ಆನಂದ್‌ ಸಿಂಗ್‌ ಮೇಲೆ ಹಲ್ಲೆ; ಗುಟ್ಟು ರಟ್ಟು ಮಾಡಿದ್ದಕ್ಕೆ ಸಿಟ್ಟು

7
ಅತಿಯಾದ ಹಸ್ತಕ್ಷೇಪದಿಂದ ಒಳಗೊಳಗೆ ಕುದಿಯುತ್ತಿದ್ದ ಜೆ.ಎನ್‌.ಗಣೇಶ್‌, ಭೀಮಾ ನಾಯ್ಕ

ಆನಂದ್‌ ಸಿಂಗ್‌ ಮೇಲೆ ಹಲ್ಲೆ; ಗುಟ್ಟು ರಟ್ಟು ಮಾಡಿದ್ದಕ್ಕೆ ಸಿಟ್ಟು

Published:
Updated:
Prajavani

ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರ ಅತಿಯಾದ ಹಸ್ತಕ್ಷೇಪದಿಂದ ಒಳಗೊಳಗೆ ಕುದಿಯುತ್ತಿದ್ದ ಶಾಸಕರಾದ ಜೆ.ಎನ್‌. ಗಣೇಶ್‌ ಹಾಗೂ ಭೀಮಾ ನಾಯ್ಕ, ‘ಆಪರೇಷನ್‌ ಕಮಲ’ದ ಗುಟ್ಟು ರಟ್ಟು ಮಾಡಿದ್ದಕ್ಕೆ ಸಿಂಗ್‌ ವಿರುದ್ಧ ತೀವ್ರ ಕೆಂಡಾಮಂಡಲರಾಗಿದ್ದರು. ಆ ಸಿಟ್ಟಿನಿಂದಲೇ ಗಣೇಶ್‌ ಅವರು ಹಲ್ಲೆ ನಡೆಸಿರುವ ಸಾಧ್ಯತೆ ಇದೆ.

ಬಿಜೆಪಿಯು ಇತ್ತೀಚೆಗೆ ನಡೆಸಿದ ‘ಆಪರೇಷನ್‌ ಕಮಲ’ದ ಸಂದರ್ಭದಲ್ಲಿ ಒಂದು ತಂಡದೊಂದಿಗೆ ಜೆ.ಎನ್‌. ಗಣೇಶ್‌ ಹಾಗೂ ಭೀಮಾ ನಾಯ್ಕ ಅವರು ಮುಂಬೈಗೆ ತೆರಳಿದ್ದರು. ಒಂದು ಹಂತದಲ್ಲಿ ಬಿಜೆಪಿ ಸೇರಲು ನಿರ್ಧರಿಸಿದ್ದ ಆನಂದ್‌ ಸಿಂಗ್‌ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲ, ಮುಂಬೈಗೆ ತೆರಳಿದ ಕಾಂಗ್ರೆಸ್‌ ಸದಸ್ಯರ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಗಣೇಶ್‌, ಭೀಮಾ ನಾಯ್ಕ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಶನಿವಾರ ತಡರಾತ್ರಿ ಪರಸ್ಪರ ವಾಗ್ವಾದ ನಡೆದು, ಹಲ್ಲೆಯಲ್ಲಿ ಕೊನೆಗೊಂಡಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರು ಘಟನೆ ನಡೆದಿರುವುದನ್ನು ಖಚಿತ ಪಡಿಸಿದ್ದಾರೆ.

ಅಂದಹಾಗೆ, ಗಣೇಶ್‌ ಹಾಗೂ ಭೀಮಾ ನಾಯ್ಕ ಅವರ ಜತೆಗೆ ಆನಂದ್‌ ಸಿಂಗ್‌ ಮುಸುಕಿನ ಗುದ್ದಾಟ ಆರಂಭವಾಗಿದ್ದು ಇತ್ತೀಚಿನ ಹೊಸ ಬೆಳವಣಿಗೆ ಏನಲ್ಲ. ವಿಧಾನಸಭೆ ಚುನಾವಣೆ ನಡೆದ ನಂತರದಿಂದ ಜಟಾಪಟಿ ನಡೆಯುತ್ತಿದೆ.

ಇದನ್ನೂ ಓದಿ: ‘ಆಪರೇಷನ್‌’ ಮಾಹಿತಿ ಸೋರಿಕೆಯಿಂದಾಗಿ ಹೊಯ್‌ಕೈ;ಆಸ್ಪತ್ರೆಗೆ ದಾಖಲಾದ ಆನಂದ್‌ ಸಿಂಗ್

ಬಿ.ಎಂ.ಎಂ. ಗಣಿ ಕಂಪನಿಯ ವಿಚಾರದಲ್ಲಿ ಆನಂದ್‌ ಸಿಂಗ್‌ ಹಾಗೂ ಭೀಮಾ ನಾಯ್ಕ ಅವರ ನಡುವೆ ಬಿರುಕು ಉಂಟಾಗಿತ್ತು. ಅದು ಎಷ್ಟರಮಟ್ಟಿಗೆ ಇಬ್ಬರ ನಡುವೆ ದ್ವೇಷದ ಹೊಗೆ ಹೊತ್ತಿಸಿತ್ತು ಎಂದರೆ, ಆನಂದ್‌ ಸಿಂಗ್‌ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಭೀಮಾ ನಾಯ್ಕ ಮನೆ ಎದುರು ಕಚೇರಿ ಆರಂಭಿಸಿದ್ದರು. ಪದೇ ಪದೇ ಆ ಕ್ಷೇತ್ರಕ್ಕೆ ಹೋಗಿ ಅಲ್ಲಿನ ವಿಷಯಗಳಲ್ಲಿ ಮೂಗು ತೂರಿಸುತ್ತಿದ್ದರು. ಇದರಿಂದ ಕೆರಳಿದ್ದ ಭೀಮಾ ನಾಯ್ಕ ಬೆಂಬಲಿಗರು ಆನಂದ್‌ ಸಿಂಗ್‌ ಕಟಾಟ್‌ಗೆ ಚಪ್ಪಲಿ ಹಾರ ಹಾಕಿದ್ದರು. ಎರಡೂ ಕಡೆಯ ಬೆಂಬಲಿಗರ ಮಧ್ಯೆ ಆರೋಪ–ಪ್ರತ್ಯಾರೋಪ ಮುಂದುವರಿದಿತ್ತು.

ಅದೇ ರೀತಿ ಕಂಪ್ಲಿ ಕ್ಷೇತ್ರದಲ್ಲೂ ಆನಂದ್‌ ಸಿಂಗ್‌ ಮೂಗು ತೂರಿಸುವುದು ಹೆಚ್ಚಾಗಿತ್ತು. ಅದರಲ್ಲೂ ಅವರ ಅಳಿಯ ಸಂದೀಪ್‌ ಸಿಂಗ್‌ ಹಸ್ತಕ್ಷೇಪ ಮಾಡುತ್ತಿದ್ದರು. ಈ ವಿಷಯವನ್ನು ಗಣೇಶ್‌ ಅವರು ನೇರವಾಗಿಯೇ ಆನಂದ್‌ ಸಿಂಗ್‌ ಗಮನಕ್ಕೆ ತಂದಿದ್ದರು. ಆದರೂ ಹಸ್ತಕ್ಷೇಪ ನಿಂತಿರಲಿಲ್ಲ. ಕಂಪ್ಲಿ ಹೊಸ ತಾಲ್ಲೂಕು ಆಗಿ ಅಸ್ತಿತ್ವಕ್ಕೆ ಬಂದರೂ ಇನ್ನು ಕೆಲವು ಕಚೇರಿಗಳು ಹೊಸಪೇಟೆ ನಗರದಲ್ಲೇ ಕೆಲಸ ನಿರ್ವಹಿಸುತ್ತಿವೆ. ಮೂಗು ತೂರಿಸಲು ಅದು ಕೂಡ ಪ್ರಮುಖ ಕಾರಣ.

‘ಕಂಪ್ಲಿ ಎಸ್ಟಿ ಹಾಗೂ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರಗಳೆರಡೂ ವಿಜಯನಗರ ಕ್ಷೇತ್ರಕ್ಕೆ ಹೊಂದಿಕೊಂಡಂತಿವೆ. ಇವುರೆಡೂ ಕ್ಷೇತ್ರಗಳ ಮೇಲೆ ತನ್ನ ಪ್ರಭಾವ ಬೀರಿ ವರ್ಚಸ್ಸು ಬೆಳೆಸಿಕೊಳ್ಳಲು ಆನಂದ್‌ ಸಿಂಗ್‌ ಹವಣಿಸುತ್ತಿದ್ದಾರೆ. ಅದಕ್ಕಾಗಿಯೇ ಆ ಕ್ಷೇತ್ರಗಳ ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಅದು ಸಹಜವಾಗಿಯೇ ಆ ಕ್ಷೇತ್ರದ ಶಾಸಕರನ್ನು ಕೆರಳಿಸಿದೆ’ ಎನ್ನುತ್ತಾರೆ ಸ್ಥಳೀಯ ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರು.


ಶಾಸಕ ಆನಂದ್‌ ಸಿಂಗ್‌ ಅವರ ಬೆಂಬಲಿಗರು ಹೊಸಪೇಟೆಯ ರೋಟರಿ ವೃತ್ತದಲ್ಲಿ ಭಾನುವಾರ ಸಂಜೆ ರಸ್ತೆತಡೆ ನಡೆಸಿ, ಟೈರ್‌ ಸುಟ್ಟು ಆಕ್ರೋಷ ಹೊರ ಹಾಕಿದರು.-ಪ್ರಜಾವಾಣಿ ಚಿತ್ರ 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !