ಮಂಗಳವಾರ, ಮೇ 17, 2022
29 °C
ಬಸವ ಜಯಂತಿ ಹಿನ್ನೆಲೆಯಲ್ಲಿ ಐಕ್ಯ ಸ್ಥಳಕ್ಕೆ ಹೆಚ್ಚಿನ ಭಕ್ತರ ಭೇಟಿ ನಿರೀಕ್ಷೆ

ಕೂಡಲಸಂಗಮ: ನೋಡ ಬನ್ನಿ, ಬಸವಣ್ಣನ ಐಕ್ಯ ಮಂಟಪ

ಶ್ರೀಧರ ಗೌಡರ Updated:

ಅಕ್ಷರ ಗಾತ್ರ : | |

Prajavani

ಕೂಡಲಸಂಗಮ: ಬಸವಣ್ಣನ ಐಕ್ಯ ಸ್ಥಳವು ಕೂಡಲಸಂಗಮದಲ್ಲಿ ಸಂಗಮೇಶ್ವರ ದೇವಾಲಯದ ಮುಂಭಾಗದ ಕೃಷ್ಣಾ ಹಾಗೂ ಮಲಪ್ರಭಾ ನದಿಯ ಸಂಗಮ ಸ್ಥಾನದಲ್ಲಿ ಇದೆ. 

ಬಸವಣ್ಣ ಇದೇ ಸ್ಥಳದಲ್ಲಿ ಲಿಂಗೈಕ್ಯರಾದರು. ಮೊದಲಿಗೆ ಈ ಸ್ಥಳದಲ್ಲಿ ಎರಡು ನದಿಗಳು ಹಳ್ಳದ ಮಾದರಿಯಲ್ಲಿ ಹರಿಯುತ್ತಿದ್ದವು. ಸರ್ಕಾರ ನಾರಾಯಣಪುರ ಜಲಾಶಯ (ಬಸವ ಸಾಗರ) ನಿರ್ಮಿಸಲು 1963ರಲ್ಲಿ ಅಡಿಗಲ್ಲು ಹಾಕಿತು. ಜಲಾಶಯದ ಹಿನ್ನಿರಿನಲ್ಲಿ ಬಸವಣ್ಣನವರ ಐಕ್ಯ ಸ್ಥಳ ಮುಳುಗಿ ಹೋಗಲಿದ್ದ ಕಾರಣ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಸಂರಕ್ಷಣೆಗೆ ಮುಂದಾಗಿದ್ದರು.

ಮುಂದೆ ಮುಖ್ಯಮಂತ್ರಿ ದೇವರಾಜ ಅರಸರು ಬಸವಣ್ಣನ ಐಕ್ಯ ಸ್ಥಳ ಸಂರಕ್ಷಣೆಗೆ ₹2.2 ಲಕ್ಷ ವೆಚ್ಚದಲ್ಲಿ 18 ಮೀಟರ್ ವ್ಯಾಸದ ದುಂಡಾಕಾರವಾದ ಬಾವಿ ನಿರ್ಮಿಸಿದ್ದರು. ಕೃಷ್ಣಾ ಮೇಲ್ದಡೆ ಯೋಜನೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಯೋಜನೆ ಅನುಷ್ಠಾನಗೊಂಡು ಬಸಣ್ಣನವರ ಐಕ್ಯ ಮಂಟಪ 1979ರಲ್ಲಿ ಹೊಸ ರೂಪು ಪಡೆದಿತ್ತು.

ಆಗ ಬಾವಿ ನಿರ್ಮಿಸುವ ಜೊತೆಗೆ ಐಕ್ಯ ಮಂಟಪ ವೀಕ್ಷಣೆಗೆ ಕಟ್ಟಿಗೆಯ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರ 1997ರಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾರಂಭಿಸಿತ್ತು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್  ₹36 ಕೋಟಿ ಏಕ ಕಾಲದಲ್ಲಿ ಬಿಡುಗಡೆ ಮಾಡಿ ಬಸವಣ್ಣನವರ ಐಕ್ಯ ಸ್ಥಳದ ಅಭಿವೃದ್ಧಿಗೆ ನಾಂದಿ ಹಾಡಿದ್ದರು.

ಆಗ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿಶೇಷಾಕಾರಿಯಾಗಿ ಡಾ. ಶಿವಾನಂದ ಜಾಮದಾರ ಅವರನ್ನು ನೇಮಕ ಮಾಡಿ ಇಲ್ಲಿನ ಕೆಲಸಗಳಿಗೆ ವೇಗ ನೀಡಿದ್ದರು.

ಬಸವಣ್ಣನವರ ಐಕ್ಯ ಮಂಟಪದ ಒಳಗೆ ನದಿಯ ನೀರು ಬರಬಾರದು ಎಂಬ ಉದ್ದೇಶದಿಂದ ಮಂಡಳಿ ಟೈಲ್ಸ್ ಅಳವಡಿಸಿದೆ. ಐಕ್ಯ ಮಂಟಪಕ್ಕೆ ಹೋಗಿ ಬರಲು ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮಳೆ ಬಂದಾಗ ಭಕ್ತರಿಗೆ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ಸಂಚಾರ ಸ್ಥಳದಲ್ಲಿ ಮೇಲ್ಛಾವಣಿ ಹಾಕಿದ್ದಾರೆ.

ಚಾಲುಕ್ಯ ಶೈಲಿಯ ನಾಲ್ಕು ಕಂಬಗಳ 15 ಅಡಿ ಎತ್ತರದ ಬಸವಣ್ಣನ ಐಕ್ಯ ಮಂಟಪ ಈಗ ಬಾಗಲಕೋಟ ಜಿಲ್ಲೆಯ ಲಾಂಛನವಾಗಿದೆ. ಐಕ್ಯ ಮಂಟಪದ ಮೇಲೆ ನಿಂತು ಹಿನ್ನೀರಿನ ಜಲಸಾಗರದ ನಡುವೆ ಸೂರ್ಯ ಉದಯಿಸುವ ಹಾಗೂ ಮುಳುಗುವ ದೃಶ್ಯ ಎಲ್ಲರನ್ನು ಕಣ್ಮನ ಸೆಳೆಯುತ್ತದೆ. ಜೊತೆಗೆ ಬೋಟಿಂಗ್ ವ್ಯವಸ್ಥೆ ಕೂಡ ಪ್ರವಾಸಿಗರನ್ನು ಸೆಳೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು