ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿಬಾರ್‌: ತನಿಖೆಗೆ ಆದೇಶ?

ಮಂಗಳೂರಿನಲ್ಲಿ ಪೊಲೀಸ್‌ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಭೆ ಇಂದು
Last Updated 20 ಡಿಸೆಂಬರ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ಗಲಭೆ ಪೀಡಿತ ಮಂಗಳೂರು ನಗರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಗೋಲಿಬಾರ್‌ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ.

ಮಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ತಮ್ಮ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಸಂಜೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ಹಿಂಸಾಚಾರ ವ್ಯಾಪಿಸದಿರುವಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ಪಡೆದರು. ಗೋಲಿಬಾರ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರವನ್ನು ಮಂಗಳೂರಿನಲ್ಲೇ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ನಾಳೆ ಬೆಳಿಗ್ಗೆ ಮಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಇರುತ್ತಾರೆ. ಅಹಿತಕರ ಘಟನೆಗೆ ಕಾರಣ ಮತ್ತು ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸುತ್ತೇನೆ. ಸಂತ್ರಸ್ತರಿಗೆ ಪರಿಹಾರ ಕೊಡುವ ಬಗ್ಗೆ ಅಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಕೇರಳದ ಪತ್ರಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿ, ಗುರುತಿನ ಚೀಟಿ ಇಲ್ಲದ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕೇರಳದ ವರದಿಗಾರರು ಎಂದು ಗೊತ್ತಾದ ಬಳಿಕ ಭದ್ರತೆಯಲ್ಲಿ ಗಡಿಯವರೆಗೆ ಕಳುಹಿಸಿಕೊಡಲಾಗಿದೆ ಎಂದರು.

ವಿವಾದಾತ್ಮಕ ಹೇಳಿಕೆ ನೀಡಬೇಡಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಸಚಿವರು ಮತ್ತು ಪಕ್ಷದ ಶಾಸಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

‘ಈ ಕುರಿತು ನಾನು ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ ಹೇಳಿಕೆಗಳನ್ನು ನೀಡುತ್ತೇವೆ. ಬೇರೆ ಯಾರೂ ಹೇಳಿಕೆ ನೀಡುವುದು ಬೇಡ’ ಎಂದು ಸಚಿವರು ಮತ್ತು ಶಾಸಕರಿಗೆ ತಿಳಿಸಿದ್ದಾರೆ.

ಮಂಗಳೂರಿನಿಂದ ಮಣಿಪಾಲಕ್ಕೆ ಹೋಗಿ ವಿಶ್ವೇಶತೀರ್ಥ ಸ್ವಾಮೀಜಿಯವರ ಆರೋಗ್ಯ ವಿಚಾರಿಸುವುದಾಗಿ ಹೇಳಿದರು.

ಕಾಂಗ್ರೆಸ್‌ ಪ್ರಚೋದನೆ: ಹಿಂಸಾಚಾರಕ್ಕೆ ಕಾಂಗ್ರೆಸ್‌ ಪ್ರಚೋದನೆಯೇ ಕಾರಣ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ಅನುಭವ ಇರುವವರು. ಗಲಭೆಯ ವಿಚಾರದಲ್ಲಿ ಲಘುವಾಗಿ ಮಾತನಾಡಬಾರದು ಎಂದರು.

‘ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ’

ಮಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಗೊಲೀಬಾರ್‌ ಮಾಡಿದ್ದಾರೆ ಎಂದು
ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸರ್ಕಾರ ಹೇಳದೇ ಪೊಲೀಸರು ಫೈರಿಂಗ್‌ ಮಾಡುತ್ತಾರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಹೇಳಿಕೆ ಅಚ್ಚರಿ ತಂದಿದೆ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಗೋಲಿಬಾರ್‌ ಮಾಡುವ ಉದ್ದೇಶ ನಮಗೂ ಇರಲಿಲ್ಲ, ಅಧಿಕಾರಿಗಳಿಗೂ ಇರಲಿಲ್ಲ’ ಎಂದರು.

‘ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಈ ಕ್ರಮ ತೆಗೆದುಕೊಂಡರು’ ಎಂದು ವಿವರಿಸಿದರು.

ಮಂಗಳೂರಿನಲ್ಲಿ ಗೋಲಿಬಾರ್‌ಗೆ ಇಬ್ಬರು ಬಲಿಯಾದ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಗ್ರ ತನಿಖೆಗೂ ಒತ್ತಾಯಿಸಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಅಮಾಯಕರನ್ನು ಕೊಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆಗ್ರಹಿಸಿದರು.

‘ಕೇವಲ ಪ್ರತಿಭಟನೆ ಮಾತ್ರ ನಡೆದಿತ್ತು. ಹಿಂಸಾಚಾರಕ್ಕೆ ಇಳಿದಿರಲಿಲ್ಲ. ಆದರೆ ಪೊಲೀಸರೇ ಉದ್ದೇಶಪೂರ್ವಕವಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿ, ನಂತರ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದರೂ ಇನ್ನೂ ಒಬ್ಬರೂ ಸತ್ತಿಲ್ಲವೆ ಎಂದು ಇಬ್ಬರುಪೊಲೀಸರು ಮಾತನಾಡಿಕೊಳ್ಳುತ್ತಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದನ್ನು ಗಮನಿಸಿದರೆ ಹೋರಾಟಗಾರರನ್ನು ಕೊಲ್ಲುವ ಸಂಚು ರೂಪಿಸಿದಂತೆ ಕಾಣುತ್ತದೆ’ ಎಂದು ಆರೋಪಿಸಿದರು.

‘ಸರ್ಕಾರದ ಗಮನಕ್ಕೆ ಬಾರದೆ ಗೋಲಿಬಾರ್ ಮಾಡಲು ಸಾಧ್ಯವಿಲ್ಲ. ಹಿಂದೆ ಹಾವೇರಿಯಲ್ಲಿ ಗೊಬ್ಬರ ಕೇಳಿದ ಇಬ್ಬರು ರೈತರನ್ನು ಕೊಲ್ಲಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಳಿತ ಗಮನಿಸಿದರೆ ಹಿಟ್ಲರ್ ಆಡಳಿತ ನೆನಪಿಗೆ ಬರುತ್ತದೆ. ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು ನೀಡುತ್ತಿದ್ದು, ದೇಶದಲ್ಲಿ ನಡೆಯುತ್ತಿರುವ ಗಲಭೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ
ಮೂಲಕ ಗಲಭೆ ಸೃಷ್ಟಿಸಲಾಗುತ್ತಿದೆ’ ಎಂದು ಅವರು ವಾಗ್ದಾಳಿನಡೆಸಿದರು.‌

ಯುವಕರ ಬಲಿ: ‘ಪ್ರತಿಭಟನೆ ಮಾಡಿದ ಯುವಕರ ಮೇಲೆ ಗುಂಡು ಹಾರಿಸಿ ಬಲಿಹಾಕಲಾಗುತ್ತಿದೆ. ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಸೃಷ್ಟಿಸಿ ಜನರನ್ನು ಕೊಲ್ಲಲಾಗುತ್ತಿದೆ.ಮುಂದಿನ ದಿನಗಳಲ್ಲಿ ಯುವ ಜನರು ಉದ್ಯೋಗ ಕೇಳುತ್ತಾರೆ ಎಂಬ ಕಾರಣಕ್ಕೆ ಈಗಿನಿಂದಲೇ ಗುಂಡಿಟ್ಟು ಹತ್ಯೆಮಾಡುವ ಕೆಲಸ ಆರಂಭಿಸಿದ್ದಾರೆ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಟೀಕಿಸಿದರು.

ದೇಶದಲ್ಲಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆದಿದೆ. ಸರ್ಕಾರದ ವಿರುದ್ಧ ಹೋರಾಟ ಮಾಡುವುದು
ತಪ್ಪೇ? ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಅನ್ನ, ಉದ್ಯೋಗ ಕೊಡಿ ಎಂದು ಕೇಳಿದರೆ ಗುಂಡು ಹಾರಿಸುತ್ತಿದ್ದಾರೆ ಎಂದು ಕುಟುಕಿದರು.

****

ಬ್ರಿಟಿಷರ ಕಾಲದಲ್ಲಿ ಅಲ್ಪ, ಸ್ವಲ್ಪ ಸ್ವಾತಂತ್ರ್ಯ ಇತ್ತು. ಈಗ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸ ನಡೆದಿದೆ. ಗೋಲಿಬಾರ್‌ಗೆ ಮುಖ್ಯಮಂತ್ರಿ, ಗೃಹ ಸಚಿವರೇ ಹೊಣೆ

- ಡಿ.ಕೆ.ಶಿವಕುಮಾರ್, ಶಾಸಕ

ಹಿಂದೂ, ಮುಸ್ಲಿಂ ನಡುವೆ ಕೆರಳಿಸುವ ಕೆಲಸ ನಡೆದಿದೆ. ಬಿಜೆಪಿಯವರು ನಕಲಿ ದೇಶಪ್ರೇಮಿಗಳು. ಪೌರತ್ವ ಕೇಳಲು ಇವರಿಗೆ ಯಾವ ನೈತಿಕತೆ ಇದೆ
-ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT