ಬುಧವಾರ, ಅಕ್ಟೋಬರ್ 16, 2019
22 °C

ಕೊನೆಗೂ ಪಾಲಿಕೆ ಗೆದ್ದ ಬಿಜೆಪಿ: ಗೌತಮ್‌ ಮೇಯರ್‌, ರಾಮಮೋಹನ್ ರಾಜು ಉಪ ಮೇಯರ್‌

Published:
Updated:

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೌಗುಪಾಳ್ಯ ವಾರ್ಡ್‌ನ  ಬಿಜೆಪಿ ಕಾರ್ಪೊರೇಟರ್‌ ಎಂ. ಗೌತಮ್‌ ಕುಮಾರ್‌ ಮೇಯರ್‌ ಆಗಿ ಆಯ್ಕೆಯಾದರು. ಉಪ ಮೇಯರ್‌ ಆಗಿ ಬೊಮ್ಮನಹಳ್ಳಿ ವಾರ್ಡ್‌ನ ರಾಮಮೋಹನ ರಾಜು ಗೆಲುವು ಸಾಧಿಸಿದರು. 

ಗೌತಮ್‌ ಕುಮಾರ್ ಪರವಾಗಿ 129 ಮತಗಳು ಬಿದ್ದರೆ,  ಅವರ ವಿರುದ್ಧ 110 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್‌ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತರು.  ಈ ಮೂಲಕ ಗೌತಮ್‌ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್‌ ಆಗಿ ಆಯ್ಕೆಯಾದರು. 

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಕೂಟದಲ್ಲಿ ಕೆಲ ಕಾರ್ಪೊರೇಟರ್‌ಗಳು ತಮ್ಮ ಪಕ್ಷದ ವಿರುದ್ಧವೇ ಮತ ಚಲಾಯಿಸಿದರು. ಜೆಡಿಎಸ್‌ನ ಇಬ್ಬರು ಶಾಸಕರು ಮತದಾನ ಪ್ರಕ್ರಿಯೆಯಿಂದ ಹೊರ ನಡೆದರು.  ಈ ಬೆಳವಣಿಗೆ ಬಿಜೆಪಿಗೆ ವರದಾನವಾಗಿ ಪರಿಣಮಿಸಿತು. 

199 ವಾರ್ಡ್‌ಗಳ ಬಿಬಿಎಂಪಿಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗಳಿಸಿತ್ತಾದರೂ, ಅಧಿಕಾರದಿಂದ ವಂಚಿತವಾಗಿತ್ತು. ಐದು ವರ್ಷಗಳ ನಾಲ್ಕು ಅವಧಿಯಲ್ಲಿ ಅಧಿಕಾರ ಪಡೆಯಲು ವಿಫಲವಾಗಿದ್ದ ಬಿಜೆಪಿ ಕಡೆ ಅವಧಿಯಲ್ಲಿ ಚುಕ್ಕಾಣಿ ಹಿಡಿದಿದೆ. 

ಗೌತಮ್‌ ಕುಮಾರ್‌ ಕುರಿತು ಒಂದಷ್ಟು 

ಜೋಗುಪಾಳ್ಯ ವಾರ್ಡ್ ಸಂಖ್ಯೆ 89ರ ಸದಸ್ಯ ಬಿಜೆಪಿಯ ಗೌತಮ್ ಕುಮಾರ್ ಬಿ.ಕಾಂ ಪದವೀಧರ. ಜೋಗುಪಾಳ್ಯ ವಾರ್ಡ್‌ನಿಂದ ಅವರು ಈ ವರೆಗೆ ಎರಡು ಬಾರಿ ಆಯ್ಕೆಯಾಗಿದ್ದಾರೆ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ. ಗೌತಮ್ ಜೈನ್, 2013-14ರಲ್ಲಿ ಬಿಬಿಎಂಪಿ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.  ಆರ್.ಎಸ್.ಎಸ್. ಹಿನ್ನೆಲೆ ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಿಜೆಪಿಯಿಂದ ಒಟ್ಟು ಏಳು ಮಂದಿ ಮೇಯರ್‌ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಬಿಜೆಪಿ ವರಿಷ್ಠರು  ಸಂಘ ಪರಿವಾರದ ಹಿನ್ನೆಲೆಯ ಗೌತಮ್ ಅವರನ್ನು ಪಕ್ಷದಿಂದ ಕಣಕ್ಕಿಳಿಸಿದ್ದರು. ಅವರು ಜೈನ ಧರ್ಮಕ್ಕೆ ಸೇರಿದವರು.

ಅಭ್ಯರ್ಥಿ ಬಗ್ಗೆ ಮೂಡಿದ್ದ ಗೊಂದಲ

ಪಾಲಿಕೆ ಮೇಯರ್‌ ಚುನಾವಣೆಗೆ ಬಿಜೆಪಿಯಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಹಿರಿಯ ಕಾರ್ಪೊರೇಟರ್‌ ಪದ್ಮನಾಭರೆಡ್ಡಿ ಮತ್ತು ಗೌತಮ್‌ ಇಬ್ಬರೂ ಉಮೇದುವಾರಿಕೆ ಸಲ್ಲಿಸಿದ್ದರು. ಹೀಗಾಗಿ ಬಿಜೆಪಿ ಪಾಳಯದಲ್ಲಿ ಗೊಂದಲ ಏರ್ಪಟ್ಟಿತ್ತು. ಅದರೆ, ಗೌತಮ್‌ ಅವರೇ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಅಂತಿಮವಾಗಿ ಘೋಷಿಸಿ ಗೊಂದಲಗಳಿಗೆ ತೆರೆ ಎಳೆಯಿತು. 

ಗೊಂದಲಗಳಿಗೆ ತೆರೆ ಎಳೆದ ಅಶೋಕ 

ಇದು ಚುನಾವಣೆ. ಉಮೇದುವಾರಿಕೆಯಲ್ಲಿ ಏನಾದರೂ ಸಮಸ್ಯೆಗಳಾಗಬಹುದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಾನೇ ಸೂಚನೆ ನೀಡಿದ್ದೆ. ಅದರಂತೆ ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಆದರೆ, ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಗೌತಮ್‌ ಕುಮಾರ್‌ ಅವರೇ ಎಂದು ಅಶೋಕ ಸ್ಪಷ್ಟಪಡಿಸಿದರು. 

ಕಾರ್ಪೊರೇಟರ್‌ಗಳು, ಶಾಸಕರು, ಸಂಸದರ ಹಲವು ಸುತ್ತುಗಳ ಸಭೆಯ ನಂತರವೇ ನಾವು ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದೇವೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಕಾಂಗ್ರೆಸ್‌ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಹಾಕಿದ್ದೂ ಅಲ್ಲದೇ, ನಮ್ಮಲ್ಲಿ ಚೀಟಿ ಸಂಸ್ಕೃತಿ ಇದೆ ಎಂದು ಹೇಳಿದೆ. ಆದರೆ, ನಮ್ಮಲ್ಲಿರುವ ಆಂತರಿಕ ಪ್ರಜಾಪ್ರಭುತ್ವ ಅವರ ಪಕ್ಷದಲ್ಲಿಲ್ಲ ಎಂದು ಅಶೋಕ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

ಗೌತಮ್‌ ಮೇಯರ್‌ ಆಗಿದ್ದಕ್ಕೆ ಆಕ್ರೋಶ 

ಗುಜರಾತ್ ಮೂಲದ ಗೌತಮ್ ಕುಮಾರ್ ಜೈನ್ ಅವರನ್ನು ಬಿಜೆಪಿ ಮೇಯರ್ ಆಗಿ ಮಾಡಿದೆ, ಬಿಜೆಪಿಗೆ ಧಿಕ್ಕಾರ... ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆವರಣಕ್ಕೆ ಬೆಂಬಲಿಗರೊಂದಿಗೆ ಬಂದ ವಾಟಾಳ್ ನಾಗರಾಜ್  ಮೇಯರ್ ಗೌತಮ್‌ ಅವರಿಗೆ ಧಿಕ್ಕಾರ ಕೂಗಿದರು.

Post Comments (+)