ಶಾಲೆಗಳಲ್ಲಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುವ ವಾತಾವರಣ ಬೇಕು: ಬಸವರಾಜ ಹೊರಟ್ಟಿ

7

ಶಾಲೆಗಳಲ್ಲಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುವ ವಾತಾವರಣ ಬೇಕು: ಬಸವರಾಜ ಹೊರಟ್ಟಿ

Published:
Updated:

ಬೆಂಗಳೂರು: ‘ಶಾಲೆಗಳಲ್ಲಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುವ ವಾತಾವರಣ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಮಾಣವಾಗಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘವು ಗುರುವಾರ ಆಯೋಜಿಸಿದ್ದ ‘ಪದವೀಧರ ಶಿಕ್ಷಕರ ರಾಜ್ಯ ಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವು ಶಿಕ್ಷಕರು ಮಾಡುವ ತಪ್ಪುಗಳಿಂದಾಗಿ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸರ್ಕಾರಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಎಂಬ ಭಾವ ಸಾಮಾನ್ಯರಲ್ಲಿ ಮನೆಮಾಡಿದೆ. ಅದನ್ನು ಸುಳ್ಳಾಗಿಸುವಂತೆ ನೀವು ಕಾರ್ಯನಿರ್ವಹಿಸಿ. ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಶಾಲೆಗಳ ನಿರ್ವಹಣೆಯಲ್ಲಿ ಎಸ್‌ಡಿಎಂಸಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಬೇಕು. ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್‌) ಅನ್ವಯಿಸಬಾರದು ಎಂದು ನಾನೂ ಶಿಕ್ಷಣ ಸುಧಾರಣಾ ಸಭೆಗಳಲ್ಲಿ ಒತ್ತಾಯಿಸುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರಾಧ್ಯಾಪಕ ಸಂಗಮನಾಥ ಲೋಕಾಪೂರ,‘ಮಾಹಿತಿಗಳನ್ನು ಸಂಗ್ರಹಿಸಿ, ವರದಿಗಳನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ಕಳುಹಿಸುವುದೇ ಶಿಕ್ಷಕರ ಕೆಲಸವಾಗಿದೆ. ಹಿಂದೇ ಶಿಕ್ಷಕರು ಮತ್ತು ಇಲಾಖಾ ಅಧಿಕಾರಿಗಳಿಗೆ ಸಂವೇದನೆ ಇತ್ತು. ಈಗ ಆ ಜಾಗದಲ್ಲಿ ಸಂಪಾದನೆ ತುಂಬಿಕೊಂಡಿದೆ. ಹಾಗಾಗಿ ಗುಣಮಟ್ಟ ಕುಸಿಯುತ್ತಿದೆ’ ಎಂದು ವಿವರಿಸಿದರು.

‘ದುಡ್ಡು ಕೊಡದಿದ್ದರೆ ಸರ್ಕಾರದ ಯಾವ ಕೆಲಸಾನೂ ಆಗಲ್ಲ. ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿದೆ. ಸಾವಿರ ಮೋದಿ, ಕುಮಾರಸ್ವಾಮಿಗಳು ಬಂದರೂ ವ್ಯವಸ್ಥೆ ಸುಧಾರಿಸಲ್ಲ’ ಎಂದು ಪರಿಷತ್‌ ಸದಸ್ಯ ಆರ್‌.ಚೌಡರೆಡ್ಡಿ ಬೇಸರಿಸಿದರು. 

ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಶಿಕ್ಷಕರು ಬಂದಿದ್ದರು.

ಶಿಕ್ಷಕರ ಬೇಡಿಕೆಗಳು

* ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, 6ರಿಂದ 8ನೇ ತರಗತಿ ಶಿಕ್ಷಕರ ವೃಂದದಲ್ಲಿ ಪರಿಗಣಿಸಿ, ಒಂದು ವೇತನ ಬಡ್ತಿ ನೀಡಬೇಕು
* ಮುಂಬಡ್ತಿ ಪ್ರಮಾಣವನ್ನು ಶೇ 25ರಿಂದ ಶೇ 75ಕ್ಕೆ ಹೆಚ್ಚಿಸಬೇಕು
* ಬಡ್ತಿಗಾಗಿ ಇರುವ ಪರೀಕ್ಷೆ ರದ್ದುಪಡಿಸಬೇಕು
* ಪದವೀಧರರಾದ ವರ್ಷ ಹೊರತುಪಡಿಸಿ, ನೇಮಕಾತಿ ಹೊಂದಿದಾಗಿನಿಂದ ಸೇವಾವಧಿ ಪರಿಗಣಿಸಿ ಬಡ್ತಿ ನೀಡಬೇಕು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !