ವಿಶೇಷ ಪೂಜೆ ಸಲ್ಲಿಸಿ ದೇವಾಲಯ ಸುತ್ತಿದ ಆನಂದ್ ಸಿಂಗ್

ಹೊಸಪೇಟೆ: ಶಾಸಕ ಜೆ.ಎನ್. ಗಣೇಶ್ ಅವರಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಆನಂದ್ ಸಿಂಗ್, ಭಾನುವಾರ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಗರದ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಹೋಮ ಹವನ ಮಾಡಿದರು. ನಂತರ ಊರಮ್ಮ ದೇವಿ ಹಾಗೂ ರಾಂಪುರ ದುರ್ಗಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಎರಡು ದೇವಾಲಯಗಳಿಗೆ ತಲಾ ಒಂಬತ್ತು ಕೆ.ಜಿ.ಯ ಎರಡು ಬೆಳ್ಳಿ ದೀಪಗಳನ್ನು ಸಮರ್ಪಿಸಿದರು. ಬಳಿಕ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ವಿರೂಪಾಕ್ಷೇಶ್ವರ, ಪಂಪಾದೇವಿ ಮತ್ತು ಭುವನೇಶ್ವರಿ ದೇವಿಯ ದರ್ಶನ ಪಡೆದರು. ಅವರೊಂದಿಗೆ ಅವರ ಪತ್ನಿ ಲಕ್ಷ್ಮಿ ಸಿಂಗ್ ಇದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ‘ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 20 ದಿನಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲಿಯವರೆಗೆ ವಾರಕ್ಕೊಮ್ಮೆ ಪರೀಕ್ಷೆ ಮಾಡುತ್ತಿದ್ದಾರೆ’ ಎಂದರು.
‘ಅಧಿವೇಶನ ಮುಗಿಯುವವರೆಗೆ ಬೆಂಗಳೂರಿನಲ್ಲಿ ಇರುವಂತೆ ಪಕ್ಷದ ಮುಖಂಡರು ಸೂಚಿಸಿದ್ದಾರೆ. ಹಾಗಾಗಿ ಫೆ. 11ರಂದು ಪುನಃ ಬೆಂಗಳೂರಿಗೆ ಹೋಗುತ್ತೇನೆ. ಹೆಚ್ಚು ಹೊತ್ತು ಅಧಿವೇಶನದಲ್ಲಿ ಕೂರಲು ಆಗುತ್ತಿಲ್ಲ. ಅಗತ್ಯ ಬಿದ್ದರಷ್ಟೇ ಹೋಗುತ್ತೇನೆ. ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ನನಗೇನೂ ಕೇಳಬೇಡಿ’ ಎಂದು ಪ್ರತಿಕ್ರಿಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.