ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಿಂದ ಯತ್ನಾಳ್‌ ಹೊರಹಾಕಿ: ಕಾಂಗ್ರೆಸ್‌

Last Updated 2 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಒತ್ತಾಯಿಸಿದರು.

‘ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕಿಸ್ತಾನಿ ಏಜೆಂಟ್‌ ಎಂದು ಕರೆದು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಅವರನ್ನು ಸದನದಿಂದ ಹೊರಹಾಕಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

‘ದೊರೆಸ್ವಾಮಿ ಬ್ರಿಟಿಷರ ವಿರುದ್ಧ ಹೋರಾಡಿ, ಜೈಲಿಗೆ ಹೋಗಿದ್ದರು. ಕ್ವಿಟ್‌ ಇಂಡಿಯಾ ಚಳುವಳಿಯಲ್ಲೂ ಭಾಗಿಯಾಗಿದ್ದರು. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಿದ್ದಾರೆ. ನಮ್ಮ ಸರ್ಕಾರ ಇದ್ದಾಗಲೂ ಹೋರಾಟ ನಡೆಸಿದ್ದರು. ಮನಮೋಹನ್‌ ಸಿಂಗ್ ಸರ್ಕಾರದ ವಿರುದ್ಧ ಮತ್ತು ಮೋದಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

ಎಂತೆಂಥಾ ಮಹಾನುಭಾವರು!: ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಬಿಸಿ ಬಿಸಿ ವಾಕ್ಸಮರ ನಡೆಯುವಾಗ ಮಧ್ಯ ಪ್ರವೇಶಿದ ಕಾಂಗ್ರೆಸ್‌ನ ಹಿರಿಯ ಶಾಸಕ ಕೆ.ಆರ್‌. ರಮೇಶ ಕುಮಾರ್, ‘ವಿಧಾನಮಂಡಲದ ನೀತಿ ನಿಯಮಾವಳಿ ರೂಪಿಸುವಾಗ ಇಂತಹ ಮಹಾನುಭಾವರು ಬರುತ್ತಾರೆ ಎಂಬುದು ಗೊತ್ತಿರಲಿಲ್ಲ. ಇಂತಹ ವಿಷಯಗಳು ಚರ್ಚೆ ಆಗಬಹುದು ಎಂಬುದು ತಿಳಿದಿರಲಿಕ್ಕಿಲ್ಲ’ ಎಂದರು.

ಇದಕ್ಕೆ ತಿರುಗೇಟು ನೀಡಿದ ಮಾಧುಸ್ವಾಮಿ, ‘ಯಾರು ಮಹಾನುಭಾವರು ಮತ್ತು ಯಾರು ಅಲ್ಲ ಎಂಬುದನ್ನು ನಾವು ತೀರ್ಮಾನಿಸುವುದು ಬೇಡ. ಜನರೇ ತೀರ್ಮಾನಿಸುತ್ತಾರೆ’ ಎಂದು ಹೇಳಿದರು.

‘ವೀರ ಸಾವರ್ಕರ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ, ಅದನ್ನೂ ಈಗ ಸ್ಮರಿಸಿಕೊಳ್ಳಲಿ’ ಎಂದು ಸಚಿವ ಸಿ.ಟಿ.ರವಿ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರನ್ನು ಮೊದಲು ಸದನದಿಂದ ಹೊರಗೆ ಹಾಕಿ’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು. ಕಾಂಗ್ರೆಸ್‌ ಸದಸ್ಯರ ಗಲಾಟೆಯ ನಡುವೆಯೇ ಮಸೂದೆಗಳನ್ನು ಮಂಡಿಸಲಾಯಿತು. ಈ ನಡುವೆ, ಚರ್ಚೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್‌ ಸದಸ್ಯರು ನೋಟಿಸ್‌ ನೀಡಿದರು. ಗದ್ದಲ ಜಾಸ್ತಿಯಾಗಿರುವುದರಿಂದ ಚರ್ಚೆ ಅಸಾಧ್ಯ ಎಂಬ ಕಾರಣ ನೀಡಿ ಕಾಗೇರಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT