯೂನಿಟ್ ಎಂಬ ಅಂಶವನ್ನು ಕೊಟ್ಟು, ಒಣಭೂಮಿ ಒಂದು ಯೂನಿಟ್ 5.4 ಎಕರೆ, ಫಲವತ್ತಾದ ಭೂಮಿ ಒಂದು ಯೂನಿಟ್ 1 ಎಕರೆ 30 ಗುಂಟೆ ಎಂದು ಈ ಮಧ್ಯಂತರದಲ್ಲಿ ಇನ್ನೂ ಎರಡು ತರಹ ಜಮೀನು ಮಿತಿ ನಿಗದಿಪಡಿಸಲಾಗಿತ್ತು. ಒಟ್ಟು ಎಲ್ಲಾ ತರಹದ ಜಮೀನು 10 ಯೂನಿಟ್ ಎಂದು ನಿಗದಿಪಡಿಸಲಾಯಿತು. ಅದಕ್ಕೂ ಮೀರಿ ಖರೀದಿಸಿದವರ ಮೇಲೆ ಇಲ್ಲಿಯವರೆಗೆ ಕಾನೂನಿನ ಕ್ರಮ ನಡೆದಿಲ್ಲ. ಆಡಿಟ್ ಆಗಿಲ್ಲ.

2015ರಲ್ಲಿ ಸಂಸ್ಥೆಗಳು ಖರೀದಿಸುವ ಜಾಮೀನಿನ ಬಗ್ಗೆ ತಿದ್ದುಪಡಿ ಮಾಡಿ ಎರಡು ಪಟ್ಟು ಭೂಮಿತಿಯನ್ನುನಿಗದಿಪಡಿಸಲಾಗಿತ್ತು. ಈಗಿನ ತಿದ್ದುಪಡಿಯಲ್ಲಿ 20 ಯೂನಿಟ್‌ನಿಂದ 40 ಯೂನಿಟ್ ವರೆಗೆ ಭೂಮಿತಿಯನ್ನು ಕುಟುಂಬವೊಂದಕ್ಕೆ ನಿಗದಿಪಡಿಸಿರುವುದು ವ್ಯವಸಾಯದಲ್ಲಿ ಬಂಡವಾಳ ಉತ್ತೇಜನಕ್ಕೆ ಎನ್ನುತ್ತಾರೆ. ಆದರೆ ವ್ಯವಸಾಯ ಮಾಡದೆ ಬರಡು ಬಿಟ್ಟರೆ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂಬ ನಿಯಮವನ್ನು ಕಾನೂನಿನಲ್ಲಿ ತರದಿರುವುದನ್ನು ಗಮನಿಸಿದರೆ ಸರ್ಕಾರಕ್ಕೆ ಬೇರೆಯದೇ ಆದ ಉದ್ದೇಶ ಇದ್ದಂತೆ ಕಾಣಿಸುತ್ತದೆ.

-​ಎನ್.ಶ್ರೀಧರಬಾಬು,ವಕೀಲರು -ತುಮಕೂರು

**

ಭೂಕಂದಾಯ ಕಾಯ್ದೆಗೆ ತಿದ್ದುಪಡಿ: ಯಾರು ಏನಂತಾರೆ?

ರಾಜ್ಯದಲ್ಲಿ ಕೃಷಿ ಉದ್ದೇಶಕ್ಕೆ ಯಾರು ಬೇಕಾದರೂ ಬಂಡವಾಳ ಹೂಡಬಹುದು. ಐಟಿ–ಬಿಟಿಯಲ್ಲಿ ಹಣ ಮಾಡಿದ ಯುವಕರು ಕೃಷಿಯತ್ತ ಆಕರ್ಷಿತರಾಗಿದ್ದಾರೆ, ಅವರಿಗೆ ಅವಕಾಶ ಆಗಲಿ.


-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

**

ಬೀದಿಗೆ ಬೀಳಲಿದ್ದಾರೆ ರೈತರು
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಶ್ರೀಮಂತರಿಗೆ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಾತ್ರ ಲಾಭ. ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ರೈತರಿಗೆ ಯಾವುದೇ ಲಾಭವಿಲ್ಲ. ಕಾರ್ಪೊರೇಟ್‌ ಸಂಸ್ಥೆಗಳ ಆಮಿಷ ಹಾಗೂ ಒತ್ತಡಕ್ಕೆ ಬಲಿಯಾಗಿ ರೈತರು ತಮ್ಮ ಬಳಿ ಇದ್ದ ತುಂಡು ಭೂಮಿ ಮಾರಾಟ ಮಾಡಿ ಬೀದಿಗೆ ಬೀಳುವ ಅಪಾಯವಿದೆ.


-ಬಾಬಾಗೌಡ ಪಾಟೀಲ, ಮಾಜಿ ಸಂಸದ, ರೈತ ಮುಖಂಡ, ಬೆಳಗಾವಿ

**

ಜಮೀನು ಮಾಲೀಕರು ಕೂಲಿಗಳಾಗಬೇಕೆ ?
ಭೂ ಸುಧಾರಣೆ ಕಾಯ್ದೆಯಿಂದಾಗಿ ಊಳುವವನೇ ಒಡೆಯ ಆಗಿದ್ದ. ಸಣ್ಣ ಹಿಡುವಳಿದಾರರು ಕೃಷಿಯಲ್ಲಿ ತೊಡಗಿರುವುದರಿಂದ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕೇಂದ್ರ ಸರ್ಕಾರ ಗುತ್ತಿಗೆ‌‌ ಕೃಷಿ ಪದ್ಧತಿ ತರಲು ಹೊರಟಿದೆ. ಈ ಸುಗ್ರೀವಾಜ್ಞೆಯ ಮರ್ಮ ಏನು? ಜಮೀನು ಮಾಲೀಕರನ್ನು ಕೂಲಿಯನ್ನಾಗಿ ಮಾಡುವುದೇ?


-ಬಿ.ಆರ್‌. ಪಾಟೀಲ (ಆಳಂದ), ಮಾಜಿ ಶಾಸಕ, ಕಲಬುರ್ಗಿ

**

ನಿರ್ಗತಿಕರಾಗಲಿದ್ದಾರೆ ಸಣ್ಣರೈತರು
ಮಿತಿ ಇಲ್ಲದೆ ಎಲ್ಲರಿಗೂ ಭೂಮಿ ಖರೀದಿಸುವ ಅವಕಾಶ ನೀಡಿದರೆ ಶ್ರೀಮಂತರು ಅಧಿಕ ಬೆಲೆಯ ಆಮಿಷ ನೀಡಿ ಬೇಕಾದಷ್ಟು ಭೂಮಿ ಖರೀದಿಸುತ್ತಾರೆ. ಸಣ್ಣ ರೈತರು ಭೂಮಿ ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಹಿಂದೆ ಭೂಮಿ ಖರೀದಿಸಲು ಇದ್ದ ಕೃಷಿಯೇತರ ಆದಾಯದ ಮಿತಿ ಹೆಚ್ಚಳವನ್ನೂ ಹಿಂದೆ ವಿರೋಧಿಸಿದ್ದೆ.


-ಕಡಿದಾಳು ಶಾಮಣ್ಣ, ರೈತ ಮುಖಂಡ

**

ಅಪಾಯಕಾರಿ ಬೆಳವಣಿಗೆ
ಇದೊಂದು ಬಹಳ ಅಪಾಯಕಾರಿ ಬೆಳವಣಿಗೆ. ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಲು ಸರ್ಕಾರ ಹೊರಟಿದೆ. ಇದರಿಂದಾಗಿ ಕೃಷಿಕರು ಇನ್ನು ಮುಂದೆ ಭೂರಹಿತ ಕಾರ್ಮಿಕರಾಗಲಿದ್ದಾರೆ. ಈಗ ಕಾರ್ಮಿಕರ ಸಂಖ್ಯೆ ಶೇ 25ರಷ್ಟು ಇದ್ದು, ಸರ್ಕಾರದ ತಪ್ಪು ನಿರ್ಧಾರದಿಂದ ಈ ಪ್ರಮಾಣ ಶೇ 50ಕ್ಕೆ ಏರಲಿದೆ.


-ವಿ.ಬಾಲಸುಬ್ರಮಣಿಯನ್‌, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

**

ಕಾರ್ಪೊರೇಟ್‌ ಕೃಷಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೊರೇಟ್‌ ಕೃಷಿ ಮಾದರಿ ಜಾರಿ ಮಾಡಲು ಹೊರಟಿವೆ. ಈ ತಿದ್ದುಪಡಿ ಹಿಂದೆ ಕೃಷಿ ಭೂಮಿಯನ್ನು ನಗರ ಪ್ರದೇಶದಲ್ಲಿನ ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳಿಗೆ ಕೊಡುವ ಹುನ್ನಾರವಿದೆ. ರೈತರಿಗೆ ಮಾರಕವಾದ ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ಭೂಹೀನರ ಪಟ್ಟಿ ಮತ್ತು ಕೃಷಿ ಬಿಕ್ಕಟ್ಟು ಹೆಚ್ಚುತ್ತದೆ.


-ಜಿ.ಸಿ.ಬಯ್ಯಾರೆಡ್ಡಿ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಪ್ರಾಂತ ಸಂಘ

**

ಸುಗ್ರೀವಾಜ್ಞೆಗೆ ಸ್ವಾಗತ
ತೆಲಂಗಾಣ, ತಮಿಳುನಾಡಿನಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ದಾವೋಸ್‌ಗೆ ಹೋಗಿ ಬಂದ ನಂತರ ಅಲ್ಲಿನ ವ್ಯವಸ್ಥೆ ನೋಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಜಮೀನಿಗಾಗಿಯೇ ಮೂರು–ನಾಲ್ಕು ವರ್ಷ ಓಡಾಡಬೇಕಾಗಿತ್ತು. ಈಗ ಆ ತೊಂದರೆ ಇಲ್ಲ. ಈ ಸುಗ್ರೀವಾಜ್ಞೆಯನ್ನು ನಾವು ಸ್ವಾಗತಿಸುತ್ತೇವೆ.


-ಜಿ.ಆರ್. ಜನಾರ್ದನ, ಎಫ್‌ಕೆಸಿಸಿಐ ಅಧ್ಯಕ್ಷ

**

ಕೈಗಾರಿಕೆಗಳ ಬೆಳವಣಿಗೆಗೆ ಪೂರಕ
ಕಾಸಿಯಾ ಇದನ್ನು ಸ್ವಾಗತಿಸುತ್ತದೆ. ಭೂಮಿ ಖರೀದಿಸಲು ಕೆಎಸ್‌ಐಡಿಸಿ, ಕೆಐಎಡಿಬಿಗೆ ಅಲೆದಾಡಬೇಕಾಗುತ್ತಿತ್ತು. ಇದು ಆದಷ್ಟು ತಪ್ಪುತ್ತದೆ. ನಾವೇ ಖರೀದಿಸಿ, ನಾವೇ ನಮ್ಮ ಸದಸ್ಯರಿಗೆ ಹಂಚುವುದರಿಂದ ಸಮಯ ಮತ್ತು ಶ್ರಮ ಉಳಿಯುತ್ತದೆ. ಈ ಬಗ್ಗೆ ನಾವು ಪ್ರಸ್ತಾವ ಸಲ್ಲಿಸಿದ್ದೆವು. ಕೈಗಾರಿಕೆಗಳ ಬೆಳವಣಿಗೆ ಇದರಿಂದ ಅನುಕೂಲವಾಗುತ್ತದೆ.


-ಆರ್. ರಾಜು, ಕಾಸಿಯಾ ಅಧ್ಯಕ್ಷ

**

ಶೋಷಣೆಗೆ ಕಡಿವಾಣ
ತುಂಬ ಒಳ್ಳೆಯ ನಿರ್ಧಾರ. ರೈತರಿಗಷ್ಟೇ ಅಲ್ಲದೇ ಉದ್ದಿಮೆ ವಲಯಕ್ಕೂ ಪ್ರಯೋಜನಕಾರಿಯಾಗಿರಲಿದೆ. ಲ್ಯಾಂಡ್‌ ಮಾಫಿಯಾ ರೈತರ ಭೂಮಿ ಅಡಮಾನ ಇರಿಸಿಕೊಂಡು ಸಾಲದ ಶೂಲಕ್ಕೆ ಸಿಲುಕಿಸಿ ಶೋಷಿಸುತ್ತ ಬಂದಿದೆ. 70 ವರ್ಷಗಳಿಂದ ನಡೆದುಕೊಂಡು ಬಂದಿರುವ ಶೋಷಣೆಗೆ ಈಗ ಕಡಿವಾಣ ಬೀಳಲಿದೆ. ಉದ್ದಿಮೆಯ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ.


-ಸಂಪತ್‌ ರಾಮನ್‌,’ಅಸೋಚಾಂ’ ರಾಜ್ಯ ಘಟಕದ ಅಧ್ಯಕ್ಷ

**

ಭೂಮಿಯಲ್ಲಿ ಹೂಡಿಕೆ ಹೆಚ್ಚಳ
‘ಆತ್ಮನಿರ್ಭರ ಭಾರತ‘ದ ಬಗ್ಗೆ ಮಾತನಾಡುವ ಸದ್ಯದ ಗಳಿಗೆಯಲ್ಲಿ ಹೊಸ ಉದ್ದಿಮೆ ಆರಂಭಿಸಲು ಮತ್ತು ರಾತ್ರಿ ಬೆಳಗಾಗುವುದರೊಳಗೆ ಕಾಣೆಯಾಗುವ ವಂಚಕರನ್ನು ರಿಯಲ್‌ ಎಸ್ಟೇಟ್‌ ವಲಯದಿಂದ ದೂರ ಇರಿಸಲು ನೆರವಾಗಲಿದೆ. ಭೂಮಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಲಿದೆ. ಕೃಷಿಕರ ಜೀವನೋಪಾಯಕ್ಕೆ ಧಕ್ಕೆ ಒದಗದಂತೆ ಎಚ್ಚರವಹಿಸಬೇಕು.


-ಕಿಶೋರ್‌ ಜೈನ್‌, ‘ಕ್ರೆಡಾಯ್‌’ ರಾಜ್ಯ ಘಟಕದ ಅಧ್ಯಕ್ಷ

**

‘ವಿನಾಶಕಾರಿಯಾದುದು’
‘ಭೂಮಿ ಖರೀದಿಯ ಗರಿಷ್ಠ ಮಿತಿಯನ್ನು ಹೆಚ್ಚಿಸಿದ್ದಲ್ಲಿ, ಹೆಚ್ಚು ಜನ ಜಮೀನನ್ನು ಖರೀದಿಸಲು ಪ‍್ರಾರಂಭಿಸಿದರೆ, ರೈತರ ಜಮೀನಿನ ಬೆಲೆಯೂ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಬೇರೆ ರಾಜ್ಯದಲ್ಲಿ ಈ ಕಾನೂನು ಅಸ್ತಿತ್ವದಲ್ಲಿಲ್ಲ’ ಎಂಬುದಾಗಿ ತಿದ್ದುಪಡಿ ಪ್ರಸ್ತಾವನೆ ಹೇಳುತ್ತದೆ. ಯಾವ ರಾಜ್ಯದಲ್ಲೂ ಅಸ್ತಿತ್ವದಲ್ಲಿರದ ಕಾನೂನನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂದೂ ಹೇಳುತ್ತದೆ. ಆಗ ಭೂಮಿ ಉಳ್ಳವರ ಸ್ವತ್ತಾಗುತ್ತದೆ. ತಕ್ಷಣಕ್ಕೆ ಬೆಲೆ ಬರುತ್ತದೆ ನಿಜ. ಆದರೆ, ನಿಧಾನವಾಗಿ ರೈತ ಗತಕಾಲಕ್ಕೆ ಸೇರಿ ಹೋಗುತ್ತಾನೆ. ಈ ಆಲೋಚನೆ ತುಂಬಾ ವಿನಾಶಕಾರಿಯಾದುದು.


-ದೇವನೂರ ಮಹಾದೇವ, ಸಾಹಿತಿ

**

ತಲೆ ಎತ್ತಲಿವೆ ರೆಸಾರ್ಟ್‌
ಯಾರು ಬೇಕಾದರೂ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ನೀಡುವುದರಿಂದ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತದೆ. ಲ್ಯಾಂಡ್‌ ಬ್ಯಾಂಕ್‌ ಮಾಡಿಕೊಂಡು, ರಿಯಲ್‌ ಎಸ್ಟೇಟ್‌ಗೆ ಬಳಸುತ್ತಾರೆ. ಮೋಜಿಗಾಗಿ ರೆಸಾರ್ಟ್‌, ಫಾರ್ಮ್‌ಹೌಸ್‌ ಮಾಡುತ್ತಾರೆ. ರೈತರ ಆರ್ಥಿಕ ಮುಗ್ಗಟ್ಟಿನ ಲಾಭ ಪಡೆಯುತ್ತಾರೆ. ನಿಜವಾದ ಕೃಷಿಕ ಉಳಿಯುವುದಿಲ್ಲ.


-ರಮೇಶ ಪಾಟೀಲ, ಉದ್ಯಮಿ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT