ಶುಕ್ರವಾರ, ಏಪ್ರಿಲ್ 23, 2021
22 °C

ಆಸೆಯ ತೀವ್ರತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರಮಾಡುತ್ತಿದ್ದಾಗ ನಾಲ್ಕು ಜನ ಬ್ರಾಹ್ಮಣ ಕುಮಾರರು ಪಬ್ಬಜಿತರಾಗಿ ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದರು. ಅವರಲ್ಲಿ ಕಿರಿಯ ಸಹೋದರ ಸತ್ತು ಶಕ್ರದೇವತೆಯಾದ.

ಒಂದು ದಿನ ಶಕ್ರದೇವತೆ ಬಂದು ಹಿರಿಯ ತಪಸ್ವಿ ಅಣ್ಣನಿಗೆ ಕೈಮುಗಿದು, ‘ಭಂತೇ ತಮಗೇನಾದರೂ ಬೇಕೇ?’ ಎಂದು ಕೇಳಿದ. ತಮ್ಮ ತಪಸ್ವಿ ಹೇಳಿದ, ‘ನನಗೆ ತಪಸ್ಸಿಗೆ ಬೆಂಕಿ ಬೇಕಾಗುತ್ತದೆ. ಅದಕ್ಕೆ ವ್ಯವಸ್ಥೆ ಮಾಡು’ ಎಂದ. ಶಕ್ರ ಚೂರಿಯನ್ನು ಮಂತ್ರಿಸಿ ಕೊಟ್ಟ. ‘ಇದು ಮಾಂತ್ರಿಕ ಚೂರಿ. ಅದು ಹೇಳಿದ್ದನ್ನು ಕೇಳುತ್ತದೆ. ಇದಕ್ಕೆ, ನನಗೆ ಕಟ್ಟಿಗೆಯನ್ನು ಉಜ್ಜಿ ಬೆಂಕಿ ಮಾಡಿ ತಾ’ ಎಂದು ಹೇಳಿದರೆ ಸಾಕು ಅದೇ ಬೆಂಕಿ ಮಾಡಿ ತಂದುಕೊಡುವುದು’ ಎಂದು ಹೇಳಿ ಅದನ್ನು ಕೊಟ್ಟ.

ನಂತರ ಎರಡನೆಯ ತಪಸ್ವಿಯ ಕಡೆಗೆ ಹೋಗಿ ‘ನಿನಗೇನು ಬೇಕು?’ ಎಂದು ಕೇಳಿದ. ಆ ತಪಸ್ವಿ, ‘ನನ್ನ ಪರ್ಣಕುಟಿ ಇರುವುದು ಆನೆಗಳ ಹಾದಿಯಲ್ಲಿ ಅವುಗಳಿಂದ ತಪಸ್ಸಿಗೆ ತೊಂದರೆಯಾಗುತ್ತಿದೆ’ ಎಂದ. ಆಗ ಶಕ್ರ ಒಂದು ಢೋಲನ್ನು ಮಂತ್ರಿಸಿ ಕೊಟ್ಟ, ‘ಈ ಡೋಲನ್ನು ಒಂದು ಕಡೆಯಿಂದ ಬಾರಿಸಿದರೆ ಆನೆಗಳು ಓಡಿ ಹೋಗುವವು. ಇನ್ನೊಂದು ಕಡೆಯಿಂದ ಬಾರಿಸಿದರೆ ಅವೇ ಆನೆಗಳು ಚತುರಂಗ ಸೇನೆಯನ್ನು ಕರೆದುಕೊಂಡು ಬರುವವು’ ಎಂದು ಹೇಳಿ ಢೋಲನ್ನು ಕೊಟ್ಟ. ಮೂರನೆಯವನ ಬಳಿಗೆ ಬಂದು ‘ನಿನಗೇನು ಬೇಕು?’ ಎಂದು ಕೇಳಿದ. ಆತ, ‘ನನಗೆ ಕುಡಿಯುವುದಕ್ಕೆ ಆಗಾಗ ಶುದ್ಧ ನೀರು ಬೇಕು’ ಎಂದ. ಶಕ್ರ ಅವನಿಗೊಂದು ಮಡಕೆ ಕೊಟ್ಟು. ‘ಇದನ್ನು ಬಗ್ಗಿಸಿದಾಗಲೆಲ್ಲ ನಿನಗೆ ಶುದ್ಧ ನೀರು ದೊರೆಯುತ್ತದೆ. ಅದನ್ನು ಮಗುಚಿ ಹಾಕಿದರೆ ನದಿಯ ಪ್ರವಾಹವೇ ಹರಿದು, ನಿನಗೆ ರಾಜ್ಯವನ್ನೇ ತಂದುಕೊಡುವುದು’ ಎಂದು ಹೇಳಿ ಮರೆಯಾದ.

ಈ ಸಮಯದಲ್ಲಿ ಒಂದು ಹಂದಿ ಹಾಳಾದ ಊರಿನಲ್ಲಿ ಸುತ್ತುತ್ತಿದ್ದಾಗ ಅದಕ್ಕೊಂದು ದಿವ್ಯಮಣಿ ದೊರಕಿತು. ಅದನ್ನು ಬಾಯಿಯಲ್ಲಿ ಹಿಡಿದುಕೊಂಡಾಗ ಅದರ ಮಹಿಮೆಯಿಂದ ಆಕಾಶದಲ್ಲಿ ಹಾರುತ್ತ ಸಮುದ್ರ ಮಧ್ಯದ ದ್ವೀಪದಲ್ಲಿ ಒಂದು ಅತ್ತಿಯ ಮರದ ಕೆಳಗೆ ಬಂದು ಇಳಿಯಿತು. ಅದೇ ಸಮಯದಲ್ಲಿ ಹತ್ತಿರದಲ್ಲಿ ಒಂದು ನೌಕೆ ಅಪಘಾತಕ್ಕೀಡಾಗಿ ಒಡೆದಾಗ ಒಬ್ಬ ಮನುಷ್ಯ ಈಜುತ್ತ ಈ ದ್ವೀಪಕ್ಕೆ ಬಂದ. ಮಲಗಿದ್ದ ಹಂದಿಯ ಪಕ್ಕದಲ್ಲಿದ್ದ ಮಣಿಯನ್ನು ಕಂಡು ಎತ್ತಿಕೊಂಡ. ಅದರ ಪ್ರಭಾವದಿಂದ ಆಕಾಶದಲ್ಲಿ ಹಾರುತ್ತ ಈ ತಪಸ್ವಿಗಳಿದ್ದ ಕಾಡಿನ ಕಡೆಗೆ ಬಂದ. ಮೊದಲನೆಯವನ ಮಾಂತ್ರಿಕ ಚೂರಿಯನ್ನು ಕಂಡ.

‘ನನಗೆ ಆ ಚೂರಿಯನ್ನು ಕೊಟ್ಟರೆ ಮಣಿಯನ್ನು ಕೊಡುತ್ತೇನೆ’ ಎಂದು ಆಸೆ ತೋರಿದ. ಅದಕ್ಕೆ ಬಲಿಯಾದ ತಪಸ್ವಿ ಚೂರಿಯನ್ನು ಕೊಟ್ಟು ಮಣಿಯನ್ನು ಪಡೆದ. ತಪಸ್ವಿ ಮಣಿಯನ್ನು ಬಳಸುವ ಮೊದಲೇ ಈ ದುಷ್ಟ ಮನುಷ್ಯ ಚೂರಿಯನ್ನು ಉಜ್ಜಿ, ‘ಆ ತಪಸ್ವಿಯ ತಲೆ ಕತ್ತರಿಸಿ, ನನ್ನ ಮಣಿಯನ್ನು ಮರಳಿ ತಾ’ ಎಂದ. ಚೂರಿ ಹಾಗೆಯೇ ಮಾಡಿತು. ಇದೇ ರೀತಿ ಎರಡನೆಯ ತಪಸ್ವಿಯ ಕಡೆಗೆ ಹೋಗಿ ಅವನ ಢೋಲನ್ನು ಪಡೆದು, ಚೂರಿಯಿಂದ ಅವನನ್ನು ಕೊಲ್ಲಿಸಿ ಬಿಟ್ಟ. ಮೂರನೆಯವನ ಬಳಿಗೆ ಹೋಗಿ ಆಸೆ ತೋರಿಸಿ ಮಡಕೆಯನ್ನು ಪಡೆದ. ನಂತರ ಚೂರಿಗೆ ಆಜ್ಞೆ ಮಾಡಿ ಅವನನ್ನೂ ಕೊಲ್ಲಿಸಿದ. ಈಗ ಅವನ ಬಳಿ ಹಂದಿಯಿಂದ ಪಡೆದ ದಿವ್ಯಮಣಿ, ತಪಸ್ವಿಗಳಿಂದ ಪಡೆದ ಚೂರಿ, ಢೋಲು ಮತ್ತು ಮಡಕೆಗಳಿದ್ದವು. ಅವನು ಅಹಂಕಾರದಿಂದ ಮತ್ತನಾಗಿ ತನ್ನನ್ನು ಸೋಲಿಸುವವರು ಇನ್ನಾರೂ ಇರಲು ಸಾಧ್ಯವಿಲ್ಲವೆಂದು ಭಾವಿಸಿ ರಾಜನಿಗೆ ಹೀಗೊಂದು ಪತ್ರ ಬರೆದ, ‘ನೀನು ನನಗೆ ಶರಣಾಗಿ ರಾಜ್ಯವನ್ನು ಒಪ್ಪಿಸು ಇಲ್ಲವಾದರೆ ನಿನ್ನನ್ನು ನಾಶಮಾಡಿಬಿಡುತ್ತೇನೆ’.

ಈ ವಿಷಯ ಶಕ್ರನಿಗೆ ತಲುಪಿತು. ತಪಸ್ವಿಗೆ ಅನುಕೂಲವಾಗಲೆಂದು ಕೊಟ್ಟ ವಸ್ತುಗಳು ಈ ದುಷ್ಟನ ಕೈ ಸೇರಿವೆ. ಆದ್ದರಿಂದ ಅವುಗಳ ಶಕ್ತಿ ಕರಗಿಹೋಗಲಿ ಮತ್ತು ಆ ಚೂರಿ ಅವನನ್ನು ಕೊಂದು ಮರೆಯಾಗಲಿ ಎಂದು ಆಜ್ಞೆ ಮಾಡಿದ. ಆ ಚೂರಿ ತನ್ನ ಕೆಲಸ ಮಾಡಿತು.

ಆಸೆ ತಂದ ಅನಾಹುತಗಳೆಷ್ಟು? ಮಣಿಗಾಗಿ ಆಸೆ ಪಟ್ಟು ಹಂದಿ ದ್ವೀಪದಲ್ಲಿ ಒಂಟಿಯಾಗಿ ಸತ್ತು ಹೋಯಿತು. ತಪಸ್ವಿಗಳು ಮಣಿಗಾಗಿ ಆಸೆಪಟ್ಟು ತಮ್ಮ ತಪಸ್ಸನ್ನು, ಪಡೆದ ವಸ್ತುಗಳನ್ನು, ಜೀವಗಳನ್ನು ಕಳೆದುಕೊಂಡರು. ದುಷ್ಟ ಮನುಷ್ಯನೂ ಪ್ರಾಣಕ್ಕೆ ಎರವಾದ. ಅದಕ್ಕೇ ಬುದ್ಧ ಹೇಳಿದ ‘ಆಸೆಯೇ ಸರ್ವದುಃಖಕ್ಕೆ ಕಾರಣ’.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.