ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನ ಸಂಕಷ್ಟದ ಮಧ್ಯೆ ಬಿಜೆಪಿ ಅತೃಪ್ತರ ಭೋಜನ ಕೂಟ

ಬಿಎಸ್‌ವೈ ಮೇಲೆ ಅಸಮಾಧಾನ; ಉಮೇಶ್‌ ಕತ್ತಿ ನೇತೃತ್ವ
Last Updated 28 ಮೇ 2020, 17:43 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಂಕಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿರ್ವಹಣೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆವರು ಹರಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಗುರುವಾರ ರಾತ್ರಿ ತಮ್ಮ ಆಪ್ತ ಶಾಸಕರ ಸಭೆ ಜತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಹೊರವಲಯದಲ್ಲಿ ಯಲಹಂಕ ಬಳಿ ರೆಸಾರ್ಟ್‌ವೊಂದರಲ್ಲಿ ನಡೆದ ಭೋಜನ ಕೂಟದಲ್ಲಿ 20 ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದು, ಕೆಲವು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೆಲವು ಶಾಸಕರು ಸರ್ಕಾರದಲ್ಲಿ ತಮ್ಮ ಕ್ಷೇತ್ರಗಳ ಕೆಲಸ ಆಗುತ್ತಿಲ್ಲ. ಯಡಿಯೂರಪ್ಪ ಅವರ ಮನೆಗೆ ಹೋದರೆ ಅವರು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಆರ್ಥಿಕ ಇಲಾಖೆಗೆ ಹೋದರೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಕೆಲವು ಶಾಸಕರಂತೂ ಏರಿದ ಧ್ವನಿಯಲ್ಲಿ ಮಾತನಾಡಿದರೆ, ಇನ್ನು ಕೆಲವರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ‘ನಾವು ಯಾರೂ ಗುಲಾಮಗಿರಿ ಮಾಡುತ್ತಿಲ್ಲ. ಸರ್ಕಾರ ಕೋವಿಡ್‌ ಪರಿಸ್ಥಿತಿಯನ್ನೂ ಸರಿಯಾಗಿ ನಿಭಾಯಿಸುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.

ಇನ್ನೂ ಕೆಲವು ಶಾಸಕರು ಮಾತನಾಡಿ, ‘ಈ ರೀತಿ ವರ್ತಿಸುವುದು ಸರಿಯಲ್ಲ. ಬಹಳ ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದ್ದೇವೆ. ಒಂದರ ಹಿಂದೆ ಮತ್ತೊಂದು ಕಷ್ಟಗಳ ಸರಮಾಲೆ ಬಂದಿದೆ. ಸಮಸ್ಯೆಗಳೇನೇ ಇದ್ದರೂ ಒಟ್ಟಿಗೆ ಹೋಗಿ ಮುಖ್ಯಮಂತ್ರಿ ಜತೆ ಮಾತನಾಡೋಣ’ ಎಂದು ಬುದ್ಧಿ ಮಾತು ಹೇಳಿದರೆಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಉಮೇಶ ಕತ್ತಿಯವರ ಸಹೋದರ ರಮೇಶ್‌ ಕತ್ತಿ ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ಆಯಿತು. ಮುಂದಿನ ವಾರ ಮತ್ತೊ‌ಮ್ಮೆ ಚರ್ಚೆ ನಡೆಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ. ಸಭೆಯಲ್ಲಿ ಉತ್ತರಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಶಾಸಕರು ಭಾಗವಹಿಸಿದ್ದರು.

ಸಚಿವ ಸ್ಥಾನ ಸಿಗದೇ ಹತಾಶರಾಗಿರುವ ಉಮೇಶ್‌ಕತ್ತಿಯವರು, ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಲು ಎರಡನೇ ಸಭೆ ನಡೆಸಿದ್ದಾರೆ. ಆರ್ಥಿಕ ಹಿಂಜರಿತ, ಕೋವಿಡ ಸಂಕಟ ಮಧ್ಯೆ ಹಿರಿಯ ಶಾಸಕರು ಸರ್ಕಾರದ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT