ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಪ್ಯಾಕೇಜ್ ಅತ್ಯುತ್ತಮ ಆರ್ಥಿಕ ಪ್ಯಾಕೇಜ್‌: ರಮೇಶ್ ಜಾರಕಿಹೊಳಿ

ಸುತ್ತೂರು ಮಠ, ಆಶ್ರಮ, ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ; ಸಾವರ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ
Last Updated 28 ಮೇ 2020, 13:14 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ ಸಂಕಷ್ಟದಲ್ಲಿ ಸಿಲುಕಿರುವ ದೇಶದ ಜನರ ಪುನಶ್ಚೇತನಕ್ಕಾಗಿ ಪ್ರಧಾನಿ ಮೋದಿ ಘೋಷಿಸಿರುವ ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಅತ್ಯುತ್ತಮ ಘೋಷಣೆಯಾಗಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಗುರುವಾರ ಇಲ್ಲಿ ತಿಳಿಸಿದರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂಲಕ ಜಲಸಂಪನ್ಮೂಲ ಇಲಾಖೆಗೆ ಹೆಚ್ಚಿನ ಅನುದಾನ ನಿಗದಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ಹೇಳಿದರು.

‘ಅಂತರ್ಜಲ ಮಟ್ಟ ಹೆಚ್ಚಿಸಲು ರೈತರು ತುಂತುರು ನೀರಾವರಿ ಮೂಲಕ ವ್ಯವಸಾಯ ಮಾಡುವುದು ಒಳ್ಳೆಯದು. ಇಲಾಖೆಯೂ ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು’ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

ಇದೇ ವೇಳೆ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಕೌಶಲ ಅಭಿವೃದ್ಧಿ ಪಡಿಸುವ ಎಜು ಕೌಶಲ ಆ್ಯಪ್‌ ಅನ್ನು ರಮೇಶ ಜಾರಕಿಹೊಳಿ ಬಿಡುಗಡೆ ಮಾಡಿದರು. ಸಂಸದ ಪ್ರತಾಪ ಸಿಂಹ ಸೇರಿದಂತೆ, ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಬೆಟಸೂರಮಠ, ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್ ಮತ್ತಿತರರಿದ್ದರು.

ಪುಷ್ಪನಮನ: ಶಿವರಾಂಪೇಟೆಯ ತ್ರಿಪುರ ಭೈರವಿ ಮಠದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವರು, ಆಯೋಜನೆಗೊಂಡಿದ್ದ ವಿ.ಡಿ.ಸಾವರ್ಕರ್‌ ಜಯಂತಿಯಲ್ಲಿ ಭಾಗಿಯಾದರು. ಸಾವರ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜಯಂತಿಗೆ ಚಾಲನೆ ನೀಡಿದರು.ಶಾಸಕ ಎಲ್.ನಾಗೇಂದ್ರ ಮತ್ತಿತರರು ಸಚಿವರ ಜತೆಯಲ್ಲಿದ್ದರು.

ಆಶ್ರಮಕ್ಕೆ ಭೇಟಿ: ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮೀಜಿಯ ಆಶೀರ್ವಾದ ಪಡೆದರು. ಕೆಲ ಹೊತ್ತು ಚರ್ಚಿಸಿದರು.

ಮಾಧವಕೃಪ: ಮೈಸೂರಿನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮಾಧವ ಕೃಪಗೆ ಭೇಟಿ ನೀಡಿ, ಸಂಘದ ಪ್ರಮುಖರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಬಿಜೆಪಿ ಕಚೇರಿಗೂ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT