ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಮಸೂದೆಗೆ ಬಿಜೆಪಿಯಲ್ಲೇ ಭಾರಿ ವಿರೋಧ

ಮಸೂದೆ ಪರಾಮರ್ಶೆಗೆ ಜಂಟಿ ಪರಿಶೀಲನಾ ಸಮಿತಿ ರಚನೆಗೆ ಸರ್ಕಾರ ಒಪ್ಪಿಗೆ
Last Updated 24 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಮೇಯರ್‌, ಸದಸ್ಯರು ಮತ್ತು ಶಾಸಕರ ಅಧಿಕಾರವನ್ನು ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ 2020’ ಕಸಿದುಕೊಳ್ಳುತ್ತದೆ. ಆದ್ದರಿಂದ, ಅದನ್ನು ಹಿಂದಕ್ಕೆ ಪಡೆದು,ಮಸೂದೆಯ ಪರಾಮರ್ಶೆಗೆ ಜಂಟಿ ಪರಿಶೀಲನಾ ಸಮಿತಿ ರಚಿಸಬೇಕೆಂಬ ಆಗ್ರಹಕ್ಕೆ ಸರ್ಕಾರ ಮಣಿದಿದೆ.

ಬೆಂಗಳೂರಿನ ಬಿಜೆಪಿಯ ಸದಸ್ಯರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಸಮಿತಿಗೆ ವಿಧಾನ ಪರಿಷತ್‌ ಸದಸ್ಯರನ್ನೂ ಸೇರಿಸಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿತು.

ಮುಖ್ಯಮಂತ್ರಿಯವರ ಪರವಾಗಿ ಕಂದಾಯ ಸಚಿವ ಆರ್‌.ಅಶೋಕ ಈ ಮಸೂದೆ ಮಂಡಿಸಿ, ’1976 ರಲ್ಲಿ ರಚನೆಯಾದ ಕೆಎಂಸಿ ಕಾಯ್ದೆ ಈಗಲೂ ಜಾರಿಯಲ್ಲಿದೆ. ಬೆಂಗಳೂರು ಜಾಗತಿಕ ಮಟ್ಟದ ನಗರವಾದರೂ ರಾಜ್ಯ ಇತರ ನಗರಗಳ ಕಾಯ್ದೆಯನ್ನೇ ಹೊಂದಿದೆ. ಈಗಿನ ಅಗತ್ಯಕ್ಕೆ ತಕ್ಕಂತೆ ಕಾಯ್ದೆಯನ್ನು ಹೊಂದಬೇಕಾಗಿದೆ‘ ಎಂದು ತಿಳಿಸಿದರು.

ಕಸ ವಿಲೇವಾರಿ, ತೆರಿಗೆ, ದಂಡ ಇತ್ಯಾದಿ ಕೆಎಂಸಿ ಕಾಯ್ದೆಗೆ ಅನುಗುಣವಾಗಿಯೇ ನಡೆಯುತ್ತಿದೆ. ಹೊಸ ಮಸೂದೆಯಲ್ಲಿ 198 ಬದಲಾವಣೆಗಳನ್ನು ಮಾಡಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಸೂದೆ ತರಲಾಗಿದೆ ಎಂದು ಅಶೋಕ ಹೇಳಿದರು.

ಬಿಜೆಪಿ ಅರವಿಂದ ಲಿಂಬಾವಳಿ ಈ ಮಸೂದೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ದಿಢೀರ್‌ ಆಗಿ ಮಸೂದೆ ಮಂಡಿಸಲಾಗಿದೆ. ಈ ಬಗ್ಗೆ ಶಾಸಕರಿಗೆ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಸದನದಲ್ಲಿ ವಿರೋಧ ಪಕ್ಷಗಳೂ ಇಲ್ಲ. ಎಲ್ಲ ಸದಸ್ಯರು ಸಮಗ್ರವಾಗಿ ಚರ್ಚಿಸದೇ ಒಪ್ಪಿಗೆ ನೀಡುವುದಕ್ಕೆ ನನ್ನ ವಿರೋಧವಿದೆ’ ಎಂದರು.

ಮಸೂದೆಯಲ್ಲಿ ಸಾಕಷ್ಟು ಗೊಂದಲದ ಅಂಶಗಳಿವೆ. ವಿರೋಧ ಪಕ್ಷಗಳ ಭಾವನೆಯನ್ನು ಗಣನೆಗೆ ತೆಗೆದುಕೊಳ್ಳದೇ ಅಂಗೀಕಾರ ಮಾಡುವುದು ಸರಿಯಲ್ಲ. ವಿಶೇಷವಾಗಿ ಕಸ ವಿಲೇವಾರಿ ಸಮಸ್ಯೆ, ವಿವಿಧ ಇಲಾಖೆಗಳ ನಡುವಿನ ಹೊಂದಾಣಿಕೆ ಇಲ್ಲದಿರುವುದರಿಂದ ಸಮಗ್ರ ಚರ್ಚೆ ಆಗಬೇಕು. ಆದ್ದರಿಂದ ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಮಸೂದೆ ಉಲ್ಲೇಖಿಸಿರುವ ಅಂಶಗಳಿಂದಾಗಿ ಬೆಂಗಳೂರಿನಲ್ಲಿ ಹೆಚ್ಚಿನ ತೆರಿಗೆ ಸಂಗ್ರಹ ಅನುಕೂಲವಾಗುತ್ತದೆ. ದೆಹಲಿ, ಮುಂಬೈ, ಚೆನ್ನೈನಂತಹ ಮಹಾ ನಗರಗಳಲ್ಲಿ ವಾರ್ಷಿಕ ₹50 ಸಾವಿರ ಕೋಟಿ ತೆರಿಗೆ ಸಂಗ್ರಹಿಸುತ್ತಿದ್ದರೂ, ಬೆಂಗಳೂರಿನಲ್ಲಿ ಕೇವಲ ₹10 ಸಾವಿರ ಕೋಟಿ ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿಯ ಸತೀಶ್‌ ರೆಡ್ಡಿ ತಿಳಿಸಿದರು.

ಬಿಜೆಪಿಯ ಉದಯ ಗರುಡಾಚಾರ್‌, ಎಲ್‌.ಎ. ರವಿಸುಬ್ರಹ್ಮಣ್ಯ, ಕೆ. ಪೂರ್ಣಿಮಾ ಮಸೂದೆ ಹಿಂದಕ್ಕೆ ಪಡೆಯಲು ಆಗ್ರಹಿಸಿದರು.

ಮೇಯರ್‌ಗೆ ಪೂರ್ಣ ಅವಧಿ, ಅಧಿಕಾರಿಗಳಿಗೆ ಹೆಚ್ಚು ಅಧಿಕಾರ

ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂಬ ಬೇಡಿಕೆಗೆ ಪೂರಕವಾಗಿ ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ–2020’ ಅನ್ನು ಮಂಗಳವಾರ ವಿಧಾನಸಭೆಯಲ್ಲಿ ದಿಢೀರ್‌ ಮಂಡಿಸಲಾಯಿತು.

ಮೇಯರ್‌ಗೆ ಪೂರ್ಣ ಅವಧಿ: ಮೇಯರ್‌ ಮತ್ತು ಉಪ ಮೇಯರ್‌ ಅವರನ್ನು ಚುನಾವಣೆ ನಡೆದ ಬಳಿಕ ಮೊದಲ ಸಭೆಯಲ್ಲೇ ಆಯ್ಕೆ ಮಾಡಬೇಕು. ಇವರಿಬ್ಬರ ಅಧಿಕಾರ ಅವಧಿ 5 ವರ್ಷಗಳು.

ಮುಖ್ಯ ಆಯುಕ್ತರು: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯನ್ನು ಮುಖ್ಯ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಿಸುತ್ತದೆ. ಎರಡು ವರ್ಷಗಳಿಗಿಂತ ಹೆಚ್ಚು ಅವಧಿ ಬಿಬಿಎಂಪಿಯಲ್ಲಿ ಇರುವಂತಿಲ್ಲ. ವಲಯ ಆಯಕ್ತರ ಮೇಲ್ವಿಚಾರಣೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಅವರಿಗೆ ನಿರ್ದೇಶನ ನೀಡಬೇಕು. ಮುಖ್ಯ ಆಯುಕ್ತರಿಗಿಂತ ವಲಯ ಆಯುಕ್ತರಿಗೇ ಹೆಚ್ಚಿನ ಅಧಿಕಾರ ಇರುತ್ತದೆ.

ವಲಯ ಆಯುಕ್ತರು: ಒಟ್ಟು 15 ವಲಯಗಳನ್ನು ರಚಿಸಲಾಗುತ್ತದೆ. ಪ್ರತಿಯೊಂದು ವಲಯಕ್ಕೂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಪಾಲಿಕೆ ಜತೆ ಚರ್ಚಿಸಿ, ಸರ್ಕಾರವೇ ಇವರನ್ನು ನೇಮಕ ಮಾಡುತ್ತದೆ.

ಇವರ ಅಧಿಕಾರಗಳೇನು?: ಆಯಾ ವಲಯ ಆಯುಕ್ತರ ವ್ಯಾಪ್ತಿಯ ಆಡಳಿತಕ್ಕೆ ಇವರು ನೋಡಲ್‌ ಅಧಿಕಾರಿ ಆಗಿರುತ್ತಾರೆ. ವಾರ್ಡ್‌ ಸಮಿತಿಗಳು ಮತ್ತು ಏರಿಯಾ ಸಭಾದ ಮೇಲ್ವಿಚಾರಣೆ, ನಿರ್ದೇಶನ ಮತ್ತು ಸಮನ್ವಯದ ಕಾರ್ಯ ನಿರ್ವಹಿಸುತ್ತಾರೆ. ಮೇಯರ್ ಅಥವಾ ಮುಖ್ಯ ಆಯುಕ್ತರು ನೀಡುವ ನಿರ್ದೇಶನಗಳನ್ನೂ ಪಾಲಿಸಬೇಕು.

ವಲಯ ಸಮಿತಿ: ವಲಯ ಸಮಿತಿಗಳ ಸಂಖ್ಯೆ 15 ಮೀರುವಂತಿಲ್ಲ. ಪ್ರತಿ ಮುನ್ಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿ ವಲಯ ಸಮಿತಿ (zonal committee) ಆಗಿರುತ್ತದೆ.ವಲಯ ಆಯುಕ್ತರ ಸಮಿತಿ ಅಧ್ಯಕ್ಷನಾಗಿರುತ್ತಾನೆ. ಈ ಸಮಿತಿಯಲ್ಲಿ ಚುನಾಯಿತ ಪ್ರತಿನಿಧಿಗಳು (ಕೌನ್ಸಿಲರ್‌ಗಳು) ಇರುತ್ತಾರೆ. ಆಯಾ ವಲಯಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ನಡೆಸುವ ಕಾಮಗಾರಿಗಳು, ಅನುಷ್ಠಾನಗೊಳಿಸುವ ಯೋಜನೆಗಳನ್ನು ಕಾರ್ಯಗೊಳಿಸುವ ಅಧಿಕಾರ ಸಮಿತಿಗೆ ಇರುತ್ತದೆ. ಕಸ ನಿರ್ವಹಣೆ, ಹೊಸ ಮೂಲ ಸೌಕರ್ಯ ಕಾರ್ಯಕ್ರಮಗಳ ಪ್ರಕಟ, ಪಾರ್ಕ್‌ ಅಭಿವೃದ್ಧಿ ಮತ್ತಿತ್ತರ ಕಾರ್ಯಗಳನ್ನು ಸಮಿತಿಯೇ ಕೈಗೊಳ್ಳುತ್ತವೆ.

ಸ್ಥಾಯಿ ಸಮಿತಿಗಳು: ಒಟ್ಟು 12 ಸ್ಥಾಯಿ ಸಮಿತಿಗಳಿರುತ್ತವೆ. ಅವುಗಳೆಂದರೆ, ತೆರಿಗೆ ಮತ್ತು ಹಣಕಾಸು, ಸಾರ್ವಜನಿಕ ಆರೋಗ್ಯ, ಮೂಲಸೌಕರ್ಯ, ತ್ಯಾಜ್ಯ, ಮೇಲ್ಮನವಿ, ಆಡಳಿತ ಸುಧಾರಣೆ, ಮಾರುಕಟ್ಟೆಗಳು, ಟೌನ್ ಪ್ಲಾನಿಂಗ್‌, ಪಬ್ಲಿಕ್‌ ವರ್ಕ್ಸ್, ಶಿಕ್ಷಣ, ಸಾಮಾಜಿಕ ನ್ಯಾಯ, ತೋಟಗಾರಿಕೆ.

ವಾರ್ಡ್‌ ಸಮಿತಿ: ಪ್ರತಿಯೊಂದು ಕಾರ್ಪೊರೇಷನ್‌ಗೆ ವಾರ್ಡ್‌ ಸಮಿತಿ ರಚಿಸಲಾಗುತ್ತದೆ. ಆಯಾ ಕಾರ್ಪೊರೇಟರ್‌ ಸಮಿತಿಯ ಅಧ್ಯಕ್ಷನಾಗಿರುತ್ತಾನೆ. ವಿವಿಧ ಕ್ಷೇತ್ರಗಳಿಗೆ ಸೇರಿದ ಗರಿಷ್ಠ 20 ಮಂದಿಯನ್ನು ಸಮಿತಿಗೆ ನಾಮಕರಣ ಮಾಡಬಹುದು. ಈ ಸಮಿತಿಯು ವಾರ್ಡ್‌ನ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು, ವಾರ್ಡ್‌ಗೆ ನಿಗದಿ ಮಾಡಿದ ನಿಧಿಯನ್ನು ಸಮರ್ಪಕವಾಗಿ ಬಳಸುವುದು, ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ. ಎಲ್ಲ ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ವಿವಿಧ ಯೋಜನೆಗಳು ಮತ್ತು ಕಾಮಗಾರಿಗಳಿಗೆ ಹಣಕಾಸು ಹಂಚಿಕೆ ಅಧಿಕಾರವೂ ಸಮಿತಿಗೆ ನೀಡಲಾಗಿದೆ.

ಏರಿಯಾ ಸಭಾ: ಪ್ರತಿ ವಾರ್ಡ್‌ಗಳಲ್ಲೂ ಏರಿಯಾ ಸಭಾವನ್ನು ರಚಿಸಬೇಕು. ಇಂತಹ ವ್ಯವಸ್ಥೆ ದೆಹಲಿಯಲ್ಲಿದೆ. ಏರಿಯಾ ಸಭಾಕ್ಕೆ ಪ್ರತಿನಿಧಿಯನ್ನು ವಲಯ ಸಮಿತಿ ನಾಮಕರಣ ಮಾಡುತ್ತದೆ. ಏರಿಯಾಸಭಾ ತಿಂಗಳಿಗೊಮ್ಮೆ ಸಭೆ ಸೇರಿ ತನ್ನ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾವನೆಗಳನ್ನು ಸಿದ್ಧಪಡಿಡಬೇಕು. ವಿವಿಧ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಇವರಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT