ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನಭಾಗ್ಯ’ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಸಮೀಕ್ಷೆ ನಡೆಸಿ, ಅನರ್ಹರ ಕೈಬಿಡಲು ಕ್ರಮ: ಅಧಿಕಾರಿಗಳಿಗೆ ಸಿಎಂ ಸೂಚನೆ
Last Updated 2 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಅನರ್ಹರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಕೈಬಿಡಲು ಶೀಘ್ರವೇ ಸಮೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬರ ಪರಿಸ್ಥಿತಿ ಕುರಿತ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

1.12 ಕೋಟಿ ಕುಟುಂಬಗಳು ಯೋಜನೆಯ ಫಲಾನುಭವಿಗಳು. ಆದರೆ, ನಿಜವಾದ ಬಿಪಿಎಲ್‌ ಕುಟುಂಬಗಳಲ್ಲದೇ ಸುಸ್ಥಿತಿಯಲ್ಲಿರುವವರೂ ಸೇರಿಕೊಂಡಿದ್ದಾರೆ. ಇದರಿಂದ ದುರುಪಯೋಗ ಹೆಚ್ಚಾಗಿದೆ. ಈ ಕಾರಣಕ್ಕೆ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಕೆ.ಜಿ ಅಕ್ಕಿಗೆ ₹ 34 ಕೊಟ್ಟು ಖರೀದಿಸುತ್ತಿದೆ. ಕಡು ಬಡ ಕುಟುಂಬಗಳಿಗೆ ಮಾತ್ರದ ಇದರ ಪ್ರಯೋಜನ ಸಿಗಬೇಕು ಎಂದು ಯಡಿಯೂರಪ್ಪ ಹೇಳಿದರು.

ಇದರಿಂದ ಸುಮಾರು ₹2,500 ಕೋಟಿ ರೂ.ಗಳ ಹೊರೆ ತಪ್ಪಿಸಬಹುದಾಗಿದೆ ಎಂದರು.

ರಾಜ್ಯ ಕೆಲವು ಗೋದಾಮುಗಳಲ್ಲಿ ಒಂದೆರಡು ವರ್ಷಗಳಿಂದ ಅನ್ನ ಭಾಗ್ಯದ ಅಕ್ಕಿಯನ್ನು ದಾಸ್ತಾನಿಡಲಾಗಿದೆ. ಅಕ್ಕಿ ಹುಳು ಹಿಡಿದು ಹಾಳಾಗಿದೆ. ಇನ್ನು ಮುಂದೆ ಯಾವುದೇ ಜಿಲ್ಲೆಯಲ್ಲಿ ಅಕ್ಕಿಯನ್ನು ದಾಸ್ತಾನಿಟ್ಟುಕೊಂಡರೇ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

10 ದಿನಗಳಲ್ಲಿ ₹2 ಸಾವಿರ ಜಮೆ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿ ರೈತರಿಗೆ ಕೇಂದ್ರ ನೀಡುವ ₹ 6 ಸಾವಿರ ಜತೆಗೆ ರಾಜ್ಯವೂ ₹ 4 ಸಾವಿರ ನೀಡಲಿದ್ದು, ಮೊದಲ ಕಂತಿನ ₹ 2 ಸಾವಿರವನ್ನು 10 ದಿನಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

‘ಗಂಗಾಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ನೀಡಲು ಆಧಿಕಾರಿಗಳು, ಸಿಬ್ಬಂದಿ ಸತಾಯಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಎಚ್ಚರಿಸಿದರು.

‘ಮುಖ್ಯ ಕಾರ್ಯದರ್ಶಿ ತಿಂಗಳಿಗೆ ಒಮ್ಮೆ ಒಂದು ಜಿಲ್ಲೆಗೆ ಹೋಗಿ ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು 15 ದಿನಗಳಿಗೊಮ್ಮೆ, ಕ್ಷೇತ್ರ ಭೇಟಿ ಮಾಡಬೇಕು’ ಎಂದು ಯಡಿಯೂರಪ್ಪ ಹೇಳಿದರು.

ಅಧಿಕಾರಿಗಳಿಗೆ ಚಾಟಿ

‘ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರ್ತವ್ಯದಲ್ಲಿ ಕಡ್ಡಾಯವಾಗಿ ಇರಲೇಬೇಕು. ಜನರ ಸೇವೆಗೆ ಸದಾ ಸಿದ್ಧವಾಗಿರಬೇಕು, ಸಭೆ, ಸಮಾರಂಭಗಳನ್ನು ಸಹ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆರಂಭಿಸಬೇಕು’ ಎಂದು ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದರು.

ವರ್ಗಾವಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂತ್ರಿ ಮಂಡಲ ರಚನೆ ಆಗುವವರೆಗೆ ಮುಖ್ಯಮಂತ್ರಿ ಏಕಾಂಗಿಯಾಗಿ ಕೆಲಸ ಮಾಡಲು ಅಧಿಕಾರವಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

* ಅಧಿಕಾರಿಗಳು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರೆ, ಶಾಸಕರಿಂದ ಬರುವ ಯಾವುದೇ ಒತ್ತಡಗಳಿಗೂ ಸೊಪ್ಪು ಹಾಕುವುದಿಲ್ಲ

ಬಿ.ಎಸ್‌.ಯಡಿಯೂರಪ್ಪ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT