ಸೋಮವಾರ, ಸೆಪ್ಟೆಂಬರ್ 21, 2020
25 °C
ವಸತಿ, ಊಟ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೂಪನ್‌ ವ್ಯವಸ್ಥೆ ಜಾರಿಗೆ ಚಿಂತನೆ

ಅಧಿವೇಶನಕ್ಕೆ ಮಿತವ್ಯಯ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬೆಳಗಾವಿಯಲ್ಲಿ ಇದೇ 10ರಿಂದ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಮಿತವ್ಯಯದ ಸೂತ್ರ ರೂಪಿಸಲಾಗಿದೆ.

2016 ಹಾಗೂ 2017ರ ಅಧಿವೇಶನದಲ್ಲಿ ದುಂದುವೆಚ್ಚ ಮಾಡಲಾಗಿತ್ತು. 2 ವರ್ಷಗಳಲ್ಲಿ ಸುಮಾರು ₹20 ಕೋಟಿಯಷ್ಟು ಲೆಕ್ಕಕ್ಕೆ ಸಿಕ್ಕಿರಲಿಲ್ಲ. ಈ ‍ಪ್ರಕರಣದ ಕುರಿತು ವಿಚಾರಣೆಗೆ ಸಮಿತಿ ರಚಿಸಲಾಗಿದೆ.

ಈ ಸಲ ಕನಿಷ್ಠ ವೆಚ್ಚ ಮಾಡಬೇಕು ಎಂದು ವಿಧಾನಸಭಾ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ನಿರ್ದೇಶನ ನೀಡಿದ್ದರು. ಅಧಿವೇಶನದ ಮೇಲುಸ್ತುವಾರಿ ನೋಡಿಕೊಳ್ಳಲು ಐಎಎಸ್‌ ಅಧಿಕಾರಿ ಉಜ್ವಲ್‌ ಕುಮಾರ್‌ ಘೋಷ್‌ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಸಭೆ ನಡೆಸಿ ವೆಚ್ಚ ಕಡಿತಕ್ಕೆ ಸೂಚನೆ ನೀಡಿದ್ದಾರೆ.

‘ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆ ಆಗಬೇಕು ಎಂಬುದು ವಿಧಾನಸಭಾಧ್ಯಕ್ಷರ ಆಶಯವಾಗಿದ್ದು, ಅದರಂತೆ ಈ ಬಾರಿಯ ವಿಧಾನಮಂಡಲದ ಅಧಿವೇಶನದ ವೆಚ್ಚಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಿದ್ದೇವೆ. ಖರ್ಚು– ವೆಚ್ಚಗಳ ಲೆಕ್ಕಗಳನ್ನು ಪಾರದರ್ಶಕವಾಗಿ ಇಡಲಿದ್ದೇವೆ’ ಎಂದು ಉಜ್ವಲ್ ಕುಮಾರ್‌ ಘೋಷ್ ತಿಳಿಸಿದರು.

‘ಸುವರ್ಣ ಸೌಧದ ಆವರಣ ಸೇರಿದಂತೆ ವಸತಿ ಸೌಲಭ್ಯ ಕಲ್ಪಿಸಿರುವ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯ ಕಲ್ಪಿಸಲಿದ್ದೇವೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಿದ್ದೇವೆ’ ಎಂದರು.

ವಸತಿ, ಊಟ, ಸಾರಿಗೆ ವ್ಯವಸ್ಥೆ
ಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಕೂಪನ್‌ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ. ಸುವರ್ಣಸೌಧದಲ್ಲಿ ಎಷ್ಟು ಮಂದಿ ಊಟ ಮಾಡುತ್ತಾರೆ ಎಂಬ ಕುರಿತು ಹೋಟೆಲ್‌ ಮಾಲೀಕರು ಹಾಗೂ ಜಿಲ್ಲಾಡಳಿತದ ಅಂಕಿ ಅಂಶಗಳಿಗೆ ತಾಳೆ ಆಗುತ್ತಿಲ್ಲ. ವಾಹನಗಳ ವಿಷಯದಲ್ಲೂ ಹೀಗೆ ಆಗುತ್ತಿದೆ. ಕೂಪನ್‌ ವ್ಯವಸ್ಥೆ ಜಾರಿಗೆ ತಂದರೆ ಹಣದ ದುರುಪಯೋಗವನ್ನು ತಡೆಗಟ್ಟಬಹುದಾಗಿದೆ. ಇದಕ್ಕಾಗಿ ವಿಶೇಷ ಕಾರ್ಯವಿಧಾನ ರೂಪಿಸಲಾಗಿದೆ. ನಾನಾ ಸೇವೆಗಳಿಗೆ ಆನ್‌ಲೈನ್‌ ಮೂಲಕ ಬಿಲ್‌ ಪಾವತಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಸತಿ ಹಾಗೂ ಊಟದ ದರವನ್ನು ಘೋಷ್‌ ನೇತೃತ್ವದ ಅಧಿಕಾರಿಗಳ ತಂಡವೇ ನಿಗದಿ ಮಾಡಲಿದೆ. ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ತಜ್ಞ ವೈದ್ಯರು ಸೇರಿದಂತೆ 200 ವೈದ್ಯಕೀಯ ಸಿಬ್ಬಂದಿ ನಿಯೋಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.

ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಬೆಳಗಾವಿಯಲ್ಲೇ ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ 58 ಹೋಟೆಲ್‌ ಹಾಗೂ ಲಾಡ್ಜ್‌ಗಳಲ್ಲಿ 1450 ರೂಂ ಬುಕ್‌ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

***

ವೆಚ್ಚ ಎಷ್ಟು

ವರ್ಷ; ವೆಚ್ಚ (₹ಕೋಟಿಗಳಲ್ಲಿ)

2015; 8.2

2016; 18.7

2017; 31

***

ಯಾವುದೇ ಖರೀದಿ, ಸೇವೆ ಪಡೆಯುವಾಗ ಗುಣಮಟ್ಟ, ಪ್ರಮಾಣ,ದರಗಳ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ನ್ಯಾಯಸಮ್ಮತ ದರ ನಿಗದಿಪಡಿಸುತ್ತೇವೆ
-ಉಜ್ವಲ್‌ ಕುಮಾರ್‌ ಘೋಷ್‌ ,ಮೇಲುಸ್ತುವಾರಿ ವಿಶೇಷ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು