ಭಾನುವಾರ, ಮಾರ್ಚ್ 7, 2021
19 °C

ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ: ಬೆಳಗಾವಿಯಲ್ಲಿ ಕೊರೆಯುವ ಚಳಿ!

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ನಗರದಲ್ಲಿ ಈಗ ಮೈ ನಡುಗಿಸುವ ಚಳಿ ಇದ್ದು, ಇದೇ 10ರಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನೂ ಕಾಡಲಿದೆ. ಕಳೆದ ವಾರದಿಂದ ಈಚೆಗೆ ತಾಪಮಾನವು 15 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದೆ. ಇದೇ ಸ್ಥಿತಿ ತಿಂಗಳ ಅಂತ್ಯದವರೆಗೂ ಮುಂದುವರಿಯಲಿದೆ ಎಂದು ಹವಾಮಾನ ವೆಬ್‌ಸೈಟ್‌ಗಳು ಮುನ್ಸೂಚನೆ ನೀಡಿವೆ.

ಅಧಿವೇಶನವು ಹತ್ತು ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಇವರ ಜೊತೆಗೆ ಅಧಿಕಾರಿಗಳು, ಪೊಲೀಸರು ಹಾಗೂ ಮಾಧ್ಯಮದವರು ಕೂಡ ಬರಲಿದ್ದಾರೆ. ಅಂದಾಜು 10,000 ಜನರು ಬರುವ ನಿರೀಕ್ಷೆಯಿದೆ. ಕಳೆದ ವರ್ಷ ನವೆಂಬರ್‌ ಎರಡನೇ ವಾರದಲ್ಲಿ ಅಧಿವೇಶನ ನಡೆದಿತ್ತು. ಆಗ, ಇಷ್ಟು ಚಳಿಯ ತೀವ್ರತೆ ಇರಲಿಲ್ಲ.

ಚಳಿ ಎದುರಿಸಲು ತಯಾರಿ: ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುವವರೆಗೆ ಬೆಳಗಾವಿಯಲ್ಲಿಯೇ ಈ ಸಲ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಅತಿಥಿಗೃಹಗಳು, ಹೋಟೆಲ್‌ ಹಾಗೂ ವಸತಿಗೃಹಗಳನ್ನು ಕಾಯ್ದಿರಿಸಲಾಗಿದೆ. ಮೈ ಬೆಚ್ಚಗಾಗಿಸಲು ದಪ್ಪ ಹೊದಿಕೆಗಳ (ಬ್ಲಾಂಕೆಟ್ಸ್‌) ಹಾಗೂ ರೂಂ ಹೀಟರ್‌ ವ್ಯವಸ್ಥೆ ಯನ್ನು ಹೋಟೆಲ್‌ನವರು ಮಾಡಿಕೊಂಡಿದ್ದಾರೆ.

ಎ.ಸಿ. ರೂಂಗೆ ಬೇಡಿಕೆ: ‘225 ಶಾಸಕರು, 75 ವಿಧಾನ ಪರಿಷತ್‌ ಸದಸ್ಯರಿಗೆ ಶಿಷ್ಟಾಚಾರದ ಪ್ರಕಾರ ಎ.ಸಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಆದರೆ, ಕೆಲವು ಹಿರಿಯ ಅಧಿಕಾರಿಗಳು ತಮಗೂ ಎ.ಸಿ ಕೊಠಡಿಗಳು ಬೇಕೆಂದು ಹಠ ಹಿಡಿದಿದ್ದಾರೆ. ಬೆಳಗಾವಿಯಲ್ಲಿ ಸಾಕಷ್ಟು ಚಳಿಯಿದ್ದು, ಇಲ್ಲಿ ಫ್ಯಾನ್‌ ಅವಶ್ಯಕತೆ ಕೂಡ ಇರುವುದಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಿದ್ದೇವೆ’ ಎಂದು ಚಳಿಗಾಲದ ಅಧಿವೇಶನದ ವಸತಿ ಉಸ್ತುವಾರಿ ಪ್ರೀತಂ ನಸಲಾಪುರೆ ಹೇಳಿದರು.

1,650 ಕೊಠಡಿಗಳ ವ್ಯವಸ್ಥೆ: ‘ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಎಲ್ಲರಿಗೂ ಬೆಳಗಾವಿಯಲ್ಲಿಯೇ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಅದಕ್ಕಾಗಿ ಸುಮಾರು 62 ಹೋಟೆಲ್‌ಗಳಲ್ಲಿ 1,650 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕೊಠಡಿಗಳನ್ನು ಕಾಯ್ದರಿಸುವಂತೆ ಕೆಲವು ಶಾಸಕರು ಮೌಖಿಕವಾಗಿ ಕೇಳಿಕೊಂಡಿದ್ದಾರೆ. ವಿಧಾನಸಭೆ ಸಚಿವಾಲಯದಿಂದ ಸೂಚನೆ ಬಂದರೆ, ಅವರಿಗೆ ಹುಬ್ಬಳ್ಳಿಯಲ್ಲಿ ಕೊಠಡಿಗಳನ್ನು ಕಾಯ್ದಿರಿಸುತ್ತೇವೆ’ ಎಂದು ತಿಳಿಸಿದರು.

ವೈದ್ಯರ ತಂಡ: ಸುವರ್ಣ ವಿಧಾನಸೌಧದಲ್ಲಿ, ಜನಪ್ರತಿನಿಧಿಗಳು ವಾಸ್ತವ್ಯ ಹೂಡಿರುವ ಸ್ಥಳ ಹಾಗೂ ಪ್ರತಿಭಟನಾ ಸ್ಥಳಗಳಲ್ಲಿ ವೈದ್ಯರ ತಂಡವನ್ನು ನೇಮಿಸಲಾಗುವುದು. 100ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಪ್ಪಾಸಾಹೇಬ ನರಟ್ಟಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು