ಗುರುವಾರ , ಮಾರ್ಚ್ 4, 2021
29 °C
ಸಭಾಧ್ಯಕ್ಷರ ಭೇಟಿ ಮಾಡಿದ ಪರಮೇಶ್ವರ, ಖಂಡ್ರೆ

ಆನಂದ್‌ ಸಿಂಗ್‌ ವಿರುದ್ಧ ದೂರು ನೀಡಲು ‘ಕೈ’ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನಂದ್‌ಸಿಂಗ್‌ ರಾಜೀನಾಮೆ ಅಂಗೀಕರಿಸದಂತೆ ಸಭಾಧ್ಯಕ್ಷರಿಗೆ ದೂರು ಸಲ್ಲಿಸಬೇಕೆ ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಈಶ್ವರಖಂಡ್ರೆ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರೊಂದಿಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.

‘ಆನಂದ್‌ ಸಿಂಗ್‌ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಪಡೆದಿದ್ದೇವೆ. ಆದರೆ, ಅವರ ರಾಜೀನಾಮೆ ಅಂಗೀಕರಿಸದಂತೆ ನಾವು ದೂರು ಸಲ್ಲಿಸಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ’ ಎಂದು ಖಂಡ್ರೆ ಸ್ಪಷ್ಟಪಡಿಸಿದರು. 

ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮಾತನಾಡಿ, ‘ಇದೇ 12 ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದ ಬಗ್ಗೆ ಸಭಾಧ್ಯಕ್ಷರ ಜತೆ ಚರ್ಚೆ ಮಾಡಿದ್ದೇನೆ. ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲಿಲ್ಲ’ ಎಂದರು.

ದೂರು ಕೊಟ್ಟಿಲ್ಲ: ‘ಆನಂದ್‌ಸಿಂಗ್‌ ರಾಜೀನಾಮೆ ಕುರಿತು ಯಾರೂ ದೂರು ಕೊಟ್ಟಿಲ್ಲ. ರಾಜೀನಾಮೆ ಕೊಟ್ಟಿದ್ದಾರೆಯೇ ಎಂದು ವಿಚಾರಿಸಿ
ದರು. ಕೊಟ್ಟಿದ್ದಾರೆ ಎಂದಷ್ಟೇ ಹೇಳಿದ್ದೇನೆ’ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‌ ತಿಳಿಸಿದರು.

‘ರಾಜೀನಾಮೆ ಕೊಡುವುದಾಗಿ ಹೇಳಿ ದಾರಿ ತಪ್ಪಿಸುತ್ತಿರುವವರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ’ ಎಂದು ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೇ ರಮೇಶ್‌ ಕುಮಾರ್‌ ಕಟಕಿಯಾಡಿದರು. ‘ಆಪರೇಷನ್‌ ಕಮಲ’ದ ಆಡಿಯೊ ತನಿಖೆಗೆ ಎಸ್‌ಐಟಿ ರಚಿಸದಿರುವ ಬಗ್ಗೆ ಸೂಕ್ತ ವೇದಿಕೆಯಲ್ಲಿ, ಸೂಕ್ತ ಸಂದರ್ಭದಲ್ಲಿ ಮಾತನಾಡುತ್ತೇನೆ. ಕೆಲವು ನಿರ್ಬಂಧಗಳಿರುವುದರಿಂದ ಮನಬಂದಂತೆ ಮಾತನಾಡುವ ಸ್ವಾತಂತ್ರ್ಯವಿಲ್ಲ’ ಎಂದೂ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು