ಶನಿವಾರ, ಸೆಪ್ಟೆಂಬರ್ 19, 2020
27 °C

ಅಕ್ರಮ– ಸಕ್ರಮ ಅರ್ಜಿ ವಿಲೇಗೆ ಇನ್ನೆರಡು ವರ್ಷ

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬಗರ್‌ಹುಕುಂ ಸಾಗುವಳಿದಾರರ ಅರ್ಜಿಗಳ ವಿಲೇವಾರಿ ಅವಧಿಯನ್ನು ಮತ್ತೆ ಎರಡು ವರ್ಷ ಅವಧಿ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಸಲುವಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸಲು ತಯಾರಿ ನಡೆಸಿದೆ.

94 (ಎ) ಫಾರಂ ನಂ. 50ರಲ್ಲಿ 9,937 ಅರ್ಜಿಗಳು ಮತ್ತು 94 (ಬಿ) ಫಾರಂ ನಂ. 53ರಲ್ಲಿ 1,84,329 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಅರ್ಜಿ ವಿಲೇವಾರಿಗೆ ಈ ಹಿಂದೆ ವಿಧಿಸಿದ್ದ ಗಡುವು 2018ರ ಏಪ್ರಿಲ್‌ನಲ್ಲಿ ಮುಗಿದಿತ್ತು. ಇದೀಗ ಈ ಗಡುವನ್ನು 2020 ಏಪ್ರಿಲ್‌ವರೆಗೆ ವಿಸ್ತರಿಸುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ.

ಕೆಟಿಪಿಪಿ ಕಾಯ್ದೆ ತಿದ್ದುಪಡಿ: ಕೋಟ್ಯಂತರ ಮೊತ್ತದ ಟೆಂಡರ್‌ ಪ್ರಕ್ರಿಯೆಗಳಲ್ಲಿ ಬೊಕ್ಕಸಕ್ಕೆ ಉಳಿತಾಯ ಮಾಡುವ ಕ್ರಮವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ  ತಿದ್ದುಪಡಿ ತರಲು ನಿರ್ಧರಿಸಿದೆ. ಈ ಸಂಬಂಧ ಮಸೂದೆ ಮಂಡಿಸಲು ತಯಾರಿ ನಡೆಸಿದೆ.

ಸದ್ಯದ ಇ– ಟೆಂಡರ್‌ ವ್ಯವಸ್ಥೆಯಲ್ಲಿ ಕಡಿಮೆ ದರ ನಮೂದಿಸಿದ ಗುತ್ತಿಗೆದಾರನಿಗೆ ಟೆಂಡರ್ ವಹಿಸಲಾಗುತ್ತಿದೆ. ಈ ವ್ಯವಸ್ಥೆ ಬದಲಾಯಿಸಿ, ಟೆಂಡರ್ ತೆರೆದ ಬಳಿಕ ಅತೀ ಕಡಿಮೆ ದರ ನಮೂದಿಸಿದ ಮೂವರು ಗುತ್ತಿಗೆದಾರರಿಗೆ ಮತ್ತೆ 24 ಗಂಟೆಗಳ ಆನ್‌ಲೈನ್‌ ಬಿಡ್ಡಿಂಗ್‌ಗೆ ಅವಧಿ ನೀಡಲಾಗುವುದು. ಅದರಲ್ಲಿ ಅತೀ ಕಡಿಮೆ ದರ ನಮೂದಿಸಿದವರಿಗೆ ಟೆಂಡರ್‌ ಸಿಗಲಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವ ಉದ್ದೇಶದಿಂದ ರೂಪಿಸಿದ ‘ಕರ್ನಾಟಕ ಪರೋಪಕಾರಿ ಹಾಗೂ ವೈದ್ಯಕೀಯ ವೃತ್ತಿಪರರು ( ತುರ್ತು ಸ್ಥಿತಿಯಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆಯ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಹಾಕಿದ್ದು ಅದೀಗ ಕಾಯ್ದೆ ಆಗಿದೆ. ಆದರೆ, ಘಟನೆಗೆ ಕಾರಣವಾದ ವ್ಯಕ್ತಿಯೇ ಸಂತ್ರಸ್ತರನ್ನು ಆಸ್ಪತ್ರೆಗೆ  ದಾಖಲಿಸಿದರೂ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸದಂತೆ ರಾಷ್ಟ್ರಪತಿ ಸೂಚನೆ ನೀಡಿದ್ದರು. ಈ ಕಾರಣಕ್ಕೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತಿದೆ.

ಗುತ್ತಿಗೆ ಹುದ್ದೆಗಳಲ್ಲಿ ಮೀಸಲು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ  ಮತ್ತು ಹಿಂದುಳಿದ ವರ್ಗಗಳಿಗೆ ಗುತ್ತಿಗೆ ನೇಮಕಾತಿಗಳಲ್ಲಿ ಮತ್ತು ಸಂಶೋಧನೆ, ವೈಜ್ಞಾನಿಕ ಮತ್ತು ನಿರ್ದಿಷ್ಟ ಅವಧಿಯ ಹುದ್ದೆಗಳಿಗೆ ಮೀಸಲು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಕಾಯ್ದೆ 1990ಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.

ಸಿ.ಎಂಗೆ ‘ರಾಜಕೀಯ ಕಾರ್ಯದರ್ಶಿ’?

ವಿಧಾನಪರಿಷತ್‌ ಅಥವಾ ವಿಧಾನಸಭೆಯ ಸದಸ್ಯರೊಬ್ಬರನ್ನು ಮುಖ್ಯಮಂತ್ರಿಗೆ ‘ರಾಜಕೀಯ ಕಾರ್ಯದರ್ಶಿ’ಯನ್ನಾಗಿ ನೇಮಿಸಿಕೊಳ್ಳಲು ಚಿಂತನೆ ನಡೆದಿದೆ. ಈ ಸಂಬಂಧದ ಕಡತವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿದೆ.

ಶಾಸಕರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿದರೆ ಲಾಭದಾಯಕ ಹುದ್ದೆ ಎಂಬ ಕಾರಣಕ್ಕೆ ಅನರ್ಹಗೊಳ್ಳುವುದನ್ನು ತಪ್ಪಿಸಲು ಕರ್ನಾಟಕ ಶಾಸಕಾಂಗ (ಅನರ್ಹಗೊಳ್ಳುವುದರಿಂದ ರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಈ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ಕಡತ ಸಲ್ಲಿಸಲಾಗಿತ್ತು. ಆದರೆ, ರಾಜಕೀಯ ಕಾರ್ಯದರ್ಶಿಗೆ ನೀಡಲಾಗುವ ಸ್ಥಾನಮಾನ ಮತ್ತು ಆರ್ಥಿಕ ಹೊರೆಯ ಮಾಹಿತಿ ನೀಡುವಂತೆ ಸೂಚಿಸಿ ರಾಜ್ಯಪಾಲರು ಕಡತವನ್ನು ವಾಪಸ್‌ ಕಳುಹಿಸಿದ್ದರು. ಇದೀಗ, ಈ ಕುರಿತು ಚರ್ಚೆ ನಡೆಯುತ್ತಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕ ಕಾಯ್ದೆ ತಿದ್ದುಪಡಿಗೆ ಮಸೂದೆ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಂಡನೆಯಾಗಲಿರುವ ಮಸೂದೆಗಳು

* ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ–2018

* ಕರ್ನಾಟಕ ಪರೋಪಕಾರಿ ಹಾಗೂ ವೈದ್ಯಕೀಯ ವೃತ್ತಿಪರರು (‌ತುರ್ತು ಸ್ಥಿತಿಯಲ್ಲಿ ರಕ್ಷಣೆ ಮತ್ತು ನಿಯಂತ್ರಣ)

* ಕರ್ನಾಟಕ ಋಣ ಪರಿಹಾರ ಮಸೂದೆ

* ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ

* ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದೆ ತಿದ್ದುಪಡಿ

* ಕರ್ನಾಟಕ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಕಾಯ್ದೆ–1990ಕ್ಕೆ ತಿದ್ದುಪಡಿ

* ಕರ್ನಾಟಕ ರಾಜ್ಯ ಹಿಂದುಳಿದ ಆಯೋಗಗಳ ಕಾಯ್ದೆಗೆ ತಿದ್ದುಪಡಿ

***

ಅಧಿವೇಶನದಲ್ಲಿ ಮಂಡಿಸಲುದ್ದೇಶಿಸಿರುವ ಮಸೂದೆಗಳು ಸಿದ್ಧವಾಗಿವೆ.. ಅವುಗಳನ್ನು ಮಂಡಿಸಲು ಕಲಾಪ ಪಟ್ಟಿಗೆ ಸೇರಿಸುವಂತೆ ಸಂಸದೀಯ ಇಲಾಖೆಗೆ ಸೂಚಿಸಿದ್ದೇನೆ

-ಕೃಷ್ಣ ಬೈರೇಗೌಡ, ಕಾನೂನು ಮತ್ತು ಸಂಸದೀಯ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು