ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಪೊಲೀಸ್‌ ವಸತಿ ಗೃಹ ನಿರ್ಮಾಣ ಗುರಿ: ಬಸವರಾಜ ಬೊಮ್ಮಾಯಿ

Last Updated 19 ಜೂನ್ 2020, 14:59 IST
ಅಕ್ಷರ ಗಾತ್ರ

ಮಂಡ್ಯ: ‘ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ 10 ಸಾವಿರ ಪೊಲೀಸ್‌ ವಸತಿ ಗೃಹಗಳ ನಿರ್ಮಾಣ ಗುರಿ ಹೊಂದಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವಸತಿ ಗೃಹಗಳ ನಿರ್ಮಾಣ ಸಂಬಂಧ ಸಿದ್ಧಗೊಂಡಿದ್ದ ವಿಸ್ತ್ರತ ಯೋಜನಾ ವರದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. 2021ರ ಜನವರಿಯಿಂದ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು.

‘ಒಟ್ಟು ಪೊಲೀಸ್‌ ಸಿಬ್ಬಂದಿಯ ಶೇ 48ರಷ್ಟು ವಸತಿ ಗೃಹಗಳನ್ನು ನಿರ್ಮಾಣ ಮಾಡಬೇಕು ಎಂಬ ನಿಯಮ ಇದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ 646 ವಸತಿ ಗೃಹ ಉದ್ಘಾಟನೆ ಮಾಡಿದ್ದಾರೆ. 1,638 ವಸತಿ ಗೃಹಗಳು ಪೂರ್ಣಗೊಂಡಿದ್ದು, ಕೆಲವೇ ತಿಂಗಳುಗಳಲ್ಲಿ ಸಿಬ್ಬಂದಿಗೆ ಮುಕ್ತವಾಗಲಿವೆ’ ಎಂದರು.

‘ಇಲ್ಲಿಯವರೆಗೂ ವಸತಿ ಗೃಹಗಳನ್ನು 20 X 20 ಅಳತೆಯಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ಪರಿಷ್ಕರಣೆ ಮಾಡಿ 20X 25 ಅಳತೆಯಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದರು.

‘ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಗಳ (ಎಫ್‌ಎಸ್‌ಎಲ್‌) ವರದಿ ಸಿಗಲು ದೀರ್ಘಾವಧಿ ಸಮಯ ಹಿಡಿಯುತ್ತಿದೆ. ಇದರಿಂದ ಪ್ರಕರಣಗಳ ತನಿಖೆ ಪೂರ್ಣಗೊಳ್ಳಲು ಹಿನ್ನಡೆಯಾಗುತ್ತಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲೂ ಪ್ರಯೋಗಾಲಯಗಳ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಎಲ್ಲಾ ಠಾಣೆಗಳನ್ನು ತಾಂತ್ರಿಕವಾಗಿ ಬಲವರ್ಧನೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಅಕ್ರಮ ಮರಳುಗಾರಿಕೆ ಸಂಬಂಧ ಹೊಸ ನೀತಿ ಜಾರಿಗೆ ತರಲಾಗಿದ್ದು, ಇದರಿಂದ ಅಕ್ರಮ ತಡೆಗೆ ಸಹಾಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT