ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌ ಸಿಟಿ ಯೋಜನೆ’: ಬೆಳಗಾವಿಯಲ್ಲಿ ‘ತದ್ರೂಪ ವಿಮಾನ ನಿಲ್ದಾಣ

Last Updated 23 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್‌ ಡಿಪೊದ ಎರಡು ಎಕರೆ ಜಾಗದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 6 ಕೋಟಿ ವಿನಿಯೋಗಿಸಿ ‘ಮಿನಿಯೇಚರ್‌ ಏರ್‌ಪೋರ್ಟ್‌’ (ತದ್ರೂಪ ವಿಮಾನನಿಲ್ದಾಣ) ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜರ್ಮನಿಯ ಹಮ್‌ಬರ್ಗ್‌ನ ವಂಡರ್‌ಲ್ಯಾಂಡ್‌ ಮಾದರಿಯಲ್ಲಿ ಆಕರ್ಷಕ ತಾಣವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.

‘ಬೆರಗಿನ ತಾಣವಾದ ವಿಮಾನನಿಲ್ದಾಣದ ಕಾರ್ಯವೈಖರಿಯ ಕುರಿತು ಶ್ರೀಸಾಮಾನ್ಯರಿಗೂ ಮಾಹಿತಿ ನೀಡಬೇಕು ಹಾಗೂ ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವ ಮೂಲಕ ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಇದು ಪೂರ್ಣಗೊಂಡಲ್ಲಿ ದೇಶದ ಮೊದಲ ಮಿನಿಯೇಚರ್‌ ಏರ್‌ಪೋರ್ಟ್‌ ಹೊಂದಿದ ಖ್ಯಾತಿ ಬೆಳಗಾಗಿಯದಾಗಲಿದೆ’ ಎಂದು ಇಲ್ಲಿನ ಸ್ಮಾರ್ಟ್‌ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ವಿಮಾನನಿಲ್ದಾಣ ಹೇಗಿರುತ್ತದೆಯೋ ಹಾಗೆಯೇ ಇದನ್ನು ನಿರ್ಮಿಸಲಾಗುವುದು. ಪ್ರಯಾಣಿಕರು ಅಲ್ಲಿ ಯಾವ ರೀತಿ ಭದ್ರತಾ ತಪಾಸಣೆಗೆ ಒಳಗಾಗಬೇಕು, ವಿಮಾನ ಯಾವ ರೀತಿ ಟೇಕ್‌ ಆಫ್‌ ಆಗುತ್ತದೆ, ಹೇಗೆ ಲ್ಯಾಂಡ್ ಆಗುತ್ತದೆ ಎನ್ನುವುದನ್ನು ತಿಳಿಸಿಕೊಡಲಾಗುವುದು. ರನ್‌ ವೇ ಕೂಡ ಇರುತ್ತದೆ. ಏರ್‌ಫೋರ್ಸ್‌ನಲ್ಲಿ ಹಾಗೂ ಪ್ರಮುಖ ಯುದ್ಧಗಳಲ್ಲಿ ಬಳಕೆಯಾದ ವಿಮಾನ, ಹೆಲಿಕಾಪ್ಟರ್‌ಗಳನ್ನು ಪ್ರದರ್ಶಿಸಲಾಗುವುದು. ಏರ್‌ಪೋರ್ಸ್‌ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. 2, 3, 5 ಹಾಗೂ 10 ಅಡಿ ಉದ್ದದ ಮಾದರಿ ವಿಮಾನಗಳನ್ನು ಪ್ರದರ್ಶಿಸಲಾಗುವುದು. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿಮಾನಗಳ ಬಗ್ಗೆ ಆಸಕ್ತಿ ಇರುವವರಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಹಾರಾಡುತ್ತಿರುವ ವಿಮಾನದಲ್ಲಿ ಕುಳಿತಂತೆ ಅನುಭವ ನೀಡುವ ತಂತ್ರಜ್ಞಾನ ಅಳವಡಿಕೆಯಾಗಿರುವ ಕುರ್ಚಿಗಳನ್ನು ಅಲ್ಲಲ್ಲಿ ಇಡಲಾಗುವುದು. ಇದು ಮಕ್ಕಳಿಗೆ ಮುದ ನೀಡಲಿದೆ ಹಾಗೂ ಅವರನ್ನು ಆಕರ್ಷಿಸಲಿದೆ. ವಿಮಾನ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಹಿಂದಿನಿಂದ ಇಲ್ಲಿವರೆಗೆ ಆಗಿರುವ ಬೆಳವಣಿಗೆಗೆಳ ಕುರಿತು ಮಾಹಿತಿ ನೀಡುವ ವಿಭಾಗವೂ ಇರಲಿದೆ. ಇದಕ್ಕಾಗಿ ವ್ಯಾಕ್ಸಿನ್ ಡಿಪೊದ ಮರಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಖಾಲಿ ಜಾಗ ಆಯ್ಕೆ ಮಾಡಿಕೊಳ್ಳಲಾಗುವುದು’ ಎನ್ನುತ್ತಾರೆ ಅವರು.

‘ವ್ಯಾಕ್ಸಿನ್ ಡಿಪೊದಲ್ಲಿ, ಹಲವು ವರ್ಷಗಳಿಂದಲೂ ಬಳಕೆಯಾಗದಿರುವ ಗಾಜಿನಮನೆಯನ್ನು ಕಲಾ ಗ್ಯಾಲರಿಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕಲಾಕೃತಿಗಳ ಪ್ರದರ್ಶನ, ತರಬೇತಿ, ಶಿಬಿರಗಳಿಗೆ ನೀಡಲಾಗುವುದು. ತದ್ರೂಪ ವಿಮಾನನಿಲ್ದಾಣದ ಪಕ್ಕದಲ್ಲೇ ವಿವಿಧ 12 ರಾಜ್ಯಗಳ ಗ್ರಾಮೀಣ ಭಾರತವನ್ನು ಬಿಂಬಿಸುವ ಕಲಾಕೃತಿಗಳನ್ನು ಒಳಗೊಂಡ ‘ಗ್ರಾಮೀಣ ಭಾರತ’ ಮ್ಯೂಸಿಯಂ ನಿರ್ಮಾಣಕ್ಕೂ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಆಯಾ ರಾಜ್ಯಗಳ ವಿಶಿಷ್ಟ ಜೀವನಶೈಲಿ, ಸಂಸ್ಕೃತಿ, ಜಾನಪದ ವೈಭವ ಹಾಗೂ ಸೊಗಡನ್ನು ಒಂದೇ ಸೂರಿನಲ್ಲಿ ಪರಿಚಯಿಸಲಾಗುವುದು. ಇದಕ್ಕಾಗಿ ₹ 12 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT