ಸೋಮವಾರ, ಮಾರ್ಚ್ 1, 2021
30 °C
ಬಿಎಂಟಿಸಿಯಿಂದ ಟೆಂಡರ್ ಆಹ್ವಾನ: ನಿರ್ಭಯಾ ಯೋಜನೆಯಡಿ ಕೇಂದ್ರದ ಅನುದಾನ

ಒಂದು ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಒಂದು ಸಾವಿರ ಬಸ್‌ಗಳಲ್ಲಿ ಮತ್ತು 38 ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ಧರಿಸಿದೆ.

ನಿರ್ಭಯಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿರುವ ಅನುದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿರುವ ಬಿಎಂಟಿಸಿ, ₹27 ಕೋಟಿ ಮೊತ್ತದ ಯೋಜನೆ ರೂಪಿಸಿ ಟೆಂಡರ್ ಆಹ್ವಾನಿಸಿದೆ.

ಪ್ರತಿ ಬಸ್‌ನಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಎರಡು ಕ್ಯಾಮೆರಾಗಳು ಬಸ್‌ನಲ್ಲಿ ಪ್ರಯಾಣಿಕರ ಚಲನ–ವಲನಗಳ ಮೇಲೆ ನಿಗಾ ವಹಿಸಲಿವೆ. ಇನ್ನೊಂದು ಕ್ಯಾಮೆರಾ ಹೊರಭಾಗದಲ್ಲಿ ಜನದಟ್ಟಣೆ ಮೇಲೆ ಗಮನ ಇರಿಸಲಿದೆ.

ಬಸ್‌ ಒಳಗಿರುವ ಎರಡು ಕ್ಯಾಮೆರಾಗಳ ಪೈಕಿ ಒಂದು ಕ್ಯಾಮೆರಾದಲ್ಲಿ ಚಾಲಕನ ನಡವಳಿಕೆ ಸಂಪೂರ್ಣವಾಗಿ ಸೆರೆಯಾಗಲಿದೆ. ಚಾಲಕ ತೂಕಡಿಸಿದರೆ, ಧೂಮಪಾನ ಮಾಡಿದರೆ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಎಚ್ಚರಿಕೆ ನೀಡಲು ಮತ್ತು ಮೇಲ್ವಿಚಾರಣೆ ಮಾಡಲು ಇದರಿಂದ ಅನುಕೂಲವಾಗಲಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಸಿಟಿವಿ ಪೂರೈಕೆ ಮಾಡುವ ಕಂಪನಿಯೇ ಅದನ್ನು ಬಸ್‌ಗಳಿಗೆ ಅಳವಡಿಕೆ ಮಾಡಬೇಕು. ಅಲ್ಲದೇ 5 ವರ್ಷಗಳ ನಿರ್ವಹಣೆಯನ್ನೂ ಮಾಡಬೇಕು. 15 ದಿನಗಳ ಕಾಲ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಸಾಮರ್ಥ್ಯ, ಮೊಬೈಲ್‌ ಡಿಜಿಟಲ್‌ ವಿಡಿಯೋ ರೆಕಾರ್ಡರ್‌ (ಎಂಡಿವಿಆರ್‌) ಹೊಂದಿರಬೇಕು. ವೈಫೈ ಮೂಲಕ ದತ್ತಾಂಶ ವರ್ಗಾವಣೆ ಮಾಡುವ ವ್ಯವಸ್ಥೆ ಇರಬೇಕು ಎಂಬುದು ಸೇರಿ ಹಲವು ಷರತ್ತುಗಳನ್ನು ಟೆಂಡರ್‌ನಲ್ಲಿ ವಿಧಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಮೊದಲ ದರ್ಜೆಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಿಯಲ್ ಟೈಂ ಪ್ರೊಸೆಷನಿಂಗ್, ಲೈವ್‌ ಸ್ಟ್ರೀಮಿಂಗ್‌ ತಂತ್ರಜ್ಞಾನವೂ ಇರಬೇಕು ಎಂದು ತಿಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೆ ಎರಡು ತಿಂಗಳಲ್ಲಿ ಎಲ್ಲಾ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಬರಲಿವೆ’ ಎಂದು ತಿಳಿಸಿದರು.

38 ಬಸ್ ನಿಲ್ದಾಣದಲ್ಲಿ ಕ್ಯಾಮೆರಾ: ಕೆಂಪೇಗೌಡ ಬಸ್ ನಿಲ್ದಾಣ, ಬಸವೇಶ್ವರನಗರ, ಯಶವಂತಪುರ, ಕೋರಮಂಗಲ, ಜೀವನ್‌ಬಿಮಾನಗರ, ಶಾಂತಿನಗರ, ಶಿವಾಜಿನಗರ, ವಿಜಯನಗರ, ಯಲಹಂಕ, ಜಯನಗರ, ಬನಶಂಕರಿ, ಬನ್ನೇರುಘಟ್ಟ ಸೇರಿದಂತೆ 15 ಬಸ್ ಟರ್ಮಿನಲ್‌ಗಳು ಮತ್ತು ಚಂದ್ರಾ ಲೇಔಟ್, ಚನ್ನಮ್ಮನಕೆರೆ, ಚಿಕ್ಕಮಾರನಹಳ್ಳಿ, ಹೆಸರಘಟ್ಟ, ಇಸ್ರೊ ಲೇಔಟ್, ಜಿಗಣಿ, ಕಾಡುಗೋಡಿ, ಕಾವಲ್‌ ಬೈರಸಂದ್ರ, ಲಗ್ಗೆರೆ, ಮಲ್ಲೇಶ್ವರ, ನಂದಿನಿ ಲೇಔಟ್, ಉತ್ತರಹಳ್ಳಿ, ಹೊಸಕೆರೆಹಳ್ಳಿ, ವಿದ್ಯಾರಣ್ಯಪುರ ಸೇರಿ 23 ಬಸ್‌ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಅಳವಡಿಕೆಯಾಗಲಿವೆ.

ಬಿಎಂಟಿಸಿಯ 958 ಬಸ್‌ಗಳಲ್ಲಿ ಈ ಹಿಂದೆಯೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ, ಬಸ್‌ ಎಲ್ಲಿ ಸಂಚರಿಸುತ್ತಿದೆ, ಸಂಚಾರ ದಟ್ಟಣೆಯಲ್ಲಿ ಸಿಲುಕಿದೆಯೇ ಎಂಬಿತ್ಯಾದಿಗಳನ್ನು ತಿಳಿಸುವ ರಿಯಲ್ ಟೈಮ್ ಪ್ರೊಸೆಸಿಂಗ್ ವ್ಯವಸ್ಥೆ ಇರಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.

**

ನಿರ್ಭಯಾ ಯೋಜನೆಯಡಿ ಕೇಂದ್ರ ಸರ್ಕಾರ ಒದಗಿಸಿರುವ ಅನುದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಟೆಂಡರ್ ಆಹ್ವಾನಿಸಲಾಗಿದೆ
–ಎನ್.ವಿ. ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು