ಪ್ರತ್ಯೇಕ ಧರ್ಮ ಹೋರಾಟ ಸಾರಥ್ಯ ವಹಿಸಿ: ಶಿವಮೂರ್ತಿ ಮುರುಘಾ ಶರಣರಿಗೆ ಚಂಪಾ ಕೋರಿಕೆ

ಚಿತ್ರದುರ್ಗ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯಲು ನಡೆಯುತ್ತಿರುವ ಹೋರಾಟದ ನೇತೃತ್ವವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಹಿಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮನವಿ ಮಾಡಿದರು.
ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಚಂಪಾ ಅವರ ಕೋರಿಕೆಯನ್ನು ಕಂಡು ಮುರುಘಾ ಶರಣರು ಭಾವುಕರಾದರು.
‘ಲಿಂಗಾಯತ ಧರ್ಮ ಸಂವಿಧಾನಬದ್ಧ ಮಾನ್ಯತೆ ಪಡೆಯಬೇಕಿದೆ. ಚಳವಳಿಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಕಟ್ಟುವ ಅಗತ್ಯವಿದೆ. ರಾಜಕಾರಣಿಗಳು ನಂಬಿಕೆ ಕಳೆದುಕೊಂಡಿರುವುದರಿಂದ ಮುರುಘಾ ಮಠ ಈ ಚಳವಳಿಯ ಸಾರಥ್ಯ ವಹಿಸುವ ಅಗತ್ಯವಿದೆ’ ಎಂದರು.
‘ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ್ದು ಜೀವನದ ಅತ್ಯಂತ ಸಂತಸದ ಕ್ಷಣ. ಮುರುಘಾ ಶರಣರ ರೂಪದಲ್ಲಿ ಸಾಕ್ಷಾತ್ ಬಸವಣ್ಣನವರೇ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ಎಂ.ಎಂ.ಕಲಬುರ್ಗಿ ನನ್ನ ಸಹಪಾಠಿ. ಒಟ್ಟಿಗೆ ವ್ಯಾಸಂಗ ಮಾಡಿ, ಸಹೋದ್ಯೋಗಿಗಳಾಗಿ ಕೆಲಸ ಮಾಡಿದ್ದೆವು. ಬಸವಣ್ಣನ ವಿಚಾರ ನಂಬಿದ ಕಾರಣಕ್ಕೆ ಅವರ ಹತ್ಯೆ ನಡೆದಿದೆ. ನಂಬಿದ ಧ್ಯೇಯಕ್ಕಾಗಿ ಪ್ರಾಣ ತೆರಬೇಕಾಯಿತು’ ಎಂದು ಗದ್ಗದಿತರಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.