ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಖರೀದಿ ದರ ₹1 ಇಳಿಸಿದ ಬಮೂಲ್‌

ಲಾಕ್‌ಡೌನ್‌ ಸಂದರ್ಭದಲ್ಲಿ ದರ ಇಳಿಕೆ ಕ್ರಮ ಸರಿಯಲ್ಲ: ಹಾಲು ಉತ್ಪಾದಕರು
Last Updated 2 ಜೂನ್ 2020, 14:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಹಾಲು ಖರೀದಿ ದರವನ್ನು ₹1 ಇಳಿಸಿರುವ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ಲೀಟರ್‌ಗೆ ₹26.50ರಂತೆ ಖರೀದಿಸುತ್ತಿದೆ. ಲಾಕ್‌ಡೌನ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಖರೀದಿ ದರ ಇಳಿಸಿರುವುದು ಸರಿಯಲ್ಲ ಎಂದು ಹಾಲು ಉತ್ಪಾದಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನರಸಿಂಹಮೂರ್ತಿ

‘ಹಾಲು ಸರಬರಾಜು ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಬೇಡಿಕೆ ಇಲ್ಲ. ಸೋಮವಾರ 17 ಲಕ್ಷ ಲೀಟರ್‌ ಹಾಲು ಬಂದಿದ್ದರೆ, ಮಂಗಳವಾರ 17.20 ಲಕ್ಷ ಲೀಟರ್‌ ಹಾಲನ್ನು ರೈತರು ಪೂರೈಸಿದ್ದಾರೆ. ರೈತರು ಎಷ್ಟೇ ಹಾಲು ತಂದರೂ ಖರೀದಿಸಲೇಬೇಕು ಎಂಬ ಸನ್ನಿವೇಶವಿದೆ. ಎಲ್ಲ ಹಾಲನ್ನೂ ಖರೀದಿಸಬೇಕು ಎಂದರೆ ದರ ₹1 ಕಡಿಮೆ ಮಾಡಬೇಕಾಗಿರುವುದು ಅನಿವಾರ್ಯ’ ಎಂದು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ದಿನಕ್ಕೆ 13 ಲಕ್ಷ ಲೀಟರ್‌ ಹಾಲು ಬರುತ್ತಿತ್ತು. ಈಗ, 17.20 ಲಕ್ಷ ಲೀಟರ್‌ಗೆ ಏರಿದ್ದು, ತಿಂಗಳಲ್ಲಿ 19 ಲಕ್ಷ ಲೀಟರ್‌ ಹಾಲು ಬರುವ ನಿರೀಕ್ಷೆ ಇದೆ. ಆದರೆ, ದಿನಕ್ಕೆ 8 ಲಕ್ಷ ಲೀಟರ್‌ ಹಾಲು ಮಾತ್ರ ಮಾರಾಟವಾಗುತ್ತಿದ್ದು, ಉಳಿದ 9 ಲಕ್ಷ ಲೀಟರ್‌ನಷ್ಟು ಹಾಲನ್ನು ಪೌಡರ್‌ ಮಾಡಿ ಇಟ್ಟುಕೊಳ್ಳುವ ಪರಿಸ್ಥಿತಿ ಇದೆ’ ಎಂದು ಅವರು ಹೇಳಿದರು.

‘ಒಕ್ಕೂಟವು ಸದ್ಯ ತಿಂಗಳಿಗೆ ₹13 ಕೋಟಿ ನಷ್ಟ ಅನುಭವಿಸುತ್ತಿದೆ. ಈಗ ಖರೀದಿ ದರ ₹1 ಕಡಿಮೆ ಮಾಡಿರುವುದರಿಂದ ತಿಂಗಳಿಗೆ ಒಕ್ಕೂಟಕ್ಕೆ ₹6 ಕೋಟಿ ಉಳಿಯುತ್ತದೆ. ಮೂಲಸೌಕರ್ಯಕ್ಕಾಗಿ ₹2 ತೆಗೆದಿರಿಸಲಾಗುತ್ತಿತ್ತು. ಈಗ ₹1 ಮಾತ್ರ ಮೀಸಲಿಡಲಾಗುತ್ತಿದೆ. ಈ ಎರಡೂ ಕ್ರಮಗಳಿಂದ ಒಕ್ಕೂಟಕ್ಕೆ ಒಟ್ಟು ₹12 ಕೋಟಿ ಉಳಿಯಲಿದ್ದು, ನಷ್ಟ ಸರಿದೂಗಿಸಲು ಸಾಧ್ಯವಾಗುತ್ತದೆ’ ಎಂದು ಅವರು ವಿವರಿಸಿದರು.

‘ಈ ಸಂದರ್ಭದಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳದೆ ಹೋದರೆ ಒಕ್ಕೂಟವನ್ನು ನಷ್ಟದಿಂದ ಪಾರು ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ರೈತರಿಗೆ ಹಣ ಪಾವತಿಸಲೂ ತೊಂದರೆಯಾಗುತ್ತದೆ. ಹಾಲು ಉತ್ಪಾದಕರ ಹಿತದೃಷ್ಟಿಯಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ನರಸಿಂಹಮೂರ್ತಿ ಹೇಳಿದರು.

‘ಇನ್ನು ಮೂರು–ನಾಲ್ಕು ತಿಂಗಳು ಇದೇ ಪರಿಸ್ಥಿತಿ ಇರುತ್ತದೆ. ಹೋಟೆಲ್‌ಗಳು, ಬೀದಿ ಬದಿ ಅಂಗಡಿಗಳು ತೆರೆದ ನಂತರ ಹಾಲು ಮಾರಾಟ ಹೆಚ್ಚಾಗಬಹುದು. ಅಂದಿನ ಹಾಲು, ಅಂದೇ ಮಾರಾಟವಾದರೆ ಅನುಕೂಲವಾಗುತ್ತದೆ. ಪರಿಸ್ಥಿತಿ ಸುಧಾರಿಸಿದ ಕೂಡಲೇ, ಖರೀದಿ ದರವನ್ನು ಹೆಚ್ಚಿಸುವ ಯೋಚನೆ ಇದೆ’ ಎಂದೂ ಅವರು ಹೇಳಿದರು.

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದ 2,200 ಸೊಸೈಟಿಗಳ ಒಂದೂವರೆ ಲಕ್ಷ ರೈತರು ಒಕ್ಕೂಟಕ್ಕೆ ನಿತ್ಯ ಹಾಲು ಸರಬರಾಜು ಮಾಡುತ್ತಾರೆ.

ಪಶು ಆಹಾರದ ಬೆಲೆಯನ್ನೂ ಇಳಿಸಿ

‘ಲಾಕ್‌ಡೌನ್‌ ಇರುವುದರಿಂದ ಮೊದಲೇ ನಾವು ಸಂಕಷ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಖರೀದಿ ದರವೂ ಇಳಿಸಿದರೆ ತೊಂದರೆಯಾಗುತ್ತದೆ’ ಎನ್ನುತ್ತಾರೆ ಹಾಲು ಪೂರೈಕೆದಾರ, ರೈತ ವಿಜಯ್‌ಕುಮಾರ್.

‘ಹಸುಗಳ ಆಹಾರದ ಬೇಡಿಕೆ ಹೆಚ್ಚಾಗುತ್ತಿದೆ.ಮಳೆ ಕೊರತೆಯಿಂದ ಒಣ, ಹಸಿರು ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಪಶು ಆಹಾರದ ಬೆಳೆಯನ್ನೂ ಇಳಿಸಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT