ಬುಧವಾರ, ಫೆಬ್ರವರಿ 26, 2020
19 °C

ಹಿರಿತನಕ್ಕೆ ಸಿಗದ ಗೌರವ: ಬಿಜೆಪಿ ಶಾಸಕರಲ್ಲಿ ಮುಂದುವರಿದ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶ ಮುಂದುವರಿದಿದ್ದು, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮತ್ತು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದಲ್ಲಿ ದಿನದಿಂದ ದಿನಕ್ಕೆ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಮೂಲ ಬಿಜೆಪಿಯವರಿಗೆ ಆದ್ಯತೆ ನೀಡಬೇಕು ಎಂಬ ಒತ್ತಡ ಹೆಚ್ಚುತ್ತಿದೆ.

‘ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಯ ಶಾಸಕರನ್ನು ಕಡೆಗಣಿಸಲಾಗಿದೆ. ನಾನು ಐದು ಬಾರಿ ಗೆದ್ದು ಶಾಸಕನಾಗಿದ್ದರೂ ಹಿರಿತನಕ್ಕೆ ಗೌರವ ನೀಡಿಲ್ಲ’ ಎಂದು ಮಡಿಕೇರಿಯಲ್ಲಿ ಅಪ್ಪಚ್ಚು ರಂಜನ್‌ ಅಸಮಾಧಾನ ಹೊರಹಾಕಿದ್ದಾರೆ. ಮುಂದಿನ ವಿಸ್ತರಣೆಯಲ್ಲಿ ತಪ್ಪು ಸರಿಪಡಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಉಳಿದವರು ಮುಂದಿನ ನಿರ್ಧಾರದ ಕುರಿತು ಚಿಂತಿಸಬೇಕಾದೀತು ಎಂದರು.

‘ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಶಾಸಕರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ಕರಾವಳಿಗೆ ಮಂತ್ರಿ ಸ್ಥಾನ ನೀಡಲಿ: ‘ಕರಾವಳಿ ಜಿಲ್ಲೆಗಳ ಜನತೆ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ 13 ಕ್ಷೇತ್ರಗಳಲ್ಲಿ ಬಿಜೆಪಿ 12 ಗೆದ್ದಿದೆ. ಇಷ್ಟು ದೊಡ್ಡ ಗೆಲುವು ನೀಡಿರುವ ಈ ಜಿಲ್ಲೆಗಳಿಗೆ ನ್ಯಾಯ ಸಿಗಬೇಕು’ ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

‘ವಿಜಯೇಂದ್ರ ನಾಯಕತ್ವ ಬೇಕು’ 

ಬಿ.ವೈ. ವಿಜಯೇಂದ್ರ ಪ್ರಭಾವಿ ಯುವ ನಾಯಕರಾಗಿದ್ದು, ರಾಜ್ಯದ ಜನರು ಅವರ ನಾಯಕತ್ವವನ್ನೇ ಬಯಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

‘ಸರ್ಕಾರದಲ್ಲಿ ಮತ್ತು ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿಲ್ಲ. ಅಧಿಕಾರ ದುರುಪಯೋಗ ಮಾಡುತ್ತಿಲ್ಲ. ಅವರು ನನ್ನ ಸಹೋದರ ಇದ್ದಂತೆ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವುದರಿಂದ ಪಕ್ಷದ ವಿಚಾರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

ಖಾತೆ ಹಂಚಿಕೆ ವಿಳಂಬ?

ಪ್ರಭಾವಿ ಖಾತೆಗಳಿಗೆ ನೂತನ ಸಚಿವರು ಬೇಡಿಕೆ ಮಂಡಿಸಿರುವುದರಿಂದಾಗಿ ಖಾತೆ ಹಂಚಿಕೆ ಶನಿವಾರವೇ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.  ‘ಖಾತೆಗಳನ್ನು ಶನಿವಾರ ಹಂಚಿಕೆ ಮಾಡಲಾಗುವುದು’ ಎಂದು ಯಡಿಯೂರಪ್ಪ ಹೇಳಿದ್ದರು. ಖಾತೆಗಾಗಿ ಪಟ್ಟು ಬಿಗಿಗೊಳ್ಳುತ್ತಿರುವುದರಿಂದಾಗಿ ಹಂಚಿಕೆ ಉಸಾಬರಿಯನ್ನು ವರಿಷ್ಠರ ಹೆಗಲಿಗೆ ಹಾಕಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಶುಕ್ರವಾರವೇ ದೆಹಲಿಗೆ ಹೋಗಿದ್ದ ಬಿ.ವೈ. ವಿಜಯೇಂದ್ರ, ನೂತನ ಸಚಿವರಿಗೆ ಕೊಡಬಹುದಾದ ಖಾತೆಯ ವಿವರ ಇರುವ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಅವರಿಗೆ ತಲುಪಿಸಿ ಬಂದಿದ್ದಾರೆ. ವರಿಷ್ಠರು ಚರ್ಚೆ ನಡೆಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಖಾತೆ ಹಂಚಿಕೆಯಾಗಲಿದೆ. ದೆಹಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅದು ನಡೆಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ. ಖಾತೆ ಹಂಚಿಕೆ ವಿವೇಚನೆಯನ್ನು ಯಡಿಯೂರಪ್ಪನವರಿಗೆ ಬಿಟ್ಟುಕೊಟ್ಟರೆ, ಶನಿವಾರ ಅಥವಾ ಸೋಮವಾರ ಖಾತೆ ಹಂಚಿಕೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು