ಶನಿವಾರ, ಜುಲೈ 24, 2021
27 °C

ಕೊರೊನಾ ಸಾಂತ್ವನ | ಪರೀಕ್ಷೆ ಭಯ ದೂರವಿಡಿ

ಡಾ. ಗಿರೀಶ್ ಎನ್.ರಾವ್ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಗೆ ಮುನ್ನ ದುಗುಡ– ಆತಂಕ ಸಹಜ. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಶೇ 95ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂತಹ ಒತ್ತಡವನ್ನು ಸಂಭಾಳಿಸಬಲ್ಲರು. ಸದ್ಯ ಕೋವಿಡ್‌– 19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಪರೀಕ್ಷೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಯಾವಾಗ ಪರೀಕ್ಷೆ ನಡೆಸಲಾಗುತ್ತದೆ ಎಂಬುದರ ಜೊತೆಗೆ ಭವಿಷ್ಯದ ಚಿಂತೆ, ಗೊಂದಲ ವಿದ್ಯಾರ್ಥಿ ಮಿತ್ರರನ್ನು, ಪರೀಕ್ಷಾರ್ಥಿಗಳನ್ನು ಕಾಡುತ್ತಿರಬಹುದು. ಈ ಸಂಧರ್ಭದಲ್ಲಿ ‘ನೀವು ಒಂಟಿಯಲ್ಲ. ಪರಿಹಾರ ಮಾರ್ಗಗಳಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು’ ಎಂಬ ಧೈರ್ಯವನ್ನು ಅವರಿಗೆ ನೀಡುವುದು ಅಗತ್ಯ.


ಡಾ. ಗಿರೀಶ್ ಎನ್.ರಾವ್

1. ಈ ಗೊಂದಲದ ಸಮಯದಲ್ಲಿ ಮನಸ್ಸಿಗೆ ಖೇದವಾಗುವುದು, ವಿನಾಕಾರಣ ಅಳು ಬರುವಂತಾಗುವುದು, ಕಿರಿಕಿರಿಯಾಗುವುದು ಸಹಜ. ಇತರರೊಂದಿಗೆ ನಿಮ್ಮ ದುಃಖ– ದುಮ್ಮಾನ, ಕ್ಲೇಶ ಹಂಚಿಕೊಳ್ಳಿ. ಆಗ ಅಸ್ಪಷ್ಟ ಭಾವನೆಗಳಿಗೆ ಒಂದು ಮೂರ್ತ ರೂಪ ದೊರೆತು ಪರಿಹಾರ ಮಾರ್ಗ ಕಾಣುತ್ತದೆ. ಕೋಪ ಬಂದಾಗ ಎದುರು ಬಂದವರ ಮೇಲೆ ಹಾಯುವುದರ ಬದಲು, ತಕ್ಷಣ ಪ್ರತಿಕ್ರಿಯಿಸದೆ ಮಾತುಕತೆಯನ್ನು ಮುಂದಕ್ಕೆ ದೂಡಿ.

2. ಲಾಕ್‌ಡೌನ್‌ ಸಮಯದಲ್ಲಿ ಓದು ಮುಂದುವರಿಸಲು / ಮನನ ಮಾಡಲು ಕಷ್ಟವಾಗುತ್ತಿರಬಹುದು. ಆದರೆ ಹೆಚ್ಚಿನ ಸಮಯ ಸಿಕ್ಕಿರುವುದು ಲಾಭ ಎಂದು ತಿಳಿದುಕೊಳ್ಳಿ.  ಮನನದ ನಡುವೆ ಅಂತರವಿರಲಿ. ಪಾಠ, ಆಟ, ಊಟದ ಕುರಿತು ವೇಳಾಪಟ್ಟಿ ತಯಾರಿಸಿ ಅದರಂತೆ ಪಾಲಿಸಿ.

3. ಏಕಾಗ್ರತೆ ಸಾಧಿಸಿ ಓದುವಾಗ ಬೇರೆಬೇರೆ ಚಿಂತೆ ಕಾಡಬಹುದು. ಇಂತಹ ಚಿಂತೆಗಳಿಗಾಗಿಯೇ ಸಮಯವನ್ನು ಮೀಸಲಿಡುತ್ತೇನೆಂದು ನಿರ್ಧರಿಸಿ, ತಕ್ಷಣಕ್ಕೆ 2-3 ಪುಟವಾದರೂ ಸರಿ ಓದಲು ಶುರುಮಾಡಿ.

4. ಭಂಗ ತರಬಹುದಾದ ಮೊಬೈಲ್ ಫೋನ್ ದೂರವಿಡಿ – ಆಟದ ಆ್ಯಪ್‌ಗಳಿದ್ದರೆ ಅವನ್ನು ತೆಗೆದುಹಾಕಿ. ಅವಶ್ಯವೆನಿಸಿದರೆ ನಿಗದಿತ ಸಮಯದಲ್ಲೇ ಟಿವಿ ನೋಡಿ. ಹಾಸಿಗೆಯ ಮೇಲೆ ಓದುವುದರ ಬದಲು ಕುರ್ಚಿ-ಮೇಜು ಬಳಸಿ.
ಕುರುಕಲು ತಿಂಡಿ ಹಾಗೂ ತಿನ್ನುವ ಪದಾರ್ಥಗಳನ್ನು ಸಿಗದಂತೆ ದೂರವಿಡಿ.

5. ಬೇಸರ ನೀಗಲು ಆರೋಗ್ಯದಾಯಕ ತಂತ್ರಗಳನ್ನು ಅನುಸರಿಸಿ: ದೈಹಿಕ ಚಟುವಟಿಕೆ, ಪ್ರಾಣಾಯಾಮ, ಯೋಗಾಸನ ಮಾಡಿ. ಹಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಇಲ್ಲವೇ ಹೊಸತನ್ನು ಕಲಿತುಕೊಳ್ಳಲು ಇದು ಒಳ್ಳೆಯ ಸಮಯ.

6. ತಂದೆ – ತಾಯಂದಿರಿಗೂ ಸಹ ನಿಮ್ಮ ಓದು, ಪರೀಕ್ಷೆ ಕುರಿತು ಕಾಳಜಿ ಸಹಜ. ಅವರು ಪ್ರಶ್ನೆ ಕೇಳಿದರೆ ಸಮಾಧಾನ ಚಿತ್ತದಿಂದ ಅವರಿಗೆ ತಿಳಿಹೇಳಿ.

7. ನೋಟ್ಸ್ ಇಲ್ಲ, ಪುಸ್ತಕ ಇಲ್ಲ ಎಂಬ ಭಯ ಬೇಡ; ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಇದೆ.

8. ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಿರಲಿ ಎಂದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ; ಯಾವುದಾದರೂ ಸಮಸ್ಯೆಗಳು ಇದ್ದರೆ ವಿದ್ಯಾ ಸಂಸ್ಥೆ / ಅಧಿಕಾರಿಗಳ ಗಮನಕ್ಕೆ ತನ್ನಿ.

9. ಅಗತ್ಯವೆನಿಸಿದರೆ ನಿಮ್ಹಾನ್ಸ್ 24 X 7 ಸಹಾಯವಾಣಿ ಸಂಪರ್ಕಸಿ: 080-46110007

ಲೇಖಕ: ಮುಖ್ಯಸ್ಥರು, ಎಪಿಡೆಮಿಯಾಲಜಿ ವಿಭಾಗ, ನಿಮ್ಹಾನ್ಸ್‌, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು