ಬುಧವಾರ, ಜನವರಿ 29, 2020
28 °C

ನಿಷೇಧಾಜ್ಞೆ ಧಿಕ್ಕರಿಸಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿಯಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿಗಿಳಿದ ಪ್ರತಿಭಟನಕಾರರು, ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಧಿಕ್ಕರಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟವಾದ ‘ಪೀಪಲ್ಸ್‌ ಫೋರಂ’ ಕಲಬುರ್ಗಿ ಬಂದ್‌ಗೆ ಕರೆ ನೀಡಿತ್ತು. ಶಾಲಾ–ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಜನಸಂಚಾರ ಅಷ್ಟಾಗಿ ಇರಲಿಲ್ಲ. ಸಂಜೆವರೆಗೂ ಮಾರುಕಟ್ಟೆ ಪ್ರದೇಶ ಸಂಪೂರ್ಣ ಬಂದ್‌ ಆಗಿತ್ತು.

ಪ್ರತಿಭಟನಕಾರರು ಅಪಾರ ಸಂಖ್ಯೆಯಲ್ಲಿ ನೆಹರೂ ಗಂಜ್‌ನ ನಗರೇಶ್ವರ ಶಾಲೆಯ ಬಳಿ ಸೇರಿದರು. ಮುಖಂಡರನ್ನು ಬಂಧಿಸಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಯತ್ನಿಸಿದರು. ಪ್ರತಿಭಟನಕಾರರು ಪೊಲೀಸ್‌ ವಾಹನಗಳ ಎದುರು ಮಲಗಿ– ವಾಹನಗಳ ಮೇಲೇರಿ ಬಂಧಿತರನ್ನು ಕರೆದೊಯ್ಯದಂತೆ ತಡೆದರು. ಇವರು ಅಪಾರ ಸಂಖ್ಯೆಯಲ್ಲಿದ್ದ ಕಾರಣ ಪೊಲೀಸರೂ ಅಸಹಾಯಕರಾದರು.

ನಂತರ ಪ್ರತಿಭಟನಕಾರರು ಮೆರವಣಿಗೆಯಲ್ಲಿ ಜಗತ್‌ ವೃತ್ತಕ್ಕೆ ಬಂದು ಅಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಮುಸ್ಲಿಮರು ಅಲ್ಲೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಂದ್‌ ಅಂಗವಾಗಿ ಸೂಪರ್‌ ಮಾರ್ಕೆಟ್‌, ಗಂಜ್‌, ಹುಮನಾಬಾದ್‌ ವರ್ತುಲ ರಸ್ತೆ ಹಾಗೂ ರೈಲು ನಿಲ್ದಾಣ ರಸ್ತೆಯಲ್ಲಿನ ಅಂಗಡಿ, ವಾಣಿಜ್ಯ ಮಳಿಗೆಗಳನ್ನು ಮುಚ್ಚಲಾಗಿತ್ತು.ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ, ಸಿಪಿಐ (ಎಂ) ಹಾಗೂ ಎಸ್‌ಯುಸಿಐ (ಸಿ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ರಾಯಚೂರಿನಲ್ಲಿ ಎಸ್‌ಯುಸಿಐ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಮುಂದೂಡಲಾಯಿತು. ಲಿಂಗಸುಗೂರಿನಲ್ಲಿ ಎಡಪಕ್ಷಗಳವರು ಮನವಿ ಸಲ್ಲಿಸಿದರು. ಕೊಪ್ಪಳ, ಬೀದರ್‌, ಯಾದಗಿರಿ ಜಿಲ್ಲೆಯಲ್ಲಿ ಹೋರಾಟ ನಡೆಯಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು