ಶನಿವಾರ, ಮಾರ್ಚ್ 28, 2020
19 °C
ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡ ಗುಜರಾತ್‌ನ ವಂಚಕ

ಅಡಿಕೆ ವ್ಯಾಪಾರಿಗೆ ₹9.96 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕುಮಟಾದ ವರ್ತಕರೊಬ್ಬರಿಂದ 49 ಚೀಲ ಅಡಿಕೆ ತರಿಸಿಕೊಂಡ ಗುಜರಾತ್‌ನ ಕಛ್ ಜಿಲ್ಲೆಯ ಭುಜ್‌ನ ಸಗಟು ವರ್ತಕನೊಬ್ಬ, ಒಟ್ಟು ₹9.96 ಲಕ್ಷ ಮೋಸ ಮಾಡಿದ್ದಾನೆ.

ಸಣ್ಣ ಬಂದರು ರಸ್ತೆಯ ಸುಬ್ರಹ್ಮಣ್ಯ ಭಟ್ ವಂಚನೆಗೊಳಗಾದವರು. ತಮಗಾಗಿರುವ ಮೋಸದ ಬಗ್ಗೆ ಅವರು ಕುಮಟಾ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ. 

ಅವರಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಕರೆ ಮಾಡಿದ್ದ ಶಾ ಹಿತೇಶ ಭಾಯಿ ಎಂಬಾತ, ‘ನಾನು ಅಡಿಕೆ ಮತ್ತು ಮಾವಾ ಸಗಟು ವ್ಯಾಪಾರ ಮಾಡುತ್ತಿದ್ದೇನೆ. ಭುಜ್‌ನ ಜಿಐಡಿಸಿ, ಮಾರ್ಕೆಟ್ ಯಾರ್ಡ್ ಎದುರು ಸುರಮಧುರ ಸೂಪರ್ ಮಾರ್ಕೆಟ್ ಹೆಸರಿನ ಅಂಗಡಿಯಿದೆ’ ಎಂದು ಪರಿಚಯಿಸಿಕೊಂಡಿದ್ದ. 

ತನಗೆ 19 ಚೀಲ ಅಡಿಕೆ ಬೇಕಿದ್ದು, ತನ್ನ ವಿಳಾಸಕ್ಕೆ ಕಳುಹಿಸುವಂತೆ ಕೇಳಿದ್ದ. ಅಡಿಕೆ ತಲುಪಿದ ಕೂಡಲೇ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿಯೂ ತಿಳಿಸಿದ್ದ. ಅದರಂತೆ ಸುಬ್ರಹ್ಮಣ್ಯ ಭಟ್, ನ.29ರಂದು ₹ 3.74 ಲಕ್ಷ ಮೌಲ್ಯದ ಅಡಿಕೆಯನ್ನು ಕಳುಹಿಸಿದ್ದರು. ಬಳಿಕ ಟ್ರಾನ್ಸ್‌ಪೋರ್ಟ್ ಕಂಪನಿ ನೀಡಿದ ಮೂಲ ಬಿಲ್‌ಗಳನ್ನು ಆರೋಪಿಯ ವಿಳಾಸಕ್ಕೆ ಕೊರಿಯರ್ ಮಾಡಿದ್ದರು.

ಆರೋಪಿಯು ಆ ಬಿಲ್‌ಗಳನ್ನು ಟ್ರಾನ್ಸ್‌ಪೋರ್ಟ್ ಕಂಪನಿಗೆ ನೀಡಿ ಅಡಿಕೆಯ ಚೀಲಗಳನ್ನು ತೆಗೆದುಕೊಂಡು ಹೋಗಿದ್ದ. ಸುಬ್ರಹ್ಮಣ್ಯ ಅವರು ಅಡಿಕೆಗೆ ಹಣ ಪಾವತಿಸುವಂತೆ ಕೇಳಿದಾಗ ಏನೇನೋ ಸಬೂಬು ನೀಡಿದ್ದ. ಅಲ್ಲದೇ, ತನಗೆ ಇನ್ನೂ 30 ಚೀಲ ಅಡಿಕೆ ಬೇಕು ಎಂದು ಕೇಳಿದ್ದ. ಅಡಿಕೆ ಬಂದ ಕೂಡಲೇ ಎರಡೂ ಕಂತುಗಳ ಹಣವನ್ನು ಒಂದೇ ಸಲಕ್ಕೆ ಕೊಡುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದ. ಈ ಬಾರಿಯೂ ಆರೋಪಿಯ ಮಾತು ನಂಬಿದ ಸುಬ್ರಹ್ಮಣ್ಯ, ಡಿ.7ರಂದು ₹ 6.22 ಲಕ್ಷ ಮೌಲ್ಯದ 30 ಚೀಲ ಅಡಿಕೆಯನ್ನು ಕಳುಹಿಸಿದರು. 

ಅದನ್ನೂ ‍ಪಡೆದುಕೊಂಡ ವಂಚಕ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈಗ ಆತನನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸುವಂತೆ ಸುಬ್ರಹ್ಮಣ್ಯ ಅವರು ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು